ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿ ಹೊಂದಿದ್ದಾರೆ ಎಂದು ಸರ್ಕಾರದ ಭೂಮಿಯನ್ನು ತಾಲ್ಲೂಕು ಭೂ ಮಂಜೂರಾತಿ ಸಮಿತಿಯ ಅಧ್ಯಕ್ಷರಾಗಿದ್ದಾಗ ತಮ್ಮ ತಾಯಿಗೆ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ಎಂ ನಾರಾಯಣಸ್ವಾಮಿ ಸೇರಿದಂತೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ, ತನಿಖೆ ನಡೆಸಲು ವಿಶೇಷ ನ್ಯಾಯಾಲಯವು ಆದೇಶಿಸಿದೆ.
ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ ಸಿ ರಾಜಣ್ಣ ಅವರು ಸಲ್ಲಿಸಿದ್ದ ದೂರಿನ ವಿಚಾರಣೆಯನ್ನು 110ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಹಾಗೂ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ ಜಯಂತ್ ಕುಮಾರ್ ಅವರು ಇತ್ತೀಚೆಗೆ ನಡೆಸಿದರು.
2022ರ ಫೆಬ್ರವರಿ 23ರಂದು ಸಲ್ಲಿಕೆಯಾಗಿರುವ ದೂರನ್ನು ಆಧರಿಸಿ ಖಾಸಗಿ ದೂರು ದಾಖಲಿಸಿಕೊಂಡು ಸ್ಥಿತಿಗತಿ ವರದಿ ಸಲ್ಲಿಸುವಂತೆ ಕೋಲಾರದ ಭ್ರಷ್ಟಾಚಾರ ನಿಗ್ರಹ ದಳದ ಉಪ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: ಶಾಸಕ ನಾರಾಯಣಸ್ವಾಮಿ ಅವರು ತನ್ನ ತಾಯಿ ಮುನಿಯಮ್ಮ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ ಎಂದು ಹೇಳಿ ಬಂಗಾರಪೇಟೆ ತಾಲ್ಲೂಕಿನ ಕಸಬಾ ಹೋಬಳಿ, ಹುದುಕುಳ ಗ್ರಾಮದ ಸರ್ವೆ ನಂ 256ರಲ್ಲಿ 3 ಎಕರೆ 10 ಗುಂಟೆ ಸರ್ಕಾರಿ ಜಮೀನನ್ನು ಅವರಿಗೆ ಮಂಜೂರಾತಿ ಮಾಡಿದ್ದಾರೆ. ಈ ಕೃತ್ಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.