Bombay High Court 
ಸುದ್ದಿಗಳು

ಗೋವಿಂದ್ ಪನ್ಸಾರೆ ಹತ್ಯೆ: ತನಿಖೆಯನ್ನು ಮಹಾರಾಷ್ಟ್ರ ಎಟಿಎಸ್‌ಗೆ ವರ್ಗಾಯಿಸಿದ ಬಾಂಬೆ ಹೈಕೋರ್ಟ್

ತನಿಖೆ ನಡೆಸುವುದಕ್ಕಾಗಿ ರಾಜ್ಯ ಸಿಐಡಿಯ ಕೆಲವು ಅಧಿಕಾರಿಗಳನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳಲು ವಿಭಾಗೀಯ ಪೀಠ ಎಟಿಎಸ್‌ಗೆ ಅನುಮತಿ ನೀಡಿದೆ.

Bar & Bench

ವಿಚಾರವಾದಿ, ಕಮ್ಯುನಿಸ್ಟ್ ಪಕ್ಷದ ರಾಜಕಾರಣಿ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ತನಿಖೆಯನ್ನು ಬಾಂಬೆ ಹೈಕೋರ್ಟ್ ಬುಧವಾರ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ವರ್ಗಾಯಿಸಿದೆ.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೆರೆ ಮತ್ತು ನ್ಯಾಯಮೂರ್ತಿ ಶರ್ಮಿಳಾ ದೇಶಮುಖ್‌ ಅವರಿದ್ದ ವಿಭಾಗೀಯ ಪೀಠ ಕೇಳಿದ್ದ ಪ್ರಶ್ನೆಯೊಂದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಅಧಿಕಾರಿಗಳ ಹೊಸ ತಂಡ ರಚಿಸಲಾಗುವುದು ಇಲ್ಲವೇ ತನಿಖೆಯನ್ನು ಎಟಿಎಸ್‌ಗೆ ವರ್ಗಾಯಿಸಲಾಗುವುದು ಎಂದು ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ತಿಳಿಸಿತ್ತು.

ಎಟಿಎಸ್ ತನಿಖೆ ನಡೆಸಿದರೆ ಸೂಕ್ತ ಎಂದು ಇಂದಿನ ವಿಚಾರಣೆ ವೇಳೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹಿರಿಯ ವಕೀಲ ಅಶೋಕ್ ಮುಂಡರಗಿ ಅವರು ನ್ಯಾಯಾಲಯವನ್ನು ಕೋರಿದ್ದರು. ವಾದವನ್ನು ಪುರಸ್ಕರಿಸಿದ ವಿಭಾಗೀಯ ಪೀಠ ತನಿಖೆ ಮೇಲ್ವಿಚಾರಣೆ ನಡೆಸುವ ಎಟಿಎಸ್‌ ಅಧಿಕಾರಿಯ ಬಗ್ಗೆ ಪ್ರಶ್ನಿಸಿತು.

ಎಡಿಜಿಪಿ ಮಟ್ಟದ ಅಧಿಕಾರಿಯೊಬ್ಬರು ಎಟಿಎಸ್‌ನ ಮುಖ್ಯಸ್ಥರಾಗಿದ್ದು ತಮ್ಮ ತನಿಖಾ ತಂಡದಲ್ಲಿ ಯಾರಿರಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ ಎಂದು ಮುಂಡರಗಿ ತಿಳಿಸಿದರು.

ತನಿಖೆಯನ್ನು ಸಿಐಡಿಯಿಂದ ಎಟಿಎಸ್‌ಗೆ ವರ್ಗಾಯಿಸುವಂತೆ ಕೋರಿ ಪನ್ಸಾರೆ ಅವರ ಮಗಳು ಸ್ಮಿತಾ ಪನ್ಸಾರೆ ಅರ್ಜಿ ಸಲ್ಲಿಸಿದ್ದರು ಪನ್ಸಾರೆ, ವಿಚಾರವಾದಿ ನರೇಂದ್ರ ದಾಭೋಲ್ಕರ್‌, ಸಂಶೋಧಕ ಎಂ ಎಂ ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ಹಿಂದೆ ದೊಡ್ಡ ಪಿತೂರಿ ಅಡಗಿದೆ. ಆದರೆ ತನಿಖೆ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಸ್ಮಿತಾ ಪರ ವಕೀಲ ಅಭಯ್‌ ನೇವಗಿ ಈ ಹಿಂದೆ ವಾದ ಮಂಡಿಸಿದ್ದರು.