ಭಾರತದ ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಕಣ್ಣೂರು ವಿವಿ ಕಾಯಿದೆಯಡಿ ಕುಲಪತಿ ನೇಮಕಾತಿ: ಸಚಿವರ ಸಲಹೆಗೆ ರಾಜ್ಯಪಾಲರು ಬದ್ಧರಲ್ಲ ಎಂದ ಸುಪ್ರೀಂ

ಕಣ್ಣೂರು ವಿವಿ ಕಾಯಿದೆ-1996ರ ನಿಯಮಾವಳಿಗಳ ಪ್ರಕಾರ, ಕಣ್ಣೂರು ವಿಶ್ವವಿದ್ಯಾಲಯ ಉಪಕುಲಪತಿ ನೇಮಕಾತಿಗೆ ಸಂಬಂಧಿಸಿದಂತೆ ಕುಲಪತಿಯಾಗಿರುವ ರಾಜ್ಯಪಾಲರೊಬ್ಬರೇ ತೀರ್ಮಾನ ಕೈಗೊಳ್ಳುವವರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಒತ್ತಿಹೇಳಿದೆ.

Bar & Bench

ಕಣ್ಣೂರು ವಿಶ್ವವಿದ್ಯಾಲಯದ ಪದನಿಮಿತ್ತ ಕುಲಪತಿಯಾಗಿರುವ ಕೇರಳ ರಾಜ್ಯಪಾಲರು ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳನ್ನು ನೇಮಕ ಮಾಡುವಾಗ ಕೇರಳ ಸರ್ಕಾರದ ಮಂತ್ರಿಮಂಡಲದ ಸಲಹೆಗೆ ಬದ್ಧರಾಗಿರಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.

ಕಣ್ಣೂರು ವಿವಿ ಕಾಯಿದೆ-1996ರ ನಿಯಮಾವಳಿಗಳ ಪ್ರಕಾರ, ಕಣ್ಣೂರು ವಿಶ್ವವಿದ್ಯಾಲಯ ಉಪಕುಲಪತಿ ನೇಮಕಾತಿಗೆ ಸಂಬಂಧಿಸಿದಂತೆ ಕುಲಪತಿಯಾಗಿರುವ ರಾಜ್ಯಪಾಲರೊಬ್ಬರೇ ತೀರ್ಮಾನ ಕೈಗೊಳ್ಳುವವರಾಗಿದ್ದು ಅವರು ಹೆಸರಿಗೆ ಮಾತ್ರ ಮುಖ್ಯಸ್ಥರಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.

"ಉಪಕುಲಪತಿಯನ್ನು ನೇಮಕ ಮಾಡುವ ಅಥವಾ ಮರುನೇಮಕ ಮಾಡುವ ಅಧಿಕಾರವನ್ನು 1996ರ ಕಾಯಿದೆಯಡಿ ಕುಲಪತಿಗೆ ನೀಡಲಾಗಿದೆ. ಪ್ರೊ-ಚಾನ್ಸಲರ್ ಅಥವಾ ಇನ್ನಾವುದೇ ಉನ್ನತ ಅಧಿಕಾರಿಯಾಗಲೀ ಶಾಸನಬದ್ಧ ಅಧಿಕಾರಿಯ (ಕುಲಪತಿ) ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಮತ್ತು ಯಾವುದೇ ಶಾಸನಬದ್ಧ ಅಧಿಕಾರಿ ಆದೇಶದ ಮೇರೆಗೆ ಅಥವಾ ಯಾವುದೇ ಶಾಸನಬದ್ಧ ಪಾತ್ರ ಹೊಂದಿರದ ವ್ಯಕ್ತಿಯ ಸಲಹೆಯ ಮೇರೆಗೆ ತೆಗೆದುಕೊಂಡರೆ, ಅದು ಸಂಪೂರ್ಣಕಾನೂನುಬಾಹಿರವಾಗಿರುತ್ತದೆ" ಎಂದು ನ್ಯಾಯಾಲಯ ತೀರ್ಮಾನಿಸಿದೆ.

ಉಪಕುಲಪತಿ ಆಯ್ಕೆಯಲ್ಲಿ ಕುಲಪತಿಗಳ ಅಭಿಪ್ರಾಯವೇ ಅಂತಿಮ ಎಂದು ನ್ಯಾಯಾಲಯ ಹೇಳಿದೆ. ಉಪಕುಲಪತಿಯನ್ನು ಮರುನೇಮಕ ಮಾಡುವಾಗ ಕೂಡ ಕುಲಪತಿಗಳನ್ನು ಪ್ರಭಾವಿಸಬಹುದಾದ ಏಕೈಕ ಸಂಗತಿಯೆಂದರೆ ಅದು ವಿಶ್ವವಿದ್ಯಾಲಯದ ಹಿತಾಸಕ್ತಿ ಮಾತ್ರವೇ ಆಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆ ಮೂಲಕ ಬಾಹ್ಯ ಶಕ್ತಿಗಳ ಪ್ರಭಾವಕ್ಕೆ ಆಸ್ಪದ ಇಲ್ಲ ಎಂದು ಸ್ಫಷ್ಟಪಡಿಸಿದೆ.

ಕಣ್ಣೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಡಾ.ಗೋಪಿನಾಥ್ ರವೀಂದ್ರನ್ ಅವರನ್ನು ಮರುನೇಮಕ ಮಾಡಿರುವುದನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಡಾ.ರವೀಂದ್ರನ್ ಅವರನ್ನು ಕಣ್ಣೂರು ಉಪಕುಲಪತಿಯಾಗಿ ಮರು ನೇಮಕ ಮಾಡಿದ್ದ ವಿಚಾರ ರಾಜಕೀಯ ವಿವಾದಕ್ಕೆ ತುತ್ತಾಗಿತ್ತು. ಅವರ ಮರುನೇಮಕಕ್ಕೆ ಸಹಿ ಹಾಕುವಂತೆ ಸಿಪಿಎಂ ಸರ್ಕಾರ ತನ್ನ ಮೇಲೆ ಇತ್ತಡ ಹೇರಿತ್ತು ಎಂದು ಕೇರಳ ರಾಜ್ಯಪಾಲ ಮುಹಮ್ಮದ್ ಆರಿಫ್ ಖಾನ್ ಆಕ್ಷೇಪಿಸಿದ್ದರು.

60 ವರ್ಷ ವಯಸ್ಸಿನ ಮಿತಿ ಹೊಸ ನೇಮಕಾತಿಗಳಿಗೆ ಮಾತ್ರ ಅನ್ವಯಿಸಲಿದ್ದು ಮರು ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ. ಆದರೂ ಡಾ.ರವೀಂದ್ರನ್ ಅವರ ಮರುನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಅತಿಯಾಗಿ ಹಸ್ತಕ್ಷೇಪ ಮಾಡಿರುವುದು ಕಂಡುಬಂದಿದ್ದರಿಂದ, ನೇಮಕಾತಿ ಆದೇಶವನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್‌, ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Dr_Premachandran_Keezhoth_and_anr_vs_Chancellor_Kannur_University_and_ors.pdf
Preview