City civil courts bengaluru
City civil courts bengaluru 
ಸುದ್ದಿಗಳು

ನಿವೃತ್ತ ಮುಖ್ಯ ಕಾರ್ಯದರ್ಶಿ ಜಾಧವ್‌ ತಾಯಿಗೆ ಭೂಮಿ ಮಂಜೂರು ಪ್ರಕರಣ: ಅಧಿಕಾರಿ ಜಯಪ್ರಕಾಶ್‌ಗೆ ನಿರೀಕ್ಷಣಾ ಜಾಮೀನು

Siddesh M S

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರ ತಾಯಿ ಹಾಗೂ ಮತ್ತಿತರರು ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಭೂಮಿ ಕಬಳಿಸಲು ನೆರವು ನೀಡಿದ ಆರೋಪಕ್ಕೆ ಗುರಿಯಾಗಿರುವ ಭೂ ದಾಖಲೆ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಉಪ ಆಯುಕ್ತ ಹಾಗೂ ಪದನಿಮಿತ್ತ ಎಂಡೋವ್‌ಮೆಂಟ್‌ ಸರ್ವೆ ಅಧಿಕಾರಿ ಕೆ ಜಯಪ್ರಕಾಶ್‌ ಅವರಿಗೆ ವಿಶೇಷ ನ್ಯಾಯಾಲಯವು ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕ್ರಮಕ್ಕೆ ಮುಂದಾಗುವುದನ್ನು ಅರಿತು ಜಯಪ್ರಕಾಶ್‌ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯನ್ನು 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮಿನಾರಾಯಣ ಭಟ್‌ ಕೆ ಅವರು ನಡೆಸಿದ್ದು, ಅಧಿಕಾರಿಯನ್ನು ಬಂಧಿಸಿದರೆ 2 ಲಕ್ಷ ಮೌಲ್ಯದ ಬಾಂಡ್‌ ಮತ್ತು ಭದ್ರತೆ ಪಡೆದು ಅವರನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ.

ಈ ಆದೇಶವಾದ ಇಪ್ಪತ್ತು ದಿನಗಳಲ್ಲಿ ಅಧಿಕಾರಿಯು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಇದನ್ನು ಪಾಲಿಸುವಲ್ಲಿ ವಿಫಲವಾದರೆ ನಿರೀಕ್ಷಣಾ ಜಾಮೀನು ರದ್ದಾಗಲಿದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ. ತನಿಖೆಗೆ ಸಹಕಾರ ನೀಡಬೇಕು. ನ್ಯಾಯಾಲಯದ ಅನುಮತಿ ಪಡೆಯದೇ ದೇಶ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಪ್ರಕರಣದ ಹಿನ್ನೆಲೆ

ಬೆಂಗಳೂರಿನ ಆನೇಕಲ್‌ ತಾಲ್ಲೂಕಿನ ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿಯ ಸರ್ವೆ ನಂ.29ರಲ್ಲಿ ಸರ್ಕಾರದ 78 ಎಕರೆ ಭೂಮಿ ಇದೆ. ಈ ಪೈಕಿ 8.3 ಎಕರೆ ಭೂಮಿಯನ್ನು ಕರ್ನಾಟಕ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಅರವಿಂದ್‌ ಜಾಧವ್‌ ಅವರ ತಾಯಿ ತಾರಾಬಾಯಿ ಮಾರುತಿ ರಾವ್‌ ಜಾಧವ್‌ ಅವರಿಗೆ ಹಂಚಿಕೆ ಮಾಡಲಾಗಿತ್ತು. 66 ಎಕರೆ ಭೂಮಿಗೆ ಸಂಬಂಧಿಸಿದಂತೆ ಹಲವರು ಭೂಮಿ ತಮಗೆ ಸೇರಿದ್ದು ಎಂದು ಪಹಣಿ ನೀಡುವಂತೆ ಆನೇಕಲ್‌ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ ಎಂದು ಮಾಹಿತಿದಾರ ಎಸ್‌ ಭಾಸ್ಕರನ್‌ ಅವರ ಹೇಳಿಕೆ ಆಧರಿಸಿ 2016ರ ಆಗಸ್ಟ್‌ 23ರಂದು ಎಸಿಬಿ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದರು.

ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಅರವಿಂದ ಜಾಧವ್‌ ಅವರು ಸೂಕ್ತ ಪೋಡಿ, ಆಕಾರಬಂಧ್‌ ನಡೆಸದೇ ತಮ್ಮ ತಾಯಿ ಹೆಸರಿಗೆ 29/1 ಸರ್ವೆ ನಂಬರ್‌ನಲ್ಲಿ ಪಹಣಿ ಪಡೆದಿದ್ದಾರೆ. ಆರೋಪಿಗಳ ಈ ನಡೆಯು ಕರ್ನಾಟಕ ಭೂ ಕಂದಾಯ ಕಾಯಿದೆಯ ನಿಯಮಗಳಿಗೆ ವಿರುದ್ಧವಾಗಿದೆ. ಅಲ್ಲದೇ, ತಾರಾಬಾಯಿ ಅವರು ತಮ್ಮ ಹೆಸರಿನಲ್ಲಿ ಪಡೆದಿದ್ದ ಜಮೀನನ್ನು ಕರ್ನಾಟಕ ಭೂ ಕಂದಾಯ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿ ಮಾರಾಟ ಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್‌ ವಾದಿಸಿದೆ.

ಆರೋಪಿಗಳಾದ ಆನೇಕಲ್‌ ಸರ್ವೆದಾರ ಅರುಣ್‌ ಆರ್‌, ಸರ್ವೆ ಮೇಲ್ವಿಚಾರಕ ಡಿ ಬಿ ಗಂಗಯ್ಯ ಮತ್ತು ಪರಿಶೀಲನಾ ಮೇಲ್ವಿಚಾರಕ ಯೋಗಾನಂದಗೌಡರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 13(1)(ಸಿ) ಜೊತೆಗೆ 13(2) ಅಡಿ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 34 ಮತ್ತು 120ಬಿ ಅಡಿ ಎಫ್‌ಐಆರ್‌ ದಾಖಲಿಸಲಾಗಿದ್ದು, ಅದು ಜಾಮೀನುರಹಿತವಾಗಿದೆ. ಈ ಸಂದರ್ಭದಲ್ಲಿ ಆರೋಪಿ ಜಯಪ್ರಕಾಶ್‌ ಅವರು ಭೂ ದಾಖಲೆ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದರು ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿದೆ.

ಪ್ರಕರಣದಲ್ಲಿ ಜಯಪ್ರಕಾಶ್‌ ಅವರನ್ನು ಹತ್ತನೇ ಆರೋಪಿಯನ್ನಾಗಿಸಲು ಉದ್ದೇಶಿಸಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ನಿಬಂಧನೆಗಳ ಪ್ರಕಾರ ಸಕ್ಷಮ ಪ್ರಾಧಿಕಾರದಿಂದ ಜಯಪ್ರಕಾಶ್‌ ಅವರ ವಿರುದ್ಧ ತನಿಖೆ ನಡೆಸಲು 2021ರ ಸೆಪ್ಟೆಂಬರ್‌ 29ರಂದು ಪೂರ್ವಾನುಮತಿ ಪಡೆಯಲಾಗಿದೆ. 2016ರ ಜನವರಿ 14ರಂದು ಜಯಪ್ರಕಾಶ್‌ ಅವರು ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ತಾರಾಬಾಯಿ ಅವರಿಗೆ ಜಮೀನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡಿದ್ದಾರೆ.

ಸರ್ಕಾರಿ ಅಧಿಕಾರಿಯಾಗಿ ಜಯಪ್ರಕಾಶ್‌ ಮತ್ತು ಇತರೆ ಆರೋಪಿಗಳು ತಮ್ಮ ಅಧಿಕೃತ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಅವರು ಅಪರಾಧ ಎಸಗಿದ್ದಾರೆ. 1 ರಿಂದ 4ನೇ ಆರೋಪಿಗಳು ಕಾನೂನುಬಾಹಿರವಾಗಿ ಪೋಡಿ ಸೃಷ್ಟಿಸುವ ಕೆಲಸ ಮಾಡಿದ್ದು, ಆರೋಪಿ ತಾರಾಬಾಯಿ ಅವರಿಗೆ ಸಹಾಯ ಮಾಡುವ ದೃಷ್ಟಿಯಿಂದ ಆಕಾರಬಂಧ್‌ಗೆ ತಮ್ಮ ಸಹಿ ಮಾಡುವ ಮೂಲಕ ಆರೋಪಿಗಳ ಜೊತೆಗೂಡಿ ಕ್ರಿಮಿನಲ್‌ ಪಿತೂರಿ ನಡೆಸಿದ್ದಾರೆ. ಅಲ್ಲದೇ, ವಿವಾದಿತ ಭೂಮಿಯ ಜೊತೆಗೆ ಆರ್‌ಟಿಸಿ ವಿಲೀನ ಮಾಡುವುದಕ್ಕೆ ಶಿಫಾರಸ್ಸು ಮಾಡುವ ಮೂಲಕ ಅರ್ಜಿದಾರರು ಅಪರಾಧ ಎಸಗಿದ್ದಾರೆ ಎನ್ನುವುದು ಪ್ರಾಸಿಕ್ಯೂಷನ್‌ ವಾದವಾಗಿದೆ.

K Jayaprakash versus State of Karnataka.pdf
Preview