ಗೋವಾದ ಕಡಲ ತೀರವೊಂದರ ಬಳಿ 2017ರಲ್ಲಿ ಶವವಾಗಿ ಪತ್ತೆಯಾದ ಬ್ರಿಟಿಷ್- ಐರಿಶ್ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ವಿಧಿಸಬೇಕಾದ ಶಿಕ್ಷೆಯ ಪ್ರಮಾಣವನ್ನು ಗೋವಾದ ಸೆಷನ್ಸ್ ನ್ಯಾಯಾಲಯ ನಾಳೆ (ಫೆ. 17) ಪ್ರಕಟಿಸಲಿದೆ.
ಪ್ರಕರಣದ ಏಕೈಕ ಆರೋಪಿ ವಿಕತ್ ಭಗತ್ ದೋಷಿ ಎಂದು ಮಡಗಾಂವ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕ್ಷಮಾ ಜೋಶಿ ಅವರು ಶುಕ್ರವಾರ ತೀರ್ಪು ನೀಡಿದ್ದರು.
ಬ್ರಿಟಿಷ್-ಐರಿಶ್ ಪ್ರಜೆಯಾದ 28 ವರ್ಷದ ಮೃತ ಸಂತ್ರಸ್ತೆ ಫೆಬ್ರವರಿ 2017ರಲ್ಲಿ ರಜೆ ಹಿನ್ನೆಲೆಯಲ್ಲಿ ಸ್ನೇಹಿತನೊಂದಿಗೆ ಗೋವಾಕ್ಕೆ ಪ್ರವಾಸ ಬಂದಿದ್ದರು.
ದಕ್ಷಿಣ ಗೋವಾದ ಕಣಕೋಣ ಸಮೀಪದ ಪಲೋಲೆಮ್ ಕಡಲತೀರದ ಬಳಿಯ ಹೊಲವೊಂದರಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಆಕೆಯ ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದ್ದು ವಿವಸ್ತ್ರವಾಗಿದ್ದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ದೇಹ ಪತ್ತೆಯಾಗಿತ್ತು. ಹಿಂದಿನ ರಾತ್ರಿ ಬೀಚ್ ಬಳಿ ಅವರು ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು.