ಸುದ್ದಿಗಳು

ಪಕ್ಷಾಂತರಿ ಶಾಸಕರ ಅನರ್ಹತೆ: ಬಾಂಬೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಗೋವಾ ಕಾಂಗ್ರೆಸ್ ಅಧ್ಯಕ್ಷ

Bar & Bench

ಕಾಂಗ್ರೆಸ್ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದಿಂದ (ಎಂಜಿಪಿ) 2019 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಪಕ್ಷಾಂತರ ಮಾಡಿದ ಆರೋಪದ ಮೇಲೆ ಗೋವಾ ವಿಧಾನಸಭೆಯ 12 ಸದಸ್ಯರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಂಕರ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅನರ್ಹತೆ ಕೋರಿದ್ದ ಅರ್ಜಿಗಳನ್ನು ಫೆಬ್ರವರಿ 24, 2022 ರಂದು ವಜಾಗೊಳಿಸಿದ್ದ ಗೋವಾದ ಬಾಂಬೆ ಹೈಕೋರ್ಟ್ ಗೋವಾ ಸ್ಪೀಕರ್‌ ನಿರ್ಧಾರವನ್ನು ಎತ್ತಿಹಿಡಿದಿತ್ತು.

ಮೂಲ ರಾಜಕೀಯ ಪಕ್ಷವು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಂಡಾಗ ಅದರ ಶಾಸಕಾಂಗ ಪಕ್ಷದ ಸದಸ್ಯರಿಗೆ ಒದಗಿಸುವ ರಕ್ಷಣೆಯನ್ನು ಈ ಪ್ರಕರಣದಲ್ಲಿ ಬಳಸುವ ಮೂಲಕ ಸ್ಪೀಕರ್ ಅವರು ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದವರಿಗೆ ರಕ್ಷಣೆ ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವಿಶೇಷ ಅನುಮತಿ ಅರ್ಜಿ (ಎಸ್‌ಎಲ್‌ಪಿ) ಹೇಳಿದೆ.

ಈ ಪ್ರಕರಣದಲ್ಲಿ ಸ್ಪೀಕರ್ ಅವರು ಕಾಂಗ್ರೆಸ್‌ನ ಬಿಜೆಪಿಯೊಂದಿಗಿನ "ಸಂಭವನೀಯ ವಿಲೀನ"ವನ್ನು ಪರಿಗಣಿಸಿ ಅದರ ಸದಸ್ಯರಿಗೆ ರಕ್ಷಣೆಯನ್ನು ನೀಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.