High Court of Karnataka 
ಸುದ್ದಿಗಳು

ಮಾಹಿತಿ ಆಯುಕ್ತರ ನೇಮಕಕ್ಕೆ ಶೋಧನಾ ಸಮಿತಿ ರಚಿಸಿಲ್ಲ ಎಂದ ಸರ್ಕಾರ: ಮಧ್ಯಂತರ ತಡೆ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

“ನೇಮಕಾತಿಗೆ ಮಧ್ಯಂತರ ತಡೆ ನೀಡಿದರೆ ಅರ್ಜಿದಾರರು ಸಿಐಸಿ ಆಗುವುದಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಮಾಡುವ ಮಧ್ಯಂತರ ಹಾನಿಯಾಗುವುದೇ ವಿನಾ ಮಧ್ಯಂತರ ಪರಿಹಾರವಾಗುವುದಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ಕ್ರಮ” ಎಂದ ಪ್ರೊ. ಕುಮಾರ್.

Bar & Bench

ರಾಜ್ಯ ಮುಖ್ಯ ಮಾಹಿತಿ ಆಯುಕ್ತರು (ಸಿಐಸಿ) ಮತ್ತು ಮಾಹಿತಿ ಆಯುಕ್ತರ (ಐಸಿ) ನೇಮಕಾತಿಗೂ ಮುನ್ನ ಶೋಧನಾ ಸಮಿತಿ ರಚಿಸಿರಲಿಲ್ಲ ಎಂದು ರಾಜ್ಯ ಸರ್ಕಾರವು ಇಂದು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಈ ನಡುವೆ, ನ್ಯಾಯಾಲಯವು ನೇಮಕಾತಿಗೆ ತಡೆ ಕೋರಿರುವ ಮಧ್ಯಂತರ ಕೋರಿಕೆ ಸಂಬಂಧ ಆದೇಶ ಕಾಯ್ದಿರಿಸಿದೆ.

ಶೋಧನಾ ಸಮಿತಿ ರಚಿಸದೇ ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಗೆ ನಿವೃತ್ತ ಐಎಎಸ್‌ ಅಧಿಕಾರಿ ಆತಿಶ್‌ ಮೋಹನ್‌ ಪ್ರಸಾದ್‌ ಮತ್ತು ಮಾಹಿತಿ ಆಯುಕ್ತರನ್ನಾಗಿ ಕೆ‌ ರಾಮನ್, ಡಾ.ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ‌.ಚನ್ನಾಳ, ಎಸ್.ರಾಜಶೇಖರ, ಕೆ ಬದ್ರುದ್ದೀನ್ ಮತ್ತು ಬಿ ಆರ್ ಮಮತಾ ನೇಮಕ ಮಾಡಿರುವುದಕ್ಕೆ ಮಧ್ಯಂತರ ಪರಿಹಾರದ ಭಾಗವಾಗಿ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಬೆಂಗಳೂರಿನ ಮಲ್ಲಿಕಾರ್ಜುನ ರಾಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಅಶೋಕ್‌ ಪಾಟೀಲ್‌ ಅವರು “ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕಾತಿಗೂ ಮುನ್ನ ತಮಿಳುನಾಡು ಅಲ್ಲದೇ ಮಹಾರಾಷ್ಟ್ರ, ಹರಿಯಾಣ ಮತ್ತು ತ್ರಿಪುರದಲ್ಲಿ ಶೋಧನಾ ಸಮಿತಿ ರಚಿಸಲಾಗಿದೆ. ಹೀಗಾಗಿ, ಸುಪ್ರೀಂ ಕೋರ್ಟ್‌ ನಿರ್ದೇಶನಗಳು ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ ಎನ್ನಲಾಗದು. ರಾಜ್ಯ ಸರ್ಕಾರವು 2024ರ ಜೂನ್‌ 11ರಂದು ಮುಖ್ಯ ಮಾಹಿತಿ ಆಯುಕ್ತರು ಮತ್ತು ಒಂದು ಮಾಹಿತಿ ಆಯುಕ್ತರ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಆದರೆ, ಸಿಐಸಿ ಮತ್ತು ಏಳು ಮಾಹಿತಿ ಆಯುಕ್ತರನ್ನು ನೇಮಿಸಲಾಗಿದೆ. ಇಲ್ಲಿ ಎರಡು ಅಧಿಸೂಚನೆಗಳನ್ನು ಒಟ್ಟುಗೂಡಿಸಿ ಶೋಧನಾ ಸಮಿತಿ ಇಲ್ಲದೇ ನೇಮಕಾತಿ ಮಾಡಲಾಗಿದೆ. ಕಾನೂನು ಪಾಲಿಸದೇ ನೇಮಕ ಮಾಡಿರುವವರು ಪ್ರಮಾಣ ಸ್ವೀಕರಿಸಿ, ಕೆಲಸ ಮಾಡುತ್ತಿರುವುದರಿಂದ ಮಧ್ಯಂತರ ಆದೇಶ ಮಾಡಬೇಕು. ಆನಂತರ ಅವರು ಆಕ್ಷೇಪಣೆ ಸಲ್ಲಿಸಬಹುದು” ಎಂದರು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಶೋಧನಾ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿಲ್ಲ. ಶೋಧನಾ ಸಮಿತಿ ರಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದಿಷ್ಟ ನಿರ್ದೇಶನ ನೀಡಿಲ್ಲ. ಶೋಧನಾ ಸಮಿತಿ ರಚಿಸುವುದು ಸೂಕ್ತ ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರವು ಪ್ರಕ್ರಿಯೆ ಕುರಿತು ಅಫಿಡವಿಟ್‌ ಸಲ್ಲಿಸಿದೆ. ಮಾಹಿತಿ ಆಯುಕ್ತರ ಹುದ್ದೆಗೆ ಅರ್ಜಿದಾರ ಮಲ್ಲಿಕಾರ್ಜುನ ರಾಜು ಅರ್ಜಿ ಸಲ್ಲಿಸಿದ್ದು, ಅವರು ತಾನು ಅರ್ಹ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ತಡೆಯಾಜ್ಞೆ ಪ್ರಶ್ನೆ ಉದ್ಭವಿಸುವುದಿಲ್ಲ. ನೇಮಕಾತಿ ಸಂಬಂಧ ಯಾವುದೇ ಆಕ್ಷೇಪಗಳಿದ್ದರೂ ಅರ್ಜಿದಾರರು ಸುಪ್ರೀಂ ಕೊರ್ಟ್‌ಗೆ ಹೋಗಬಹುದು. ಯಾವ ಪ್ರಕ್ರಿಯೆ ಅನುಸರಿಸಲಾಗಿದೆ ಎಂಬುದರ ಸಂಬಂಧ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಬೇಕಿದೆ. ಅದನ್ನು ಸಲ್ಲಿಸಿ ಒಪ್ಪಿಗೆ ಪಡೆಯಲಾಗುವುದು. ಸುಪ್ರೀಂ ಕೋರ್ಟ್‌ ಪರಿಗಣನೆಗೆ ಅರ್ಜಿ ಒಳಪಟ್ಟಿರುವಾಗ ಈ ಅರ್ಜಿ ಪುರಸ್ಕರಿಸುವುದು ಸೂಕ್ತವಲ್ಲ” ಎಂದರು.

ಈ ಸಂದರ್ಭದಲ್ಲಿ ಪೀಠವು “ಶೋಧನಾ ಸಮಿತಿ ರಚಿಸಲಾಗಿಲ್ಲ ಎಂದು ಹೇಳುತ್ತಿದ್ದೀರಾ?” ಎಂದು ಎಜಿಗೆ ಪ್ರಶ್ನಿಸಿತು. ಇದಕ್ಕೆ ಎಜಿ ಅವರು “ಶೋಧನಾ ಸಮಿತಿ ಇರಲಿಲ್ಲ” ಎಂದರು. ಆಗ ಪೀಠವು “ಸುಪ್ರೀಂ ಕೋರ್ಟ್‌ ಶೋಧನಾ ಸಮಿತಿ ರಚಿಸಲೇಬೇಕು ಎಂದು ಹೇಳಿಲ್ಲ ಎಂಬುದು ನಿಮ್ಮ ನಿಲುವಾಗಿದೆ” ಎಂದಿತು. ಇದಕ್ಕೆ ಎಜಿ ಶೆಟ್ಟಿ ಅವರು “ಹೌದು” ಎಂದು ಪ್ರತಿಕ್ರಿಯಿಸಿದರು. ಅಲ್ಲದೇ, “ನೇಮಕಾತಿ ಪ್ರಕ್ರಿಯೆಯಲ್ಲಿ ಲೋಪವಿದೆ ಎಂದು ಎಲ್ಲವನ್ನೂ ನಾಶಪಡಿಸಲಾಗದು. ಅರ್ಹ ವ್ಯಕ್ತಿಯನ್ನು ಸಿಐಸಿಯನ್ನಾಗಿ ನೇಮಕ ಮಾಡಲಾಗಿದೆ” ಎಂದರು.

ಸಿಐಸಿ ಮತ್ತು ಕೆಲ ಮಾಹಿತಿ ಆಯುಕ್ತರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಅರ್ಜಿದಾರರು ಸಿಐಸಿ ಹುದ್ದೆಗೆ ಅರ್ಜಿ ಹಾಕಿರಲಿಲ್ಲ ಎಂದಾಗಲಿ, ಸಿಐಸಿಯಾಗಿ ನೇಮಕವಾಗಲು ಆಶಿತ್‌ ಮೋಹನ್‌ ಪ್ರಸಾದ್‌ ಅರ್ಹರಲ್ಲ ಎಂಬುದಕ್ಕೆ ಸಂಬಂಧಿಸಿದಂತೆಯಾಗಲಿ ಯಾವುದೇ ಗುಮಾನಿಯೂ ಅರ್ಜಿಯಲಿಲ್ಲ. ಹೀಗಾಗಿ, ಅರ್ಜಿ ವಜಾ ಮಾಡಬೇಕು” ಎಂದು ಕೋರಿದರು.

ಈ ವೇಳೆ ಪೀಠವು “ಸುಪ್ರೀಂ ಕೋರ್ಟ್‌ ನಿರ್ದೇಶನಕ್ಕೆ ವಿರುದ್ಧವಾಗಿ ನೇಮಕಾತಿ ಮಾಡಿರುವುದರಿಂದ ಅವುಗಳನ್ನು ವಜಾ ಮಾಡಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿದೆ” ಎಂದಿತು.

ಪೀಠಕ್ಕೆ ಉತ್ತರಿಸಿದ ಪ್ರೊ. ಕುಮಾರ್‌ “ಶೋಧನಾ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿಲ್ಲ. ಪ್ರಕರಣದ ವಿಚಾರಣೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಅರ್ಜಿಯು ಊರ್ಜಿತವಾಗುವುದಿಲ್ಲ. ಅದಾಗ್ಯೂ, ನ್ಯಾಯಾಲಯ ಬಯಿಸಿದರೆ ಆಕ್ಷೇಪಣೆ ಸಲ್ಲಿಸಲಾಗುವುದು. ನೇಮಕಾತಿಗೆ ಮಧ್ಯಂತರ ತಡೆ ನೀಡಿದರೆ ಅರ್ಜಿದಾರರು ಸಿಐಸಿ ಆಗುವುದಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಮಾಡುವ ಮಧ್ಯಂತರ ಹಾನಿಯಾಗುವುದೇ ವಿನಾ ಮಧ್ಯಂತರ ಪರಿಹಾರವಾಗುವುದಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ” ಎಂದರು.

ಆಗ ಅಶೋಕ್‌ ಪಾಟೀಲ್‌ ಅವರು “ಸುಪ್ರೀಂ ಕೋರ್ಟ್‌ ನಿರ್ದೇಶನಗಳು ಸಮಗ್ರವಾಗಿದ್ದು, ಪ್ರತ್ಯೇಕವಾಗಿ ಪ್ರತಿಯೊಂದು ರಾಜ್ಯಕ್ಕೂ ನಿರ್ದೇಶನ ನೀಡಿಲ್ಲ. ಆರಂಭಿಕ ಹಂತದಲ್ಲೇ ನ್ಯಾಯಾಲಯದ ಕದತಟ್ಟಲಾಗಿದೆ. ಶೋಧನಾ ಸಮಿತಿ ರಚಿಸಿರುವ ಕುರಿತಾದ ನಿಲುವವನ್ನು ಅಡ್ವೊಕೇಟ್‌ ಜನರಲ್‌ ಇಂದು ಬದಲಿಸಿರುವುದು ಮಧ್ಯಂತರ ಆದೇಶ ಮಾಡಲು ಸೂಕ್ತ ಪ್ರಕರಣವಾಗಿದೆ” ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮಧ್ಯಂತರ ಕೋರಿಕೆಯ ಮೇಲೆ ಆದೇಶ ಕಾಯ್ದಿರಿಸಿತು. ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರು ಪ್ರಮಾಣ ವಚನ ಸ್ವೀಕರಿಸಿದ ಮಾತ್ರಕ್ಕೆ ಅರ್ಜಿದಾರರು ಮಧ್ಯಂತರ ಆದೇಶ ಕೋರಿರುವುದನ್ನು ಪರಿಗಣಿಸಬಾರದು ಎಂದೇನಿಲ್ಲ. ರಾಜ್ಯ ಸರ್ಕಾರವು ದಾಖಲೆಗಳನ್ನು ಸಲ್ಲಿಸಿದ ಬಳಿಕ ನ್ಯಾಯಾಲಯವು ಸೂಕ್ತ ಆದೇಶ ಮಾಡಲಿದೆ ಎಂದು ಫೆಬ್ರವರಿ 4ರಂದು ನ್ಯಾಯಾಲಯ ಹೇಳಿತ್ತು.