ಸುದ್ದಿಗಳು

ಗೋವಿಂದ್‌ ಪಾನ್ಸರೆ ಹತ್ಯೆಗೈದವರನ್ನು ಶಿಕ್ಷಿಸಲಾಗುತ್ತದೆ ಎಂಬ ನ್ಯಾಯಸಮ್ಮತ ನಿರೀಕ್ಷೆ ಜನರಲ್ಲಿದೆ: ಬಾಂಬೆ ಹೈಕೋರ್ಟ್

ಏಳು ವರ್ಷಗಳ ಕಾಲ ಪ್ರಕರಣದ ತನಿಖೆ ನಡೆಸಿದರೂ ಎಸ್ಐಟಿ ಯಾವುದೇ ಪ್ರಗತಿ ಸಾಧಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ತನಿಖೆಯನ್ನು ಮಹಾರಾಷ್ಟ್ರ ಎಟಿಎಸ್‌ಗೆ ವರ್ಗಾಯಿಸಿತು.

Bar & Bench

ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜಕಾರಣಿ, ವಿಚಾರವಾದಿ ಗೋವಿಂದ್ ಪಾನ್ಸರೆ ಅವರ ಹತ್ಯೆ ಮಾಡಿದವರನ್ನು ಶಿಕ್ಷಿಸಲಾಗುತ್ತದೆ ಎಂದು ಸಾರ್ವಜನಿಕರ ನ್ಯಾಯಸಮ್ಮತವಾದ ನಿರೀಕ್ಷೆಯಿದೆ ಎಂದಿರುವ ಬಾಂಬೆ ಹೈಕೋರ್ಟ್ ಸೋಮವಾರ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ವರ್ಗಾಯಿಸಿದೆ.

ಈ ಹಿಂದೆ ರಾಜ್ಯ ಸಿಐಡಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಹತ್ಯೆಯ ತನಿಖೆ ನಡೆಸುತ್ತಿತ್ತು. ಏಳು ವರ್ಷಗಳ ಕಾಲ ಪ್ರಕರಣದ ತನಿಖೆ ನಡೆಸಿದರೂ ಎಸ್‌ಐಟಿ ಯಾವುದೇ ಪ್ರಗತಿ ಸಾಧಿಸಿಲ್ಲ ಎಂಬುದನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ಶರ್ಮಿಳಾ ದೇಶಮುಖ್ ಅವರಿದ್ದ ವಿಭಾಗೀಯ ಪೀಠ ಗಮನಿಸಿತು.

ನ್ಯಾಯಾಲಯ 2016ರಿಂದ ತನಿಖೆಯ ಮೇಲ್ವಿಚಾರಣೆ ಮಾಡುತ್ತಿದೆ. ಆದರೆ, ಇಲ್ಲಿಯವರೆಗೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಎಸ್‌ಐಟಿಗೆ ತನಿಖೆ ನಡೆಸಲು ಸಾಕಷ್ಟು ಕಾಲಾವಕಾಶ ನೀಡಲಾಗಿದ್ದು ಎಟಿಎಸ್‌ ತನ್ನ ದೃಷ್ಟಿಯಿಂದ ತನಿಖೆ ನಡೆಸಲು ಅನುವು ಮಾಡಿಕೊಡುವುದಕ್ಕಾಗಿ ತನಿಖೆಯನ್ನು ವರ್ಗಾಯಿಸುವ ಅಗತ್ಯವಿದೆ ಎಂದು ಪೀಠ ಆದೇಶದಲ್ಲಿ ದಾಖಲಿಸಿದೆ.

“ಕಾಮ್ರೇಡ್ ಪಾನ್ಸರೆ ಅವರ ಕುಟುಂಬ ಸುಮಾರು ಏಳು ವರ್ಷಗಳಷ್ಟು ದೀರ್ಘ ಕಾಲದಿಂದ ಕಾಯುತ್ತಿದೆ. ಘೋರ ಅಪರಾಧ ಎಸಗಿದವರನ್ನು ಶಿಕ್ಷಿಸಲಾಗುತ್ತದೆ ಎಂಬ ನ್ಯಾಯಸಮ್ಮತ ನಿರೀಕ್ಷೆ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಸಾರ್ವಜನಿಕರಲ್ಲೂ ಇದೆ. ಇದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇರುವ ತನಿಖಾ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ತನಿಖೆಯನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಅವಶ್ಯಕ. ಅದು ವಿಫಲವಾದರೆ, ಅಪರಾಧಿಗಳಿಗೆ ಮತ್ತಷ್ಟು ಧೈರ್ಯ ಬರುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಕೆಲ ಉಗ್ರಗಾಮಿಗಳು ಫೆಬ್ರವರಿ 16, 2015 ರಂದು ಕೊಲ್ಹಾಪುರದಲ್ಲಿ ಪನ್ಸಾರೆ ಅವರ ಮನೆ ಬಳಿ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಪನ್ಸಾರೆ ನಾಲ್ಕು ದಿನಗಳ ಬಳಿಕ ಮೃತಪಟ್ಟಿದ್ದರು. ಪಾನ್ಸರೆ, ವಿಚಾರವಾದಿ ದಾಬೋಲ್ಕರ್‌, ಸಂಶೋಧಕ ಎಂ ಎಂ ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ಹಿಂದೆ ದೊಡ್ಡ ಪಿತೂರಿ ಇದ್ದು ತನಿಖೆ ನಡೆಸುವಂತೆ ಕೋರಿ ಪನ್ಸಾರೆ ಅವರ ಪುತ್ರಿ ಸ್ಮಿತಾ ನ್ಯಾಯಾಲಯದ ಮೊರೆ ಹೋಗಿದ್ದರು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Smita_Pansare___Ors__v__State_of_Maharashtra___Ors_.pdf
Preview