Karnataka High Court 
ಸುದ್ದಿಗಳು

ಆಡಳಿತ ಮಂಡಳಿ, ಕಾರ್ಮಿಕ ಸಂಘಟನೆಯನ್ನು ಆಲಿಸದೆ ವೇತನ ಪಾವತಿಸಲು ಸರ್ಕಾರ ಮಧ್ಯಂತರ ಆದೇಶ ಮಾಡುವಂತಿಲ್ಲ: ಹೈಕೋರ್ಟ್‌

“ಮಧ್ಯಂತರ ಕ್ರಮಕೈಗೊಳ್ಳುವಂತೆ ಕಾರ್ಮಿಕ ನ್ಯಾಯಾಲಯ/ಕೈಗಾರಿಕಾ ನ್ಯಾಯಾಧಿಕರಣಕ್ಕೆ ಕಾರ್ಮಿಕ ಸಂಘಟನೆಯು ಸಲ್ಲಿಸಿರುವ ಅರ್ಜಿಯು ಬಾಕಿ ಉಳಿದಿದ್ದು, ಆ ಸಂಬಂಧ ನ್ಯಾಯಾಧಿಕರಣ ಕ್ರಮಕೈಗೊಳ್ಳಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

Bar & Bench

ಕಂಪನಿಯ ಮ್ಯಾನೇಜ್‌ಮೆಂಟ್‌ ಮತ್ತು ಕಾರ್ಮಿಕರ ಸಂಘದ ವಾದ ಆಲಿಸದೇ ರಾಜ್ಯ ಸರ್ಕಾರವು ಕಾರ್ಮಿಕರಿಗೆ ವೇತನ ಪಾವತಿಸುವಂತೆ ಮಧ್ಯಂತರ ಆದೇಶ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಪುನರುಚ್ಚರಿಸಿದೆ.

ಕಾರ್ಮಿಕ ಇಲಾಖೆಯ ಬಾಲ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಅಥವಾ ಉಪ ವಿಶೇಷ ಅಧಿಕಾರಿಯು ಮಹೀಂದ್ರ ಏರೋಸ್ಟ್ರಕ್ಚರ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಸಿಬ್ಬಂದಿಗೆ ಮಾಸಿಕ 6,000 ವೇತನ ಪಾವತಿಸುವಂತೆ 2024ರ ಜೂನ್‌ 11ರಂದು ಮಾಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿದ್ದ ಕಂಪೆನಿಯ ಆಡಳಿತ ಮಂಡಳಿಯ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ್‌ ಹೆಗ್ಡೆ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಮಧ್ಯಂತರ ಕ್ರಮಕೈಗೊಳ್ಳುವಂತೆ ಕಾರ್ಮಿಕ ನ್ಯಾಯಾಲಯ/ಕೈಗಾರಿಕಾ ನ್ಯಾಯಾಧಿಕರಣಕ್ಕೆ ಕಾರ್ಮಿಕ ಸಂಘಟನೆಯು ಸಲ್ಲಿಸಿರುವ ಅರ್ಜಿಯು ಬಾಕಿ ಉಳಿದಿದ್ದು, ಆ ಸಂಬಂಧ ನ್ಯಾಯಾಧಿಕರಣ ಕ್ರಮಕೈಗೊಳ್ಳಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

“ಹಾಲಿ ಪ್ರಕರಣದಲ್ಲಿ ಸರ್ಕಾರವು ಆಕ್ಷೇಪಾರ್ಹ ಆದೇಶ ಮಾಡುವಾಗ ಆಡಳಿತ ಮಂಡಳಿಯ ವಾದ ಆಲಿಸಿಲ್ಲ. ಹೀಗಾಗಿ, ಸಹಜ ನ್ಯಾಯ ತತ್ವ ಉಲ್ಲಂಘನೆಯಾಗಿದ್ದು, ಪ್ರಕರಣವು ಸಿವಿಲ್‌ ಪರಿಣಾಮ ಹೊಂದಿರುವುದರಿಂದ ಸರ್ಕಾರ ಮಧ್ಯಂತರ ಆದೇಶ ಹೊರಡಿಸುವುದಕ್ಕಿಂತ ಮುನ್ನ ಮ್ಯಾನೇಜ್‌ಮೆಂಟ್‌ ವಾದ ಆಲಿಸಬೇಕಿತ್ತು” ಎಂದಿದೆ.

“ಮೊದಲಿಗೆ ಕೈಗಾರಿಕಾ ವಿವಾದ ಇದೆಯೇ ಇಲ್ಲವೇ ಎಂಬುದರ ಸಂಬಂಧ ಸರ್ಕಾರವು ವಸ್ತುನಿಷ್ಠ ಅಭಿಪ್ರಾಯ ರೂಪಿಸಿಕೊಳ್ಳಬೇಕು. ಆನಂತರ ಪ್ರಕರಣವು ಕಾರ್ಮಿಕ ನ್ಯಾಯಾಲಯ/ಕೈಗಾರಿಕಾ ನ್ಯಾಯಾಧಿಕರಣದಲ್ಲಿ ಬಾಕಿ ಇರುವಾಗ ಮಧ್ಯಂತರ ಆದೇಶ ಮಾಡುವ ಸಂದರ್ಭ ನಿರ್ಮಾಣವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಎಲ್ಲದಕ್ಕಿಂತ ಮಿಗಿಲಾಗಿ ಆದೇಶ ಮಾಡುವುದಕ್ಕೂ ಮುನ್ನ ಕಂಪೆನಿಯ ಮ್ಯಾನೇಜ್‌ಮೆಂಟ್‌ ಮತ್ತು ಕಾರ್ಮಿಕ ಸಂಘಟನೆಗೆ ನೋಟಿಸ್‌ ಜಾರಿ ಮಾಡಬೇಕಿತ್ತು” ಎಂದು ಹೇಳಿದೆ.

ರಾಜ್ಯ ಸರ್ಕಾರದ ಪರ ವಕೀಲರು “2024ರ ಜೂನ್‌ 11ರಂದು ಸರ್ಕಾರ ಮಾಡಿರುವ ಆದೇಶವು ಆರು ತಿಂಗಳಿಗೆ ಚಾಲ್ತಿಯಲ್ಲಿದ್ದು, ಅದರ ವಾಯಿದೆ ಮುಗಿದಿರುವುದರಿಂದ ಅರ್ಜಿಯು ಅನೂರ್ಜಿತವಾಗಿದೆ” ಎಂದಿದ್ದರು.

ಬಿಪಿಎಲ್‌ ಸಮೂಹ ಸಂಸ್ಥೆಗಳ ಪ್ರಕರಣದಲ್ಲಿ ಕಾನೂನು ರೂಪಿಸಲಾಗಿದ್ದು, ಅದಕ್ಕೆ ವಿರುದ್ಧವಾಗಿ ಸರ್ಕಾರ ಆದೇಶ ಮಾಡಿರುವುದರಿಂದ ಅದನ್ನು ಬದಿಗೆ ಸರಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ. ಆದೇಶದ ಪ್ರತಿಯನ್ನು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಗೆ ಕಳುಹಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.

Mahindra Serostructures Pvt Ltd Vs State of Karnataka.pdf
Preview