ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ರೌಡಿ ಮಂಜುನಾಥ ಅಲಿಯಾಸ್ ಹೂ ಮಂಜನನ್ನು ಗೂಂಡಾ ಕಾಯಿದೆ ಅಡಿ ಬಂಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿ ಹಿಡಿದಿದೆ.
ಪುತ್ರ ಹೂ ಮಂಜನನ್ನು ಬಂಧಿಸಲು ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ತಾಯಿ ವರಲಕ್ಷ್ಮಮ್ಮ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ತಾರಾ ವಿತಾಸ್ತಾ ಗಂಜು ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.
“ರಾಜ್ಯ ಸರ್ಕಾರವು ಬಂಧನಕ್ಕೆ ಕಾರಣಗಳನ್ನು ಬಂಧಿತನಿಗೆ ತಿಳಿಸಿದೆ. ಅದರ ಸ್ವೀಕೃತಿ ಪ್ರತಿ, ಬಂಧನ ಆದೇಶ ಹಾಗೂ ಪೂರಕ ದಾಖಲೆಗಳಿಗೆ ಬಂಧಿತನೇ ಸ್ವತಃ ಸಹಿ ಹಾಕಿದ್ದಾನೆ. ಬಂಧನ ಆದೇಶವನ್ನು ಸ್ವೀಕರಿಸುವಾಗ ಫೋಟೊಗಳು ಸಹ ತೆಗೆದುಕೊಳ್ಳಲಾಗಿದೆ. ದಾಖಲಾದ ಎಲ್ಲಾ ಅಪರಾಧ ಪ್ರಕರಣಗಳಲ್ಲಿಯೂ ಬಂಧಿತನು ಜಾಮೀನು ಪಡೆದಿದ್ದಾನೆ ಎಂಬುದು ಬಂಧನ ಆದೇಶ ರದ್ದುಪಡಿಸಲು ಆಧಾರವಾಗುವುದಿಲ್ಲ” ಎಂದು ಪೀಠ ಹೇಳಿದೆ.
“ಬಂಧಿತನ ವಿರುದ್ಧ ಕೊಲೆ, ಕೊಲೆ ಯತ್ನ, ಹಲ್ಲೆ, ಡಕಾಯಿತಿ, ಮನೆಬಾಗಿಲು ಮುರಿದು ಕಳವು ಮತ್ತು ಜೀವ ಬೆದರಿಕೆ ಹಾಕಿದ ಅಪರಾಧ ಸಂಬಂಧ ಪ್ರಕರಣಗಳು ದಾಖಲಾಗಿವೆ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಹೂ ಮಂಜು ತಲೆಮರೆಸಿಕೊಳ್ಳುತ್ತಾನೆ, ಮತ್ತಷ್ಟು ಅಪರಾಧ ಕೃತ್ಯ ಎಸಗುತ್ತಾನೆ. ಜಾಮೀನು ಷರತ್ತು ಉಲ್ಲಂಘಿಸುತ್ತಾನೆ. ಬಂಧಿತನ ಸಹಚರರು ಮತ್ತು ವಿರೋಧಿ ಗುಂಪಿನ ನಡುವೆ ಗ್ಯಾಂಗ್ ವಾರ್ ನಡೆಯುವ ಸಾಧ್ಯತೆಯಿದೆ. ಶಾಂತಿ ಸುವ್ಯವಸ್ಥೆ ಕಾಪಾಡಬೇಕಿರುವುದರಿಂದ ಹೂ ಮಂಜನ ಬಂಧನ ಅಗತ್ಯ ಎಂಬುದಾಗಿ ಸರ್ಕಾರ ಹೊರಡಿಸಿದ ಬಂಧನ ಆದೇಶದಲ್ಲಿ ವಿವರವಾಗಿ ಹೇಳಲಾಗಿದೆ. ಆದ್ದರಿಂದ, ಸರ್ಕಾರದ ಆದೇಶ ಪುರಸ್ಕರಿಸಲಾಗುತ್ತಿದೆ” ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಹೂ ಮಂಜನನ್ನು ಗೂಂಡಾ ಕಾಯಿದೆ ಅಡಿ ಬಂಧನ ಮಾಡಲು 2025ರ ಜುಲೈ 7ರಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಆ ಆದೇಶವನ್ನು ರಾಜ್ಯ ಗೃಹ (ಕಾನೂನು ಮತ್ತು ಸುವ್ಯವಸ್ಥೆ) ಇಲಾಖೆ ಕಾರ್ಯದರ್ಶಿಯು ಜುಲೈ 14ರಂದು ಅನುಮೋದಿಸಿತ್ತು. ಆಗಸ್ಟ್ 19ರಂದು ಮತ್ತು ಆ ಆದೇಶವನ್ನು ಮುಂದುವರಿಸಿತ್ತು. ಈ ಬಂಧನ ಆದೇಶ ರದ್ದುಪಡಿಸುವಂತೆ ಕೋರಿ ಹೂ ಮಂಜನ ತಾಯಿ ವರಲಕ್ಷ್ಮಮ್ಮ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೂ ಮಂಜ ಸದ್ಯ ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ತನ್ನ ಪುತ್ರ ಮಂಜುನಾಥನ್ನು ಬಂಧನ ಮಾಡಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೂಕ್ತ ಕಾರಣ ತಿಳಿಸಿಲ್ಲ. 2024ರ ಡಿಸೆಂಬರ್‌ನಲ್ಲಿ ಕೊನೆಯದಾಗಿ ಮಂಜು ಅಪರಾಧ ಕೃತ್ಯ ಎಸಗಿದ್ದ. ಆದರೆ, ಏಳು ತಿಂಗಳ ನಂತರ ಅಂದರೆ 2025ರ ಜುಲೈನಲ್ಲಿ ಮಂಜುನನ್ನು ಬಂಧಿಸಲಾಗಿದೆ. ಇದರಿಂದ ಮಂಜು ಎಸಗಿದ ಅಪರಾಧಗಳು ಮತ್ತು ಆತನನ್ನು ಬಂಧನದ ನಡುವೆ ನಿಕಟ ಸಂಬಂಧದ ಕೊರತಯಿದೆ. ಇನ್ನೂ ಬಂಧನ ಆದೇಶದಲ್ಲಿ ಹೊಸ ಆರೋಪಗಳಿಲ್ಲ. ತನ್ನ ವಿರುದ್ಧ ದಾಖಲಾಗಿದ್ದ ಎಲ್ಲಾ ಅಪರಾಧ ಕೃತ್ಯಗಳ ಸಂಬಂಧ ಮಂಜು ಜಾಮೀನು ಪಡೆದಿದ್ದಾನೆ. ಆ ಜಾಮೀನು ಆದೇಶವನ್ನು ದುರ್ಬಳಕೆ ಮಾಡಿರುವುದನ್ನು ಸಾಬೀತುಪಡಿಸಲು ಪೊಲೀಸರು ಮತ್ತು ಸರ್ಕಾರ ವಿಫಲವಾಗಿದೆ. ಪೊಲೀಸರು ಯಾವುದೇ ಪ್ರಕರಣದಲ್ಲೂ ಜಾಮೀನು ಮಂಜೂರಾತಿ ಆದೇಶ ರದ್ದತಿಗೆ ಕೋರಿಲ್ಲ. ಹೀಗಾಗಿ, ಸರ್ಕಾರ ಹೊರಡಿಸಿರುವ ಬಂಧನ ಆದೇಶ ರದ್ದುಪಡಿಸಬೇಕು ಎಂದು ವರಲಕ್ಷ್ಮಮ್ಮ ಕೋರಿದ್ದರು.