ರೋಹಿಂಗ್ಯಾ ನಿರಾಶ್ರಿತರು, ಫೇಸ್‌ಬುಕ್‌
ರೋಹಿಂಗ್ಯಾ ನಿರಾಶ್ರಿತರು, ಫೇಸ್‌ಬುಕ್‌ 
ಸುದ್ದಿಗಳು

ಸರ್ಕಾರಕ್ಕೆ ಪೂರ್ವ-ಸೆನ್ಸಾರ್‌ಶಿಪ್‌ ಅಧಿಕಾರ ನೀಡಲಾಗದು; ಆಡಳಿತಾರೂಢರಿಗೆ ಅದು ಇಷ್ಟದ ಸಂಗತಿ: ದೆಹಲಿ ಹೈಕೋರ್ಟ್

Prashant Jha, Bar & Bench

ರೋಹಿಂಗ್ಯಾ ಸಮುದಾಯದ ವಿರುದ್ಧದ ದ್ವೇಷ ಮತ್ತು ಪ್ರಚೋದನಕಾರಿ ವಸ್ತುವಿಷಯ ಪ್ರಕಟಿಸದಂತೆ ತನ್ನ ವ್ಯವಸ್ಥೆ ಬದಲಿಸಿಕೊಳ್ಳುವುದಕ್ಕಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ (ಈಗಿನ ಮೆಟಾ) ನಿರ್ದೇಶನ ನೀಡುವಂತೆ ಕೋರಿ ಇಬ್ಬರು ರೋಹಿಂಗ್ಯಾ ನಿರಾಶ್ರಿತರು ಸಲ್ಲಿಸಿದ್ದ ಮನವಿಯ ತೀರ್ಪನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ಕಾಯ್ದಿರಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (ಪಿಐಎಲ್) ಕೋರಲಾದ ಮನವಿಗಳೂ ಸರ್ಕಾರಕ್ಕೆ ಪ್ರಕಟಣೆ ಪೂರ್ವ ಸೆನ್ಸಾರ್‌ಶಿಪ್‌ ಅಧಿಕಾರ ಒದಗಿಸುತ್ತವೆ, ಇದು ವಾಕ್ ಸ್ವಾತಂತ್ರ್ಯಕ್ಕೆ ಅಪಾಯಕಾರಿಯಾಗಬಹುದು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್‌ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ಆತಂಕ ವ್ಯಕ್ತಪಡಿಸಿದೆ.

"ನೀವೆಲ್ಲಿಗೆ ಮುಟ್ಟುತ್ತಿದ್ದೀರಿ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ.. ಸರ್ಕಾರವೇ ನಿಯಂತ್ರಿಸಲಿ ಎಂದು ನೀವು ಹೇಳುವುದಾದರೆ ಆಗ ಅವರಿಗೆ ಎಲ್ಲಾ ಅಧಿಕಾರ ನೀಡಬೇಕಾಗುತ್ತದೆ. ಅವರಿಗೆ ಅದು ಇಷ್ಟದ ಸಂಗತಿ. ಸರ್ಕಾರಗಳು ಅಧಿಕಾರ ದುರುಪಯೋಗಪಡಿಸಿಕೊಂಡು ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತವೆ ಎಂದು ನಿಮಗೆ ಅನ್ನಿಸುವುದಿಲ್ಲವೇ? ದ್ವೇಷ ಭಾಷಣವನ್ನು ಮೊಟಕುಗೊಳಿಸಬೇಕು ಆದರೆ ಈ ಸೆನ್ಸಾರ್‌ಶಿಪ್‌ ಅಧಿಕಾರವನ್ನು ಭಾರತ ಒಕ್ಕೂಟಕ್ಕೆ ನೀಡಬೇಕೇ ಎಂಬುದನ್ನು ನಾವು ಅನ್ವೇಷಿಸುತ್ತಿದ್ದೇವೆ" ಎಂದು ನ್ಯಾಯಪೀಠ ಹೇಳಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಕೆಟ್ಟ ಸಂಗತಿ ಇದೆ ಎಂಬುದು ನಿಜ ಆದರೆ ಅರ್ಜಿದಾರರು ಸೂಚಿಸಿದ ಪರಿಹಾರ "ಅತಿರೇಕ"ದ್ದಾಗಿರಬಹುದು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹೇಳಿದರು.

"ಸಾಮಾಜಿಕ ಮಾಧ್ಯಮಗಳಲ್ಲಿನ ನಿಂದನೆಯನ್ನು ನೋಡಿ. ನೀವು ಯೋಗ್ಯವಾದ ಮಾತುಕತೆ ನಡೆಸಲು ಅಲ್ಲಿ ಸಾಧ್ಯವಿಲ್ಲ. ನೀವು ಸೂಚಿಸುತ್ತಿರುವ ಪರಿಹಾರವು ಸೂಕ್ತವಾಗಿದೆಯೇ ಅಥವಾ ಅದು ಅತಿಯಾಗಿದೆಯೇ ಎಂಬುದಷ್ಟೇ ಇಲ್ಲಿ ಪ್ರಶ್ನೆ. ಇಂದು ಆ ಸಮುದಾಯ (ರೋಹಿಂಗ್ಯಾ), ನಾಳೆ ಮತ್ತೊಂದು ಸಮುದಾಯ ಇದೇ ಕೋರಿಕೆ ಮಂಡಿಸಬಹುದು. ಪ್ರತಿಯೊಬ್ಬರೂ ಹಾಗೆ ಭಾವಿಸುತ್ತಾರೆ. ಇದು ಈ ದೇಶದ ಸಮಸ್ಯೆಯಾಗಿದೆ" ಎಂದು ಪೀಠ ಅಭಿಪ್ರಾಯಪಟ್ಟಿತು.

ನಂತರ ಅದು ವಿವರವಾದ ಆದೇಶವನ್ನು ಹೊರಡಿಸುವುದಕ್ಕಾಗಿ ತನ್ನ ತೀರ್ಪನ್ನು ಕಾಯ್ದಿರಿಸಿತು.

ಅರ್ಜಿದಾರರು ತಮ್ಮ ಅಹವಾಲುಗಳನ್ನು ಮೊದಲು ಫೇಸ್‌ಬುಕ್‌ಗೆ ಸಲ್ಲಿಸಿ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಾವಳಿ 2021 ರ ನಿಯಮ 3 ರಲ್ಲಿ ಒದಗಿಸಲಾದ ಪರಿಹಾರ ಪಡೆಯಲು ಮನವಿ ಮಾಡಬಹುದು ಎಂದು ನ್ಯಾಯಾಲಯ ಮೌಖಿಕವಾಗಿ ಸುಳಿವು ನೀಡಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ

ಅರ್ಜಿದಾರರಾದ ಮೊಹಮ್ಮದ್ ಹಮೀಮ್ ಮತ್ತು ಕೌಸರ್ ಮೊಹಮ್ಮದ್ ಅವರು ಮ್ಯಾನ್ಮಾರ್‌ನಲ್ಲಿ ನಡೆಯುತ್ತಿದ್ದ ಕಿರುಕುಳ ತಾಳಲಾರದೆ ಅಲ್ಲಿಂದ ಭಾರತಕ್ಕೆ ಜುಲೈ 2018 ಮತ್ತು ಮಾರ್ಚ್ 2022ರಲ್ಲಿ ಬಂದಿದ್ದರು.

ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ದ್ವೇಷ ಭಾಷಣ ಮತ್ತು ಹಿಂಸಾಚಾರವನ್ನು ಉತ್ತೇಜಿಸುವ ವೈರಲ್ ಮತ್ತು  ರ‍್ಯಾಂಕಿಂಗ್ ಅಲ್ಗಾರಿದಮ್‌ಗಳ ಬಳಕೆ ನಿಲ್ಲಿಸಲು ಫೇಸ್‌ಬುಕ್‌ಗೆ ನಿರ್ದೇಶಿಸುವಂತೆ ಅವರು ಕೋರಿದ್ದರು.

ಮ್ಯಾನ್ಮಾರ್‌ನಲ್ಲಿ ನಡೆದ ರೋಹಿಂಗ್ಯಾ ನರಮೇಧದಲ್ಲಿ ಫೇಸ್‌ಬುಕ್‌ ಪ್ರಮುಖ ಪಾತ್ರ ವಹಿಸಿದ್ದು ಇದೀಗ ಭಾರತದಲ್ಲಿಯೂ ತಮ್ಮ ವಿರುದ್ಧ ದ್ವೇಷ ಹುಟ್ಟುಹಾಕಲು ಈ ವೇದಿಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದರು.