ಆಂಡ್ರಾಯ್ಡ್ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಪ್ರಭಾವಿ ಸ್ಥಾನ ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಗೂಗಲ್‌ಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ₹1,337.76 ಕೋಟಿ ಮೊತ್ತದ ದಂಡ ವಿಧಿಸಿ ಹೊರಡಿಸಿದ್ದ ಆದೇಶವವನ್ನು ಎತ್ತಿಹಿಡಿದಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ತೀರ್ಪು ಪ್ರಶ್ನಿಸಿ ಗೂಗಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಸ್ಪರ್ಧಾ-ವಿರೋಧಿ ವರ್ತನೆಯ ಹಾನಿಯನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ಎನ್‌ಸಿಎಲ್‌ಎಟಿ ಸರಿಯಾಗಿ ಕಂಡುಕೊಂಡಿದೆ. ಆದರೆ ತಾನು ಎತ್ತಿ ಹಿಡಿದಿರುವ ಸಿಸಿಐನ ಹಲವು ನಿರ್ದೇಶನಗಳಿಗೆ ಇದನ್ನು ಅದು ಅನ್ವಯಿಸಿಲ್ಲ ಎಂದು ಗೂಗಲ್ ವಕ್ತಾರರು ಹೇಳಿರುವುದು ವರದಿಯಾಗಿದೆ.
ಎನ್‌ಸಿಎಲ್‌ಎಟಿ ಅಧ್ಯಕ್ಷ ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಸದಸ್ಯ (ತಾಂತ್ರಿಕ) ಡಾ ಅಲೋಕ್ ಶ್ರೀವಾಸ್ತವ ಅವರಿದ್ದ ಪೀಠವು ಸಿಸಿಐ ಹೊರಡಿಸಿದ್ದ ನಾಲ್ಕು ಪ್ರಮುಖ ನಿರ್ದೇಶನಗಳನ್ನು ಬದಿಗೆ ಸರಿಸಿತ್ತು.
ಗೂಗಲ್ ನಡೆ ಬಗ್ಗೆ ಸಿಸಿಐ ನಡೆಸಿದ ತನಿಖೆ ಸ್ವಾಭಾವಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸಿಲ್ಲ ಎಂದು ತನ್ನ ವಿವರವಾದ ಆದೇಶದಲ್ಲಿ ಎನ್‌ಸಿಎಲ್‌ಎಟಿ ತಿಳಿಸಿತ್ತು. ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಮೊಬೈಲ್ ಸೇವೆಗಳನ್ನು (ಜಿಎಂಎಸ್) ಸಂಪೂರ್ಣವಾಗಿ ಇನ್‌ಸ್ಟಾಲ್ ಮಾಡುವುದು ನ್ಯಾಯಯುತವಲ್ಲದ ಬಳಕೆಗೆ ಕಾರಣವಾಗುತ್ತದೆ ಎಂದು ಆದೇಶ ಹೇಳಿತ್ತು.
ದಂಡ ವಿಧಿಸುವುದರ ಜೊತೆಗೆ, ಸಿಸಿಐ ಸ್ಪರ್ಧಾತ್ಮಕ-ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸುವುದು ಮತ್ತು ತನ್ನ ಈ ಬಗೆಯ ನಡೆಯನ್ನು ನಿರ್ದಿಷ್ಟ ಸಮಯದೊಳಗೆ ಬದಲಿಸಿಕೊಳ್ಳಲು ಸೇರಿದಂತೆ ಹಲವು ಅಂಶಗಳನ್ನು ಗೂಗಲ್‌ಗೆ ಅದು ನಿರ್ದೇಶಿಸಿತ್ತು.