ಸುದ್ದಿಗಳು

ಕೆಲ ರಾಜ್ಯಪಾಲರು ಕ್ರಿಯಾಶೀಲವಾಗಿರಬೇಕಾದೆಡೆ ನಿಷ್ಕ್ರಿಯ, ನಿಷ್ಕ್ರಿಯವಾಗಿರಬೇಕಾದೆಡೆ ಸಕ್ರಿಯ: ನ್ಯಾ. ಬಿ ವಿ ನಾಗರತ್ನ

ರಾಜ್ಯಪಾಲರು ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳಿಸಿಕೊಳ್ಳುವ ಬದಲು ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಕಳೆದ ಮಾರ್ಚ್‌ನಲ್ಲಿ ಕೂಡ ಅವರು ಕಿವಿಮಾತು ಹೇಳಿದ್ದರು.

Bar & Bench

ಸಂವಿಧಾನಕ್ಕೆ ಅನುಗುಣವಾಗಿ ತಮ್ಮ ಪಾತ್ರವನ್ನು ನಿರ್ವಹಿಸದ ಕೆಲ ರಾಜ್ಯಪಾಲರ ನಡೆಯ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಭಾರತ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‌ಎಲ್‌ಎಸ್‌ಐಯು) ಶನಿವಾರ ಆಯೋಜಿಸಿದ್ದ ಬಹುತ್ವದ ಒಮ್ಮತ ಮತ್ತು ಸಾಂವಿಧಾನಿಕ ಪರಿವರ್ತನಾ ಸಮಾವೇಶದಲ್ಲಿ  ʼಹೋಮ್ ಇನ್ ದಿ ನೇಷನ್: ಇಂಡಿಯನ್ ವುಮೆನ್ಸ್ ಕಾನ್‌ಸ್ಟಿಟ್ಯೂಷನಲ್‌ ಇಮ್ಯಾಜಿನೇಷನ್‌ʼ ಎಂಬ ವಿಚಾರವಾಗಿ ಅವರು ಮಾತನಾಡಿದರು.

ರಾಜ್ಯಪಾಲರ ಅಲಿಪ್ತತೆ ಕುರಿತು ಸ್ವಾತಂತ್ರ್ಯ ಹೋರಾಟಗಾರ್ತಿ ಜಿ ದುರ್ಗಾಬಾಯಿ ಅವರನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು ಇಂದಿನ ಕಾಲದಲ್ಲಿ ದೇಶದ ಕೆಲ ರಾಜ್ಯಪಾಲರು ಕ್ರಿಯಾಶೀಲರಾಗಿ ಇರಬೇಕಾದ ಕಡೆ ನಿಷ್ಕ್ರಿಯರಾಗಿಯೂ, ನಿಷ್ಕ್ರಿಯವಾಗಿ ಇರಬೇಕಾದ ಕಡೆಗಳಲ್ಲಿ ಸಕ್ರಿಯವಾಗಿಯೂ ಇರುತ್ತಾರೆ ಎಂದು ಬೇಸರಿಸಿದರು.

ರಾಜ್ಯಪಾಲರು ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳಿಸಿಕೊಳ್ಳುವ ಬದಲು ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಕಳೆದ ಮಾರ್ಚ್‌ನಲ್ಲಿ ಕೂಡ ಅವರು ಕಿವಿಮಾತು ಹೇಳಿದ್ದರು.

ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರ ಕಾರ್ಯವೈಖರಿ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿರುವ ಸಂದರ್ಭದಲ್ಲಿಯೇ ನ್ಯಾ. ನಾಗರತ್ನ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಗಳು ಆಯಾ ರಾಜ್ಯಪಾಲರ ವಿರುದ್ಧ ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಮೊರೆ ಹೋಗಿವೆ. ಕರ್ನಾಟಕದಲ್ಲಿಯೂ ರಾಜ್ಯಪಾಲರು ಹಾಗೂ ರಾಜ್ಯ ಸರ್

ನ್ಯಾ. ನಾಗರತ್ನ ಅವರ ಭಾಷಣದ ಪ್ರಮುಖಾಂಶಗಳು

  • ಸ್ವಾತಂತ್ರ್ಯ ಚಳುವಳಿ ನಡೆದದ್ದು ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ  ಮಾತ್ರವಲ್ಲದೆ, ಸಾಮಾಜಿಕ ಸುಧಾರಣೆಗಳಿಗಾಗಿಯೂ ಕೂಡ.

  • ರಾಜಕೀಯ ಅಧೀನತೆಯ ವಿರುದ್ಧದ ಹೋರಾಟದ ತಾರ್ಕಿಕ ಅಂತ್ಯಕ್ಕೆ ಮಾತ್ರವೇ ಸಂವಿಧಾನ ರಚನೆ ಆಗಲಿಲ್ಲ, ಬದಲಿಗೆ ಜನಾಂಗ, ಜಾತಿಯಂತಹ ಬಹುಸ್ತರದ ದಮನಕಾರಿ ರಚನೆಗಳ ವಿರುದ್ಧವೂ ಹೋರಾಡಲು ಅದು ಕಣ್ತೆರೆಯಿತು.

  • ಸಾಮಾಜಿಕ ಪುನರುತ್ಥಾನಕ್ಕೆ ಖಾಸಗಿ ವಲಯವನ್ನು ಪುನರುಜ್ಜೀವನಗೊಳಿಸುವುದು ಮತ್ತು ಮಹಿಳೆಯರ ಘನತೆಯ ಭರವಸೆ ನೀಡುವುದು ಪ್ರಮುಖ ರಾಷ್ಟ್ರೀಯ ಕಾರ್ಯಸೂಚಿಯಾಗಿದೆ.

  • ಸಂವಿಧಾನ ಸಭೆಯಲ್ಲಿ ಭಾರತೀಯ ಮಹಿಳೆಯರ ಭಾಗವಹಿಸಿದ್ದು ಸಂವಿಧಾನದ ಪರಿವರ್ತನಾಶೀಲತೆಯ ವಿಧಾನವನ್ನು ಮೂಲಭೂತವಾಗಿ ಪ್ರಭಾವಿಸಿದೆ.

  • ನಮ್ಮ ಶೈಕ್ಷಣಿಕ ಮತ್ತು ಕಾನೂನು ಬೋಧನೆಯು ಸಂವಿಧಾನ ಸಂಸ್ಥಾಪಕ ತಾಯಂದಿರನ್ನು ಸಂಪೂರ್ಣವಾಗಿ ಸಂವಿಧಾನವಾದಿಗಳು ಎಂದು ಮನ್ನಣೆ ನೀಡಬೇಕು.

  • ಭಾರತೀಯ ಸಾಂವಿಧಾನಿಕತೆ ಆಳವಾಗಿ ಬೇರೂರುವಂತೆ ಮಾಡಲು ಒಕ್ಕೂಟ ವ್ಯವಸ್ಥೆ, ಭ್ರಾತೃತ್ವ, ಮೂಲಭೂತ ಹಕ್ಕುಗಳು ಮತ್ತು ತತ್ವಬದ್ಧ ಆಡಳಿತದ ಮೇಲೆ ಒತ್ತು ನೀಡುವುದು ಮುಖ್ಯ.

  • ದೇಶ ಬಹಳಷ್ಟು ಮುಂದೆ ಸಾಗಬೇಕಿರುವುದರಿಂದ ರಾಷ್ಟ್ರವನ್ನು ಹುಟ್ಟುಹಾಕಿದವರ ಆದರ್ಶಗಳನ್ನು ಜತನಗೊಳಿಸಲಾಗಿದೆಯೇ ಎಂಬುದರೆಡೆಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಅಂತಹ ಅವಲೋಕನ ಉತ್ತಮ ನಾಳೆಗಳನ್ನು ರೂಪಿಸಲು ಹಿನ್ನೆಲೆ ಒದಗಿಸುತ್ತದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ಎನ್ಎಲ್ಎಸ್ಐಯು ಉಪಕುಲಪತಿ ಡಾ. ಸುಧೀರ್ ಕೃಷ್ಣಸ್ವಾಮಿ ಉಪಸ್ಥಿತರಿದ್ದರು.