ಸುದ್ದಿಗಳು

ನ್ಯಾಯವಾದಿ ಸಮುದಾಯದಿಂದ ಸುಪ್ರೀಂ ಕೋರ್ಟ್‌ಗೆ ನೇರ ನೇಮಕಾತಿ ಮಾಡಲು ಸೂಕ್ತ ಸಮಯ: ನಿವೃತ್ತ ನ್ಯಾ. ರೋಹಿಂಟನ್‌ ನಾರಿಮನ್

"ನಾನು ವಕೀಲ ವರ್ಗದಲ್ಲಿದ್ದಾಗ ಪೀಠದಲ್ಲಿರುವ ಸ್ಥಿತಿ ಹೇಗಿರುತ್ತದೆ ಎನ್ನುವ ಕಲ್ಪನೆ ಇರಲಿಲ್ಲ. ಈ ಭಾಗದಲ್ಲಿರುವುದು (ನ್ಯಾಯಮೂರ್ತಿ ಸ್ಥಾನದಲ್ಲಿ) ವಕೀಲನಾಗಿರುವುದಕ್ಕಿಂತಲೂ ಹೆಚ್ಚು ಕಷ್ಟಕರವಾದದ್ದು” ಎಂದು ವಿವರಿಸಿದ ನ್ಯಾ.ನಾರಿಮನ್‌.

Bar & Bench

ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು ಏಳು ವರ್ಷಗಳ ಕಾಲ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ನ್ಯಾ. ರೋಹಿಂಟನ್‌ ನಾರಿಮನ್‌ ಅವರು ಗುರುವಾರ ನಿವೃತ್ತರಾದರು. ತಮ್ಮ ವಿದಾಯ ಭಾಷಣದಲ್ಲಿ ನ್ಯಾ. ನಾರಿಮನ್‌ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗೆ ವಕೀಲ ವರ್ಗದಿಂದ ಹೆಚ್ಚೆಚ್ಚು ಮಂದಿಯನ್ನು ನೇರವಾಗಿ ನೇಮಕಾತಿ ಮಾಡಬೇಕು ಎನ್ನುವ ಅಂಶಕ್ಕೆ ಒತ್ತು ಕೊಟ್ಟರು.

ವಕೀಲ ಸಮುದಾಯದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ನೇರನೇಮಕಾತಿ ಮಾಡುವ ಅಗತ್ಯವನ್ನು ಹೇಳಿದ ಅವರು, “ಇದು ನೇರನೇಮಕಾತಿ ಮಾಡಲು ಸಕಾಲ. ಸಾಕಷ್ಟು ಗಳಿಸಿದ ನಂತರ ಮತ್ತೆ ಮರಳಿಸಲು ಈ ವೃತ್ತಿಯು ಅವಕಾಶ ಮಾಡಿಕೊಡುತ್ತದೆ,” ಎಂದು ಅಭಿಪ್ರಾಯಪಟ್ಟರು. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳನ್ನು ನೇಮಿಸುವಾಗ ಅರ್ಹತೆಯೊಂದೇ ಪ್ರಮುಖವಾಗಿ ಪರಿಗಣಿಸಲ್ಪಡಬೇಕು ಎಂದು ಇದೇ ವೇಳೆ ಅವರು ಹೇಳಿದರು.

ನ್ಯಾಯಮೂರ್ತಿಯಾಗಿರುವುದು ವಕೀಲರಾಗಿರುವುದಕ್ಕಿಂತಲೂ ಹೆಚ್ಚು ಕಷ್ಟಕರವಾದದ್ದು ಎಂದು ನ್ಯಾ. ನಾರಿಮನ್‌ ತಮ್ಮ ಅನುಭವ ಹಂಚಿಕೊಂಡರು. “ನಾನು ವಕೀಲ ವರ್ಗದಲ್ಲಿದ್ದಾಗ ಈ ಭಾಗದಲ್ಲಿ, ಪೀಠದಲ್ಲಿ ಇರುವ ಸ್ಥಿತಿ ಹೇಗಿರುತ್ತದೆ ಎನ್ನುವ ಬಗ್ಗೆ ಕಲ್ಪನೆ ಇರಲಿಲ್ಲ. ಈ ಭಾಗದಲ್ಲಿರುವುದು (ನ್ಯಾಯಮೂರ್ತಿ ಸ್ಥಾನದಲ್ಲಿ) ವಕೀಲನಾಗಿರುವುದಕ್ಕಿಂತಲೂ ಹೆಚ್ಚು ಕಷ್ಟಕರವಾದದ್ದು. ನೀವು ಹೆಚ್ಚೆಚ್ಚು ಓದಬೇಕಾಗುತ್ತದೆ,” ಎಂದು ಅವರು ಹೇಳಿದರು.

ತಮ್ಮ ಭಾಷಣದಲ್ಲಿ ಅಂತಿಮವಾಗಿ ಅವರು, “ಸುಪ್ರೀಂ ಕೋರ್ಟ್‌ಗೆ ಇಂದೂ, ಮುಂದೂ ಭಗವಂತ ಸದಾ ಅಶೀರ್ವದಿಸಲಿ,” ಎಂದರು.

ನ್ಯಾಯಾಂಗದ ಮುಂದಿನ ಹಾದಿ ಹೇಗಿರಲಿದೆ ಎಂದು ಮಾಧ್ಯಮಗಳು ವಿದಾಯ ಸಮಾರಂಭದ ನಂತರ ಪ್ರಶ್ನಿಸಿದಾಗ “ನಾನು ಆಶಾವಾದಿ” ಎಂದು ಚುಟುಕಾಗಿ ಉತ್ತರಿಸಿದರು.