ಸುದ್ದಿಗಳು

ಕಳವಾದ ಹಸುಗಳನ್ನು ಬಿಟ್ಟು ನೈಜ ಅಪರಾಧಗಳ ಬೆನ್ನತ್ತಿ: ಕರ್ನಾಟಕ ಪೊಲೀಸರ ಕಿವಿ ಹಿಂಡಿದ ಹೈಕೋರ್ಟ್‌

“ನಿಜವಾದ ಅಪರಾಧ ಪ್ರಕರಣವನ್ನು ನೀವು (ಪೊಲೀಸರು) ದಾಖಲಿಸುವುದೇ ಇಲ್ಲ. ಅದಕ್ಕೆ ಜನರು ನೂರು ಬಾರಿ ಠಾಣೆ ಮೆಟ್ಟಿಲೇರಬೇಕು. ಎರಡು ವರ್ಷಗಳ ಹಿಂದೆ ಎರಡು ಹಸು ನಾಪತ್ತೆಯಾಗಿದ್ದಕ್ಕೆ ಪ್ರಕರಣ ದಾಖಲಿಸಿದ್ದೀರಿ” ಎಂದು ಕಿಡಿಕಾರಿದ ಹೈಕೋರ್ಟ್‌.

Bar & Bench

ಎರಡು ಹಸು ಕಳವಾಗಿವೆ ಎಂದು ಪ್ರಕರಣ ದಾಖಲಿಸುವ ಕರ್ನಾಟಕ ಪೊಲೀಸರು ನೈಜ ಆರೋಪದ ಹಿನ್ನೆಲೆಯಲ್ಲಿ ನೂರು ಬಾರಿ ಠಾಣೆಯ ಮೆಟ್ಟಿಲೇರಿದರೂ ಪ್ರಕರಣ ದಾಖಲಿಸುವುದಿಲ್ಲ ಎಂದು ಹೈಕೋರ್ಟ್‌ ಸೋಮವಾರ ಮತ್ತೊಮ್ಮೆ ಕಿಡಿಕಾರಿದೆ.

ಈಚೆಗೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವಾಗ ಭದ್ರತೆ ಕಲ್ಪಿಸುವ ವಿಚಾರ ಪ್ರಸ್ತಾಪವಾದ ನ್ಯಾಯಾಲಯವು ಕರ್ನಾಟಕ ಪೊಲೀಸರು ವೈವಾಹಿಕ ಸಂಬಂಧಿತ ಪ್ರಕರಣಗಳ ಬೆನ್ನುಬಿದ್ದಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಇಂದು, ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಚನ್ನಪಟ್ಟಣ ತಾಲ್ಲೂಕಿನ ಎಂ ಕೆ ದೊಡ್ಡಿಯ ಮಂಗಳಮ್ಮ ಮತ್ತಿತರರು ತಮ್ಮ ವಿರುದ್ಧದ ಕಳವು ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna

ಅರ್ಜಿದಾರರ ಪರ ವಕೀಲ ಎನ್‌ ವಿನೋದ್‌ ಅವರು “ಎರಡು ಹಸು ಕದ್ದಿದ್ದಾರೆ ಎಂಬ 2024ರ ಆರೋಪಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ ತಾಲ್ಲೂಕಿನ ಎಂ ಕೆ ದೊಡ್ಡ ಠಾಣೆಯಲ್ಲಿ 2026ರಲ್ಲಿ ಒಂದೇ ಕುಟುಂಬದ ನಾಲ್ವರ ವಿರುದ್ಧ ಕಳವು ಪ್ರಕರಣ ದಾಖಲಿಸಲಾಗಿದೆ” ಎಂದರು.

ಇದಕ್ಕೆ ಪೀಠವು “ಹಸುಗಳು ನಾಪತ್ತೆ! ಆರೋಪ ಪಟ್ಟಿ ಸಲ್ಲಿಕೆಯಾಗಿದೆಯೇ? ಅದಕ್ಕೂ (ಆರೋಪ ಪಟ್ಟಿ) ಹಾಕಿ ಬಿಡ್ತಾರೆ ಅದಕ್ಕೆ ಕೇಳಿದೆ” ಎಂದ ಪೀಠವು “2024ರಲ್ಲಿ ಎರಡು ಹಸುಗಳು ನಾಪತ್ತೆಯಾಗಿದ್ದು, ಅವು ಪತ್ತೆಯಾಗಿಲ್ಲ ಎಂದು ಇಡೀ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ತನಿಖೆಗೆ ಅನುಮತಿಸಿದರೆ ಇದು ಕಾನೂನಿನ ದುರ್ಬಳಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ತಡೆ ನೀಡಲಾಗಿದೆ” ಎಂದು ಆದೇಶಿಸಿತು.

ವಿಚಾರಣೆಯ ಕೊನೆಯಲ್ಲಿ ನ್ಯಾಯಾಲಯವು “ನೀವು (ರಾಜ್ಯ ಸರ್ಕಾರ) ಹಸುಗಳ ತನಿಖೆ ಮಾಡುವುದನ್ನು ಬಿಡಿ. ನಿಜವಾದ ಅಪರಾಧದ ಹಿಂದೆ ಹೋಗಿ. ಎರಡು ವರ್ಷದ ಹಿಂದೆ ಹಸು ಕಾಣೆಯಾಗಿದೆ ಎಂದ ತಕ್ಷಣ ಅಪರಾಧ ದಾಖಲಿಸುವುದೇ? ಏನು ಬೇಕಾದರೂ ಮಾಡಿ ಬಿಡುತ್ತೀರಿ. ನಿಜವಾದ ಅಪರಾಧ ಪ್ರಕರಣವನ್ನು ನೀವು ದಾಖಲಿಸುವುದೇ ಇಲ್ಲ. ಅದಕ್ಕೆ ಜನರು ನೂರು ಬಾರಿ ಪೊಲೀಸ್‌ ಠಾಣೆ ಮೆಟ್ಟಿಲೇರಬೇಕು. ಎರಡು ವರ್ಷಗಳ ಹಿಂದೆ ಎರಡು ಹಸು ನಾಪತ್ತೆಯಾಗಿದ್ದಕ್ಕೆ ಪ್ರಕರಣ ದಾಖಲಿಸಿದ್ದೀರಿ” ಎಂದು ಕಟುವಾಗಿ ನುಡಿಯಿತು.

ಈಚೆಗೆ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕರ್ನಾಟಕ ಪೊಲೀಸರು ಲಿವ್‌-ಇನ್‌ ಸಂಬಂಧ, ವೈವಾಹಿಕ ಸಂಬಂಧಿತ ಪ್ರಕಣಗಳ ಹಿಂದೆ ಬಿದ್ದಿದ್ದಾರೆಯೇ ವಿನಾ ನೈಜ ಅಪರಾಧಗಳ ತನಿಖೆ ನಡೆಸುತ್ತಿಲ್ಲ ಎಂದು ಕಿಡಿಕಾರಿದ್ದರು.

ಕಾಂತಾರ ಸಿನಿಮಾದ ದೈವಪಾತ್ರಕ್ಕೆ ಅಪಮಾನ ಮಾಡಿದ ಸಂಬಂಧದ ಪ್ರಕರಣ ರದ್ದತಿ ಕೋರಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ರಣವೀರ್‌ ಪರ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು “ರಣವೀರ್‌ ಸಿಂಗ್‌ ಚಾಮುಂಡಿ ಬೆಟ್ಟಕ್ಕೆ ನೀಡಲು ಭದ್ರತೆಯ ಸಮಸ್ಯೆ ಇದೆ” ಎಂದಿದ್ದರು.

ಇದಕ್ಕೆ ಅರ್ಜಿದಾರರ ಪರ ವಕೀಲರು “ಕರ್ನಾಟಕ ಪೊಲೀಸರು ಶಕ್ತಿಯುತವಾಗಿದ್ದು, ರಕ್ಷಣೆ ನೀಡುತ್ತಾರೆ” ಎಂದು ಸಮರ್ಥನೆಗೆ ಮುಂದಾದರು. ಇದಕ್ಕೆ ಪೀಠವು “ಒಂದು ನಿಮಿಷ, ಕರ್ನಾಟಕ ಪೊಲೀಸರು ಎಷ್ಟು ಬಲಶಾಲಿಗಳು ಎಂದರೆ ಅವರು ಲಿವ್‌ ಇನ್‌ ಸಂಬಂಧ, ದಂಪತಿಯ ಹಿಂದೆ ಹೋಗುತ್ತಾರೆ. ನೈಜ ಅಪರಾಧಗಳನ್ನು ಯಾರೂ ತನಿಖೆ ಮಾಡುತ್ತಿಲ್ಲ. ಎಲ್ಲರೂ ಬಿಎನ್‌ಎಸ್‌ ಸೆಕ್ಷನ್‌ 69ರ (ಮದುವೆ ನೆಪದಲ್ಲಿ ಲೈಂಗಿಕ ದುರ್ಬಳಕೆ ಸಂಬಂಧಿತ ಅಪರಾಧಗಳು) ಅಡಿ ಅಪರಾಧಗಳನ್ನು ಮಾತ್ರ ತನಿಖೆ ಮಾಡುತ್ತಾರೆ” ಎಂದು ಕಿಡಿಕಾರಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಕರಣದ ಹಿನ್ನೆಲೆ: 2026ರ ಮಾರ್ಚ್‌ 26ರಂದು ದಾಸಯ್ಯ ಎಂಬವರು 2024ರ ಆಗಸ್ಟ್‌ 18ರಂದು ಮಧ್ಯಾಹ್ನ ತನ್ನ ಎರಡು ಸೀಮೆ ಹಸುಗಳನ್ನು ಮೇಯಲು ಕಟ್ಟಿ ಹಾಕಿ ಮನೆಗೆ ಊಟಕ್ಕೆ ಹೋಗಿದ್ದು, ಆನಂತರ ಬಂದು ನೋಡಿದಾಗ ಅವು ಇರಲಿಲ್ಲ. ಈ ಸಂಬಂಧ ಅಕ್ಕಪಕ್ಕದವರಿಗೆ ವಿಚಾರ ತಿಳಿಸಲಾಗಿತ್ತು. 2026ರ ಮಾರ್ಚ್‌ 25ರಂದು ತೌಟನಹಳ್ಳಿಯ ದಲ್ಲಾಡಿ ಶೇಖರನಿಗೆ ಈ ವಿಚಾರ ತಿಳಿಸಿದ್ದು, ಈತ ತಾನೇ ಆ ಹಸುಗಳನ್ನು ಮಾರಾಟ ಮಾಡಿಸಿದ್ದಾಗಿ ತಿಳಿಸಿದ್ದನು. ಈ ಹಸುಗಳನ್ನು ಮಂಗಳಮ್ಮ, ಚೇತನ್‌, ಚಂದನ್‌ ಮತ್ತು ಸೌಮ್ಯಾ ಎಂಬವರು ಮಾರಿಸಿಕೊಡುವಂತೆ ಕೋರಿದ್ದರು. ಒಂದು ಸಾವಿರ ರೂಪಾಯಿ ಕಮಿಷನ್‌ ಪಡೆದು ಮೈಲನಾಯಕನಹೊಸಹಳ್ಳಿಯ ಹರೀಶನಿಗೆ ಮಾರಾಟ ಮಾಡಿಸಿದ್ದಾಗ ತಿಳಿಸಿದ್ದನು. ಇದನ್ನು ಆಧರಿಸಿ ಎಂ ಕೆ ದೊಡ್ಡಿ ಠಾಣೆಯಲ್ಲಿ ದಾಸಯ್ಯ ದೂರು ನೀಡಿದ್ದರು. ಪೊಲೀಸರು ನಾಲ್ವರ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 302 (2) (ಕಳವು) ಪ್ರಕರಣ ದಾಖಲಿಸಿದ್ದರು.