Election Commission
Election Commission 
ಸುದ್ದಿಗಳು

ಸರ್ಕಾರಿ ಅಧಿಕಾರಿಗಳನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಬಾರದು; ಆಯೋಗದ ಸ್ವಾತಂತ್ರ್ಯದ ಜೊತೆ ರಾಜಿ ಇಲ್ಲ: ಸುಪ್ರೀಂ

Bar & Bench

ಸರ್ಕಾರಿ ಸೇವೆಯಲ್ಲಿ ಇರುವವರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚುನಾವಣಾ ಅಧಿಕಾರಿಗಳನ್ನಾಗಿ ನೇಮಿಸಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು, ಸರ್ಕಾರಿ ಅಧಿಕಾರಿಗೆ ಚುನಾವಣಾ ಆಯುಕ್ತರ ಹೆಚ್ಚುವರಿ ಜವಾಬ್ದಾರಿ ನೀಡುವುದು ಸಂವಿಧಾನದ ಅಣಕ ಎಂದಿದೆ.

ಚುನಾವಣಾ ಆಯೋಗದ ಸ್ವಾತಂತ್ರ್ಯದ ಜೊತೆ ರಾಜಿ ಮಾಡಿಕೊಳ್ಳಲಾಗದು. ರಾಜ್ಯ ಚುನಾವಣಾಧಿಕಾರಿಗಳು ಸ್ವತಂತ್ರ ವ್ಯಕ್ತಿಗಳಾಗಿರಬೇಕು ಎಂದಿರುವ ನ್ಯಾಯಮೂರ್ತಿಗಳಾದ ರೋಹಿಂಟನ್‌ ಫಾಲಿ ನಾರಿಮನ್‌ ಮತ್ತು ಬಿ ಆರ್‌ ಗವಾಯಿ ಹಾಗೂ ಹೃಷಿಕೇಷ್‌ ರಾಯ್‌ ಅವರಿದ್ದ ತ್ರಿಸದಸ್ಯ ಪೀಠವು ಹೈಕೋರ್ಟ್‌ ತೀರ್ಪನ್ನು ಎತ್ತಿ ಹಿಡಿದಿದೆ.

ಸರ್ಕಾರದ ಯಾವುದೇ ಸೇವೆಯಲ್ಲಿರುವ ಯಾವೊಬ್ಬ ವ್ಯಕ್ತಿಯನ್ನೂ ಚುನಾವಣಾ ಅಧಿಕಾರಿಯಾಗಿ ನೇಮಿಸಬಾರದು ಎಂದು ನ್ಯಾಯಾಲಯ ಹೇಳಿದೆ. ಮಡಗಾಂವ್‌, ಮಪುಸಾ, ಮರ್ಮುಗೋವಾ, ಸಂಗ್ವೆಂ ಮತ್ತು ಕ್ಯುಪೆಂ ಪುರಸಭೆಗೆ ಸಂಬಂಧಿಸಿದಂತೆ ಗೋವಾ ಚುನಾವಣಾ ಆಯೋಗ ಹೊರಡಿಸಿದ್ದ ಅಧಿಸೂಚನೆಯನ್ನು ಬದಿಗೆ ಸರಿಸಿದ್ದ ಬಾಂಬೆ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ಸ್ವತಂತ್ರ ರಾಜ್ಯ ಚುನಾವಣಾ ಆಯೋಗ ಹೊಂದುವ ಕುರಿತಾದ ಸಂವಿಧಾನ ಯೋಜನೆಗೆ ಅನುಗುಣವಾಗಿ ನಡೆಯುವಂತೆ ಸರ್ವೋಚ್ಚ ನ್ಯಾಯಾಲಯವು ಎಲ್ಲಾ ರಾಜ್ಯಗಳಿಗೆ ನಿರ್ದೇಶಿಸಿದೆ.

ಕಾನೂನು ಪ್ರಕಾರ ಮಹಿಳೆಯರಿಗೆ ಕ್ಷೇತ್ರಗಳ ಮೀಸಲು ನಿಗದಿಗೊಳಿಸದಿರುವ ಹಿನ್ನೆಲೆಯಲ್ಲಿ ಐದು ಪುರಸಭೆಗಳನ್ನು ಹೊರತುಪಡಿಸಿ ಉಳಿದೆಡೆ ಚುನಾವಣಾ ಪ್ರಕ್ರಿಯೆ ಮುಂದುವರಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ಅನುಮತಿಸಿತ್ತು.

ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿಯು ಗೋವಾದಲ್ಲಿ ಚುನಾವಣಾ ಆಯೋಗದ ಮುಖ್ಯಸ್ಥರಾಗಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ನಿರ್ಧಾರವನ್ನು ಉಲ್ಲಂಘಿಸುವ ಯತ್ನವನ್ನು ಸರ್ಕಾರಿ ಅಧಿಕಾರಿ ಮಾಡಿದ್ದಾರೆ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ.