Google, Karnataka High Court 
ಸುದ್ದಿಗಳು

ಕನ್ನಡವನ್ನು ಹೇವರಿಕೆ ಭಾಷೆ ಎಂದು ತೋರಿಸಿದ್ದಕ್ಕೆ ಕ್ಷಮೆ ಕೋರಿದ ಗೂಗಲ್:‌ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮನವಿ ವಾಪಸ್‌

ಮಾನಹಾನಿ ಉಂಟು ಮಾಡಿದ್ದಕ್ಕೆ ಮತ್ತು ಕನ್ನಡ ಭಾಷೆಯ ಘನತೆಗೆ ಚ್ಯುತಿ ಉಂಟು ಮಾಡಿದ್ದಕ್ಕೆ ₹10 ಕೋಟಿ ಪರಿಹಾರ ನೀಡಬೇಕು ಎಂದು ಅರ್ಜಿದಾರರು ಮನವಿಯಲ್ಲಿ ಕೋರಿದ್ದರು.

Bar & Bench

ಮಾಹಿತಿ ಶೋಧನಾ ಸ್ಥಳದಲ್ಲಿ ಕನ್ನಡವನ್ನು ಹೇವರಿಕೆ ಭಾಷೆ ಎಂದು ತೋರಿಸಿದ್ದ ಜಾಗತಿಕ ದೈತ್ಯ ಟೆಕ್‌ ಕಂಪೆನಿ ಗೂಗಲ್‌ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಕೋರಿದ್ದ ಮನವಿಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ಬುಧವಾರ ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿ ಮಾಡಿದೆ.

ಲೀಗಲ್‌ ಅಟಾರ್ನೀಸ್‌ ಮತ್ತು ಬ್ಯಾರಿಸ್ಟರ್ಸ್‌ ಸಂಸ್ಥೆಯ ಮೂಲಕ ಭಾರತೀಯ ಭ್ರಷ್ಟಾಚಾರ ವಿರೋಧಿ ಮಂಡಳಿ ಟ್ರಸ್‌ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು. ಗೂಗಲ್‌ ಇಂಡಿಯಾ ತನ್ನ ತಪ್ಪಿಗೆ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಲೀಗಲ್‌ ಅಟಾರ್ನೀಸ್‌ ಮನವಿಯನ್ನು ಹಿಂಪಡೆಯಿತು.

“ಕನ್ನಡ ಭಾಷೆಗೆ ಸಂಬಂಧಿಸಿದಂತೆ ನಿಂದಾನಾತ್ಮಕ ಪ್ರತಿಕ್ರಿಯೆ ನೀಡಿದ ಹಿನ್ನೆಲೆಯಲ್ಲಿ ಗೂಗಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಮತ್ತು ಇತರೆ ಪ್ರತಿವಾದಿಗಳ ವಿರುದ್ಧ ಮನವಿ ಸಲ್ಲಿಸಲಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯ ತುಣುಕನ್ನೂ ಅರ್ಜಿದಾರರು ಮನವಿಯೊಂದಿಗೆ ಲಗತ್ತಿಸಿದ್ದರು. ಬಳಿಕ ತಾಣದಲ್ಲಿ ತೋರಿಸಲಾದ ಮಾಹಿತಿಗೆ ಸಂಬಂಧಿಸಿದಂತೆ ಗೂಗಲ್‌ ಕ್ಷಮೆ ಕೋರಿದ್ದು, ಇಂಥ ಪ್ರಕರಣ ಮುಂದೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ಗೂಗಲ್‌ ಭರವಸೆ ನೀಡಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿದೆ.

ತಪ್ಪಾಗಿ ಅರ್ಥೈಸಿಕೊಂಡಿರುವುದು ಮತ್ತು ಜನರ ಭಾವನೆಗಳಿಗೆ ಧಕ್ಕೆಯಾಗಿರುವ ವಿಚಾರವನ್ನು ಗೂಗಲ್‌ ಇಂಡಿಯಾವು ಜೂನ್‌ 3ರಂದು ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಲ್ಲದೇ ಕ್ಷಮೆ ಕೋರಿತ್ತು.

“ಕಾನೂನಿನಲ್ಲಿ ಅವಕಾಶವಿರುವ ಇತರೆ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ಒಳಗೊಂಡು ಮನವಿ ಹಿಂಪಡೆಯಲು ಅರ್ಜಿದಾರರ ಪರ ವಕೀಲರು ಕೋರಿದ್ದಾರೆ. ಹೀಗಾಗಿ, ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ವಿಲೇವಾರಿ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿದೆ.

ಟೆಕ್‌ ದೈತ್ಯ ಗೂಗಲ್‌ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಕಾನೂನು ಕ್ರಮಕೈಗೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಪೀಠವನ್ನು ಮನವಿಯ ಮೂಲಕ ಕೋರಿದ್ದರು.

ಮಾನಹಾನಿ ಉಂಟು ಮಾಡಿದ್ದಕ್ಕೆ ಮತ್ತು ಕನ್ನಡ ಭಾಷೆಯ ಘನತೆಗೆ ಚ್ಯುತಿ ಉಂಟು ಮಾಡಿದ್ದಕ್ಕೆ ₹10 ಕೋಟಿಯನ್ನು ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಸರಿನಲ್ಲಿ ಠೇವಣಿ ಇಡುವ ಮೂಲಕ ಪರಿಹಾರ ನೀಡಬೇಕಯ ಎಂದು ಮನವಿದಾರರು ಕೋರಿದ್ದರು.