Madras High Court 
ಸುದ್ದಿಗಳು

ಜೀವಾವಧಿ ಸಜೆಗೀಡಾದವರ ಅವಧಿಪೂರ್ವ ಬಿಡುಗಡೆ: ಸಂಪುಟ ನಿರ್ಧಾರಕ್ಕೆ ರಾಜ್ಯಪಾಲರು ಬದ್ಧರು ಎಂದ ಮದ್ರಾಸ್ ಹೈಕೋರ್ಟ್

ಜೈಲಿನಿಂದ ಅವಧಿಪೂರ್ವ ಬಿಡುಗಡೆ ಕೋರಿ ವೀರ ಭಾರತಿ ಎಂಬಾತ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿದೆ.

Bar & Bench

ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿಗಳನ್ನು ಶೀಘ್ರ ಬಿಡುಗಡೆ ಮಾಡುವ ವಿಚಾರದಲ್ಲಿ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರಕ್ಕೆ ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಬದ್ಧರಾಗಿರಬೇಕು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.

ಸಂವಿಧಾನದ 161ನೇ ವಿಧಿಯಡಿ ಅಪರಾಧಿಗಳನ್ನು ಬಿಡುಗಡೆ ಮಾಡುವ ಅಧಿಕಾರ ಚಲಾಯಿಸುವಾಗ ರಾಜ್ಯ ಸಚಿವ ಸಂಪುಟದ ಸಲಹೆಗೆ "ರಾಜ್ಯಪಾಲರು ಬದ್ಧವಾಗಿರಬೇಕು" ಎಂದು ಹಲವು ತೀರ್ಪುಗಳ ಮೂಲಕ ಸುಪ್ರೀಂ ಕೋರ್ಟ್ ರೂಪಿಸಿದ ಕಾನೂನು ಸ್ಪಷ್ಟಪಡಿಸುತ್ತದೆ ಎಂದು ಅಕ್ಟೋಬರ್ 17 ರಂದು ನೀಡಿದ ಆದೇಶದಲ್ಲಿ, ನ್ಯಾಯಮೂರ್ತಿಗಳಾದ ಎಸ್‌ಎಂ ಸುಬ್ರಮಣ್ಯಂ ಮತ್ತು ವಿ ಶಿವಜ್ಞಾನಂ ಅವರಿದ್ದ ಪೀಠ ತಿಳಿಸಿದೆ.

“ಸಂವಿಧಾನದ 161ನೇ ವಿಧಿಯಡಿಯಲ್ಲಿ ರಾಜ್ಯ ಸಚಿವ ಸಂಪುಟದ ಸಲಹೆಗೆ ರಾಜ್ಯಪಾಲರು ಬದ್ಧರಾಗಿರಬೇಕು ಎಂಬುದು ಸುಪ್ರೀಂ ಕೋರ್ಟ್‌ನ ಸುಸ್ಥಾಪಿತ ಕಾನೂನುಗಳಿಂದ  ಇತ್ಯರ್ಥಗೊಂಡಿದೆ. 161ನೇ ವಿಧಿಯಡಿ ರಾಜ್ಯ ಸಚಿವ ಸಂಪುಟ  ಖೈದಿಯನ್ನು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾಗ ಕೈದಿಗಳಿಗೆ ಸಂಬಂಧಿಸಿದಂತೆ ಅಧಿಕಾರ  ಚಲಾಯಿಸದಿರುವುದು ಅಥವಾ ಅಂತಹ ಅಧಿಕಾರ  ಚಲಾಯಿಸುವಲ್ಲಿ ಉಂಟಾಗುವ ವಿವರಿಸಲಾಗದ ವಿಳಂಬ ಧೋರಣೆ ಅನುಸರಿಸುವುದು ನ್ಯಾಯಾಲಯದ ಪರಿಶೀಲನೆಗೆ ಒಳಪಡುತ್ತದೆ. ಸಂವಿಧಾನದ 161ನೇ ವಿಧಿಯ ಅಡಿಯಲ್ಲಿ ರಾಜ್ಯ ಸರ್ಕಾರಗಳು ಅಧಿಕಾರ ಚಲಾಯಿಸಬಹುದೇ ವಿನಾ ರಾಜ್ಯಪಾಲರು ಖುದ್ದಾಗಿ ಅಲ್ಲ”ಎಂದು ಪೀಠ ಹೇಳಿದೆ.

ಸನ್ನಡತೆಯ ಕಾರಣಕ್ಕೆ ಚೆನ್ನೈನ ಪುಳಲ್ ಜೈಲಿನಿಂದ ಬಿಡುಗಡೆಯಾಗುವಂತೆ ಕಾರಾಗೃಹಗಳ ಡಿಜಿಪಿ ನೇತೃತ್ವದ ತಮಿಳುನಾಡು ಸರ್ಕಾರದ ಸಮಿತಿ ಅನುಮತಿ ನೀಡಿದ್ದರೂ ತನ್ನ ಮನವಿ ತಿರಸ್ಕರಿಸಿದ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ವೀರ ಭಾರತಿ ಎಂಬ ವ್ಯಕ್ತಿ ನ್ಯಾಯಾಲಯದ ಮೊರೆ ಹೋಗಿದ್ದರು.  

 ಅವಧಿಪೂರ್ವ ಬಿಡುಗಡೆ ವಿಚಾರದಲ್ಲಿ ರಾಜ್ಯ ಸಚಿವ ಸಂಪುಟ ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಇರುವ ಅಧಿಕಾರ ಕುರಿತು ಎಜಿ ಪೇರರಿವಾಳನ್‌ ಮತ್ತು ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ  ಇತ್ಯರ್ಥಪಡಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಸಂವಿಧಾನದ 161ನೇ ವಿಧಿಯಡಿ ರಾಜ್ಯ ಸರ್ಕಾರಗಳು ಅಧಿಕಾರ ಚಲಾಯಿಸಬಹುದೇ ವಿನಾ ರಾಜ್ಯಪಾಲರು ಸ್ವಂತವಾಗಿ ಅಲ್ಲ. ಸರ್ಕಾರದ ಸೂಕ್ತ ಸಲಹೆಗೆ ರಾಜ್ಯದ ಮುಖ್ಯಸ್ಥ (ರಾಜ್ಯಪಾಲ) ಬದ್ಧರಾಗಿರಬೇಕು. ಪ್ರತಿಯೊಂದು ಪ್ರಕರಣಕ್ಕೂ ಪ್ರತ್ಯೇಕ ಆದೇಶ ಅಗತ್ಯವಿಲ್ಲ, ಆದರೆ ನೀಡಲಾದ ಯಾವುದೇ ಸಾಮಾನ್ಯ ಆದೇಶ ಪ್ರಕರಣಗಳ ಗುಂಪನ್ನು ಗುರುತಿಸಲು ಮತ್ತು ಇಡೀ ಗುಂಪಿಗೆ ವಿವೇಚನೆ ಅನ್ವಯಿಸುವಂತೆ ಸಾಕಷ್ಟು ಸ್ಪಷ್ಟವಾಗಿ ಇರಬೇಕು. ಆದ್ದರಿಂದ, ರಾಜ್ಯ ಸರ್ಕಾರದ ನೀತಿಗಳು ಸಂವಿಧಾನದ 161ನೇ ವಿಧಿ ಮತ್ತು ಸಂಹಿತೆಯ ಸೆಕ್ಷನ್ 432, 433 ಮತ್ತು 433 (ಎ) ಅಡಿಯಲ್ಲಿ ಎರಡೂ ಸಂದರ್ಭಗಳನ್ನು ಒಳಗೊಂಡಿರುವ ಸಂಯೋಜಿತ ನೀತಿಗಳಾಗಿವೆ ” ಎಂದು ಹೈಕೋರ್ಟ್ ಹೇಳಿದೆ. 

ಆದ್ದರಿಂದ, ಭಾರತಿ ಅವರ ಮನವಿಯನ್ನು ಪುರಸ್ಕರಿಸಿದ ಅದು ಕಡತಗಳನ್ನು ಮರುಪರಿಶೀಲಿಸಿ ಅರ್ಹತೆಯ ಮೇಲೆ ಹೊಸದಾಗಿ ಪ್ರಕರಣ ನಿರ್ಧರಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಿತು.