ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಪೌರ ನೌಕರರು ಮತ್ತು ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ನ್ಯಾಯಾಲಯ ಹೊರಡಿಸಿರುವ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
2023ರ ಜೂನ್ 19ರಂದು ಹೈಕೋರ್ಟ್‌ನ ಏಕಸದಸ್ಯ ಪೀಠವು ಹೊರಡಿಸಿರುವ ಆದೇಶದ ಅನ್ವಯ ಸೇವೆ ಕಾಯಂಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ರಾಜ್ಯ ನಿವೃತ್ತ ಪೌರ ನೌಕರರು ಮತ್ತು ಪೌರ ಕಾರ್ಮಿಕರ ಸಂಘ ಹಾಗೂ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಪ್ ಆಪರೇಟರ್, ಬಿಲ್ ಕಲೆಕ್ಟರ್, ದ್ವಿತೀಯ ದರ್ಜೆ ಸಹಾಯಕರು, ಕಿರಿಯ ಎಂಜಿನಿಯರ್, ಎಲೆಕ್ಟ್ರಿಕಲ್ ಲೈನ್ ಮ್ಯಾನ್, ದಫೇದಾರರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠ ನಡೆಸಿತು.
ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯದ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಪೌರಾಡಳಿತ ಇಲಾಖೆ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿತು.
ರಾಜ್ಯದ ವಿವಿಧ ನಗರ ಮತ್ತು ಪುರಸಭೆಯಲ್ಲಿ 2-3 ದಶಕಗಳಿಂದ ಕೆಲಸ ಮಾಡುತ್ತಿರುವ ಪಂಪ್ ಆಪರೇಟರ್, ಬಿಲ್ ಕಲೆಕ್ಟರ್, ಎಸ್‌ಡಿಎ, ಟೈಪಿಸ್ಟ್, ದಫೇದಾರ್, ಕಿರಿಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನೌಕರರು, ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರ ಕಾರ್ಮಿಕರ ಸಂಘವು 2023ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಎರಡು-ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ತಮ್ಮ ಸೇವೆಯನ್ನು ಸರ್ಕಾರ ಕಾಯಂಗೊಳಿಸುತ್ತಿಲ್ಲ. ಪ್ರೇಮ್ ಸಿಂಗ್ ಹಾಗೂ ಉತ್ತರ ಪ್ರದೇಶ ಸರ್ಕಾರದ ನಡುವಿನ ಪ್ರಕರಣ, ಕರ್ನಾಟಕ ಸರ್ಕಾರ ಮತ್ತು ಉಮಾದೇವಿ ನಡುವಿನ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಹೊರಡಿಸಿರುವ ತೀರ್ಪಿನ ಅನ್ವಯ ತಮ್ಮ ಸೇವೆಯನ್ನು ಕಾಯಂಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಆ ಅರ್ಜಿಯನ್ನು 2023ರ ಜೂನ್ 19ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಇ ಎಸ್ ಇಂದಿರೇಶ್ ಅವರ ಏಕಸದಸ್ಯ ಪೀಠವು ಅರ್ಜಿದಾರ ನೌಕರರನ್ನು ಸೇವಾ ಕಾಯಂ ವಿಚಾರದಲ್ಲಿ ನೌಕರರು ಕಾರ್ಯ ನಿರ್ವಹಿಸುತ್ತಿರುವ ನಗರ-ಪುರಸಭೆ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಕಳುಹಿಸಿರುವ ವರದಿಯನ್ನು ಪೌರಾಡಳಿತ ಇಲಾಖೆ ನಿರ್ದೇಶಕರು ಪರಿಗಣಿಸಬೇಕು. ಅರ್ಜಿದಾರ ನೌಕರರು ಮತ್ತೊಮ್ಮೆ ಅಗತ್ಯ ದಾಖಲೆಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿಯೊಂದಿಗೆ ತಮ್ಮ ಸೇವೆ ಕಾಯಂಗೊಳಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತ್ತು.
ಇದೀಗ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ನೌಕರರು, ಏಕ ಸದಸ್ಯ ಪೀಠದ ಆದೇಶದಂತೆ ತಾವು ಮನವಿ ಪತ್ರ ಸಲ್ಲಿಸಿದರೂ, ಅದನ್ನು ಪರಿಗಣಿಸಿ ಈವರೆಗೂ ತಮ್ಮ ಸೇವೆಯನ್ನು ಕಾಯಂಗೊಳಿಸಿಲ್ಲ. ಆದ್ದರಿಂದ, ತಮ್ಮ ಸೇವೆ ಕಾಯಂಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.