ಆಡಳಿತದ ಮೇಲೆ ಪರಿಣಾಮ ಬೀರುವ ಪ್ರಕರಣಗಳನ್ನು ಕೆಲವು ನ್ಯಾಯಾಧೀಶರ ಮುಂದೆ ಪಟ್ಟಿ ಮಾಡಿ ಸರ್ಕಾರಕ್ಕೆ ಅನುಕೂಲಕರವಾದಂತಹ ಆದೇಶಗಳನ್ನು ಹೇಗೆ ಹೊರಡಿಸುವಂತೆ ಮಾಡಲಾಗುತ್ತದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಶುಕ್ರವಾರ ವಿಷಾದಿಸಿದರು.
ನ್ಯಾಯವಾದಿಯಾಗಿ ಐವತ್ತು ವರ್ಷ ಪೂರೈಸಿದ ತಮಗಾಗಿ ವಕೀಲರು ಹಮ್ಮಿಕೊಂಡಿದ್ದ ಖಾಸಗಿ ಅಭಿನಂದನಾ ಸಮಾರಂಭವೊಂದರ ನಂತರ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಿಬಲ್ ಅವರು ಜಿ ಎನ್ ಸಾಯಿಬಾಬಾ ಅವರ ಇತ್ತೀಚಿನ ಪ್ರಕರಣವನ್ನು ತಮ್ಮ ಮಾತಿಗೆ ಪೂರಕ ಉದಾಹರಣೆಯಾಗಿ ಪ್ರಸ್ತಾಪಿಸಿದರು.
“ಅಪರೂಪದ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಅಮಾನತುಗೊಳಿಸಲಾಗುತ್ತದೆ. ಆದರೆ ಶನಿವಾರ ವಿಶೇಷ ಕಲಾಪ ನಡೆಸಿ ಖುಲಾಸೆ ಆದೇಶ ಅಮಾನತುಗೊಳಿಸುವುದನ್ನು ನಾನೆಂದೂ ಕೇಳಿಲ್ಲ. ಸುಪ್ರೀಂ ಕೋರ್ಟ್ ತನ್ನ ಬಗ್ಗೆಯೇ ಕಾಳಜಿ ಮಾಡಬೇಕಾಗಿದ್ದು ಇದು ವಿಚಲಿತಗೊಳಿಸುವಂಥದ್ದು” ಎಂದರು. ಕಾರ್ಯಕ್ರಮದಲ್ಲಿ ವಕೀಲೆ ಅಪರ್ಣಾ ಭಟ್ ಮತ್ತಿತರರು ಉಪಸ್ಥಿತರಿದ್ದರು.
ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಅಕ್ಟೋಬರ್ 15, ಶನಿವಾರದಂದು (ಸಾಮಾನ್ಯವಾಗಿ ಅಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವುದಿಲ್ಲ) ವಿಶೇಷ ಕಲಾಪ ನಡೆಸಿ ಮಾವೋವಾದಿ ನಂಟು ಹೊಂದಿದ್ದ ಆರೋಪದಡಿ ಬಂಧಿತರಾಗಿದ್ದ ಜಿ ಎನ್ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅಮಾನತುಗೊಳಿಸಿತ್ತು. ಸೇವೆಯಿಂದ ವಜಾಗೊಳ್ಳುವ ಮುನ್ನ ಸಾಯಿಬಾಬಾ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು.
ಸಿಬಲ್ ಮಾತಿನ ಪ್ರಮುಖಾಂಶಗಳು
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು (CJI) ಪ್ರಕರಣಗಳನ್ನು ಹಂಚಿಕೆ ಮಾಡುವ ರೋಸ್ಟರ್ ಅಧಿಕಾರವನ್ನು ಹೇಗೆ ಚಲಾಯಿಸುತ್ತಾರೆ ಎಂಬುದು ಸಮಸ್ಯೆಯಾಗಿದೆ. ಸಮಸ್ಯೆ ಮಾಸ್ಟರ್ ಆಫ್ ರೋಸ್ಟರ್‌ಗೆ ಸಂಬಂಧಿಸಿದ್ದಾಗಿದೆ. ಸರ್ಕಾರಕ್ಕೆ ಸಂಬಂಧಿಸಿದ ಹೆಚ್ಚಿನ ಪ್ರಕರಣಗಳು ನಿರ್ದಿಷ್ಟ ನ್ಯಾಯಾಧೀಶರ ಬಳಿಗೆ ಹೋಗುತ್ತವೆ. ಅವು ಸ್ವಯಂಚಾಲಿತವಾಗಿ ನಿಯೋಜಿತವಾಗುವುದಿಲ್ಲ. ಹಾಗಾದರೆ ಇದೇಕೆ ನಡೆಯುತ್ತಿದೆ?
ಕಾರ್ಯಾಂಗದ ಮಿತಿಮೀರಿದ ವರ್ತನೆ ಕುರಿತು ವಕೀಲರು ಚಳವಳಿ ಹೂಡುವಂತೆ ಕೋರಿದ ಅವರು ನ್ಯಾಯವಾದಿಗಳು ಭಯದಿಂದ ಹಿಂದೆ ಸರಿಯಬಾರದು ಎಂದರು.
"ನಾನು ಈ ಜನಾಂದೋಲನದ ಭಾಗವಾಗುತ್ತೇನೆ. ನೀವು ಮೌಂಟ್ ಎವರೆಸ್ಟ್ ಏರಲು ಹೋದಾಗ ನಿಮಗೆ ಹೆದರಿಕೆಯಾಗುತ್ತದೆ ಆದರೂ ಹೋಗುತ್ತೀರಿ. ನಮ್ಮ ದೇಶದ ಮೇಲಿನ ಪ್ರೀತಿಯೇ ನಮ್ಮಯ ಭಯವನ್ನು ಹೋಗಲಾಡಿಸುತ್ತದೆ. ಅಲ್ಟಿಮೇಟ್‌ಲೀ ತೋ ಸಿರ್ಫ್ ಜೈಲ್ ಹಿ ಜಾನಾ ಪಡೇಗಾ (ಅಂತಿಮವಾಗಿ ನೀವು ಜೈಲಿಗಷ್ಟೇ ಹೋಗಬೇಕಾಗುತ್ತದೆ ಅಷ್ಟೇ)" ಎಂದು ಸಿಬಲ್ ಹೇಳಿದರು.
ಸಾಂಸ್ಥಿಕ ವೈಫಲ್ಯದಿಂದಾಗಿ ಸರ್ಕಾರ ಎಗ್ಗಿಲ್ಲದೆ ಸಾಗುತ್ತಿದೆ.
2014ರ ಮೊದಲು ಪರಿಸ್ಥಿತಿ ಅಷ್ಟೊಂದು ಕೆಟ್ಟಿರಲಿಲ್ಲ. ಆದರೆ 2014ರ ನಂತರ ಯಾವ ಸಂಸ್ಥೆಯೂ ತಲೆ ಕೆಡಿಸಿಕೊಳ್ಳಲು ಸಿದ್ಧವಿಲ್ಲ. ವಿಶ್ವವಿದ್ಯಾನಿಲಯ ವ್ಯವಸ್ಥೆ ಮತ್ತು ಉಪಕುಲಪತಿ ಸ್ಥಾನ ನೋಡಿ. ನ್ಯಾಯಾಂಗ, ಪೊಲೀಸ್ ಪಡೆ, ಚುನಾವಣಾ ಆಯೋಗ ಏನಾಗುತ್ತಿದೆ ಎಂಬುದನ್ನು ನೋಡಿ. ಮಾಧ್ಯಮಗಳು ಕೆಟ್ಟು ಹೋಗಿವೆ"
ಕಾನೂನು ಯಾವುದೆನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಅದನ್ನು ನಿರ್ವಹಿಸುತ್ತಿರುವ, ಅನುಷ್ಠಾನಗೊಳಿಸುತ್ತಿರುವ ಸಂಸ್ಥೆಯ ವರ್ತನೆ ಮುಖ್ಯವಾಗುತ್ತದೆ.
ಕಾನೂನನ್ನು ದುರುಪಯೋಗಪಡಿಸಿಕೊಂಡಾಗ ನ್ಯಾಯಾಂಗ ಮೌನವಾಗಿದ್ದರೆ, ನೀವೇನು ಮಾಡಲಾಗುತ್ತದೆ?
ವಕೀಲರು ಮೌನವಾಗಿದ್ದಾರೆ. ಅವರು ಈ ವೃತ್ತಿಯನ್ನು ಹಣ ಮಾಡುವ ಒಂದು ವ್ಯವಹಾರವಾಗಿ ಪರಿಗಣಿಸಿದ್ದಾರೆ. ವಕೀಲರು ಭೀತಿಯನ್ನು ಬಿಟ್ಟು ಎದ್ದು ನಿಲ್ಲಬೇಕಿದೆ.
ನಾನು ದೆಹಲಿಯಲ್ಲಿ ವಕೀಲರ ಚಳವಳಿಯನ್ನು ಪ್ರಾರಂಭಿಸುತ್ತೇನೆ. ಅದು ಆಗಲೇಬೇಕಿದೆ, ಎಲ್ಲೋ ಒಂದೆಡೆ ಇದೆಲ್ಲಾ ಶುರುವಾಗಬೇಕಿದೆ.