Delhi Chief Minister, Arvind Kejriwal  
ಸುದ್ದಿಗಳು

ರಾಷ್ಟ್ರ ರಾಜಧಾನಿ ವಲಯ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ ಮಂಡನೆ; ದೆಹಲಿ ಸರ್ಕಾರ ಎಂದರೆ 'ಲೆಫ್ಟಿನೆಂಟ್‌ ಗವರ್ನರ್‌'

ಮಸೂದೆಯು ದೆಹಲಿ ಸರ್ಕಾರವನ್ನು ಲೆಫ್ಟಿನೆಂಟ್‌ ಗವರ್ನರ್‌ ಎಂದು ಮರು ವ್ಯಾಖ್ಯಾನಿಸಿದೆ. ದಿನನಿತ್ಯದ ಆಡಳಿತ ವಿಚಾರಗಳಿಗೆ ಸಂಬಂಧಿಸಿದಂತೆ ನೀತಿ ನಿಯಮ ರೂಪಿಸುವುದಕ್ಕೆ ಚುನಾಯಿತ ಸರ್ಕಾರವನ್ನು ಮಿತಿಗೊಳಿಸುವ ವಿಚಾರವನ್ನೂ ಮಸೂದೆ ಒಳಗೊಂಡಿದೆ.

Bar & Bench

ದೆಹಲಿ ಸರ್ಕಾರವನ್ನು 'ಲೆಫ್ಟಿನೆಂಟ್‌ ಗವರ್ನರ್'‌ ಎಂದು ಮರು ವ್ಯಾಖ್ಯಾನಿಸುವ ಹಾಗೂ ಕೆಲವು ವಿಷಯಗಳಲ್ಲಿ ಮತ್ತು ಆಡಳಿತಾತ್ಮಕ ಕಾರ್ಯಗಳಿಗೆ ಸಂಬಂಧಿಸಿದಂತೆ ಶಾಸಕಾಂಗ ಸಭೆಯ ಅಧಿಕಾರವನ್ನು ಪರಿಣಾಮಕಾರಿಯಾಗಿ ಸೀಮಿತಗೊಳಿಸುವ ರಾಷ್ಟ್ರ ರಾಜಧಾನಿ ವಲಯ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ 2021 ಯನ್ನು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿ ಸರ್ಕಾರ ಕಾಯಿದೆ 1991ಕ್ಕೆ ನೂತನ ಮಸೂದೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಎನ್‌ಸಿಟಿ ದೆಹಲಿ ಸರ್ಕಾರ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಾಡಿರುವ ವ್ಯಾಖ್ಯಾನಕ್ಕೆ ಚಾಲನೆ ನೀಡುವ ಉದ್ದೇಶದಿಂದ ಸರ್ಕಾರ ಕಾಯಿದೆ ಜಾರಿಗೊಳಿಸಲು ಮುಂದಾಗಿದೆ ಎಂದು ಹೇಳಲಾಗಿದೆ.

ಶಾಸಕಾಂಗದ ವ್ಯಾಪ್ತಿಯಿಂದ ಹೊರಗಿರುವ ವಿಷಯಗಳ ಮೇಲೆ ಲೆಫ್ಟಿನೆಂಟ್ ಗವರ್ನರ್ ನಿಯಮಗಳನ್ನು ಮಾಡುವುದನ್ನು ಮಸೂದೆಯು ಖಚಿತಪಡಿಸಿಕೊಂಡಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಸದರಿ ಮಸೂದೆಯು ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಸಾಮರಸ್ಯದ ಸಂಬಂಧವನ್ನು ಉತ್ತೇಜಿಸುತ್ತದೆ ಮತ್ತು ಚುನಾಯಿತ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಜವಾಬ್ದಾರಿಗಳನ್ನು ಮತ್ತಷ್ಟು ವಿಸ್ತೃತವಾಗಿ ವ್ಯಾಖ್ಯಾನಿಸುತ್ತದೆ ಎನ್ನಲಾಗಿದೆ. ರಾಷ್ಟ್ರೀಯ ರಾಜಧಾನಿ ದೆಹಲಿಯ ಆಡಳಿತದ ಸಾಂವಿಧಾನಿಕ ಯೋಜನೆಗೆ ಅನುಗುಣವಾಗಿ ಇದನ್ನು ವ್ಯಾಖ್ಯಾನಿಸಲಾಗಿದೆ.

ಮಸೂದೆಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಮಸೂದೆಯನ್ನು ಅಸಾಂವಿಧಾನಿಕ, ಪ್ರಜಾಪ್ರಭುತ್ವ ವಿರೋಧಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹಗ್ಗಜಗ್ಗಾಟಕ್ಕೆ ಸಂಬಂಧಿಸಿದಂತೆ 2018ರ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಮಸೂದೆಯ ಪ್ರಮುಖ ಅಂಶಗಳು ಇಂತಿವೆ:

  • ಶಾಸಕಾಂಗವು ಮಾಡಬೇಕಾದ ಯಾವುದೇ ಕಾನೂನಿನಲ್ಲಿ ಉಲ್ಲೇಖಿಸಲಾದ 'ಸರ್ಕಾರ' ಎಂದರೆ ಲೆಫ್ಟಿನೆಂಟ್ ಗವರ್ನರ್.

  • ಲೆಫ್ಟಿನೆಂಟ್‌ ಗವರ್ನರ್‌ ಅಧಿಕಾರ ವಿಸ್ತರಣೆ

  • ದೆಹಲಿ ವಿಧಾನಸಭೆಯ ಆಡಳಿತಾತ್ಮಕ ಅಧಿಕಾರವನ್ನು ಸೀಮಿತಗೊಳಿಸುವುದು.

  • ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಕಾರ್ಯಕಾರಿ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಲೆಫ್ಟಿನೆಂಟ್‌ ಗವರ್ನರ್‌ ಅವರ ಅಭಿಪ್ರಾಯ ಪಡೆಯುವುದು ಕಡ್ಡಾಯ.