Justice M Nagaprasanna 
ಸುದ್ದಿಗಳು

ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು: ಹೈಕೋರ್ಟ್‌

ಮಂಡ್ಯ-ಚಾಮರಾಜನಗರ ಜಿಲ್ಲೆಯಲ್ಲಿ ಪೊಲೀಸ್ ಗೃಹ ಯೋಜನೆಯಡಿ ನಿರ್ಮಿಸಲಾಗಿದ್ದ ವಸತಿ ಸಮುಚ್ಚಯ ಕಾಮಗಾರಿ ಕಳಪೆ ಎಂಬ ಕಾರಣಕ್ಕೆ ಗುತ್ತಿಗೆ ಕಂಪೆನಿ ಇರಿಸಿದ್ದ 1.15 ಕೋಟಿ ರೂಪಾಯಿ ಬ್ಯಾಂಕ್ ಭದ್ರತೆ ಹಿಂಪಡೆಯುವುದನ್ನು ಸರ್ಕಾರ ತಡೆಹಿಡಿದಿತ್ತು.

Bar & Bench

ಸಾರ್ವಜನಿಕ ಹಣ ಬಳಕೆಯಾಗುವ ಯಾವುದೇ ಯೋಜನೆಗಳಲ್ಲಿ ಗುತ್ತಿಗೆದಾರರು ನಡೆಸುವ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.

ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಪೊಲೀಸ್ ಗೃಹ ಯೋಜನೆಯಡಿ ನಿರ್ಮಿಸಲಾಗಿದ್ದ ವಸತಿ ಸಮುಚ್ಚಯಗಳ ಕಾಮಗಾರಿ ಕಳಪೆಯಾಗಿದೆ ಎಂಬ ಕಾರಣಕ್ಕೆ ಗುತ್ತಿಗೆ ಕಂಪೆನಿ ಇರಿಸಿದ್ದ 1.15 ಕೋಟಿ ರೂಪಾಯಿ ಬ್ಯಾಂಕ್ ಭದ್ರತೆ ಹಿಂಪಡೆಯುವುದನ್ನು ಸರ್ಕಾರ ತಡೆಹಿಡಿದಿತ್ತು. ಇದರಿಂದ, ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಗುತ್ತಿಗೆ ಕಂಪೆನಿ ಪಿಜಿ ಸೆಟ್ಟಿ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಜಾಗೊಳಿಸಿದೆ.

ಕಾಮಗಾರಿಯ ಬಗ್ಗೆ ದೂರುಗಳು ಕೇಳಿಬಂದಿದ್ದರೂ ಕಾಮಗಾರಿಯ ಗುಣಮಟ್ಟ ಪರಿಶೀಲಿಸದೆಯೇ ಗುತ್ತಿಗೆದಾರರಿಗೆ ಬಿಲ್ ಮೊತ್ತವನ್ನು ಪಾವತಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಎಂಜಿನಿಯರ್‌ಗಳ ಕಾರ್ಯಕ್ಕೆ ನ್ಯಾಯಾಲಯವು ಅಚ್ಚರಿ ವ್ಯಕ್ತಪಡಿಸಿದ್ದು, “ಇದೊಂದು ಸರ್ಕಾರಿ ಯೋಜನೆಯಾಗಿದೆ. ಸಾರ್ವಜನಿಕರ ಹಣದಲ್ಲಿ ನಿರ್ಮಾಣವಾಗುವ ಯೋಜನೆಗಳು ಕಳಪೆಯಾಗಿದ್ದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಜನರ ಹಣ ಒಳಗೊಂಡಿರುವ ಯಾವುದೇ ಯೋಜನೆಗಳಲ್ಲಿ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸರ್ಕಾರ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಕಾಮಗಾರಿ ಕೈಗೆತ್ತಿಕೊಳ್ಳುವ ಗುತ್ತಿಗೆದಾರರಿಂದ ಸಾರ್ವಜನಿಕ ಹಣವನ್ನು ದುರುಪಯೋಗವಾಗದಂತೆ ಎಚ್ಚರವಹಿಸುವ ಜತೆಗೆ ಕಳಪೆ ಕಾಮಗಾರಿಗಳು ಕಂಡುಬಂದಾಗ ಅಂತಹ ಕಾಮಗಾರಿಗಳನ್ನು ಅನುಮೋದಿಸಿರುವ ಎಂಜಿನಿಯರ್‌ಗಳ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಆದೇಶದಲ್ಲಿ ಹೇಳಿದೆ.

ಅರ್ಜಿದಾರ ಸಂಸ್ಥೆ ನಿರ್ಮಿಸಿರುವ ಕಟ್ಟಡ ಕಳಪೆಯಾಗಿದೆ. ತಾರಸಿಯಲ್ಲಿ ಬಿರುಕು ಬಿಟ್ಟಿದ್ದು, ಮಳೆ ಬಂದರೆ ಇಡೀ ಕಟ್ಟಡ ಸೋರಿಕೆಯಾಗುತ್ತದೆ. ಬಾಗಿಲುಗಳ ಚೌಕಟ್ಟುಗಳನ್ನು ಗೆದ್ದಲು ಹುಳುಗಳು ತಿನ್ನುತ್ತಿವೆ. ಅರ್ಜಿದಾರ ಕಂಪೆನಿಯು ಮನುಷ್ಯ ವಾಸಕ್ಕೆ ಯೋಗ್ಯವಲ್ಲದ ಕಟ್ಟಡ ನಿರ್ಮಾಣ ಮಾಡಿದ್ದು, ಭದ್ರತಾ ಹಣವನ್ನು ಹಿಂದಿರುಗಿಸುವುದಕ್ಕೆ ಅವಕಾಶವಿಲ್ಲ ಎಂದು ವಾದಿಸಿದ್ದ ನಿಗಮದ ಪರ ವಕೀಲರು ಕಾಮಗಾರಿಗೆ ಸಂಬಂಧಿಸಿದ ಫೋಟೊಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಫೋಟೊಗಳನ್ನು ನೋಡಿ ನ್ಯಾಯಾಲಯ ಕಾಮಗಾರಿಯ ಗುಣಮಟ್ಟ ನಿರ್ಣಯಿಸಲು ಸಾಧ್ಯವಾಗದಿದ್ದರೂ, ‘ಒಂದು ಚಿತ್ರ ಸಾವಿರ ಪದಗಳಿಗೆ ಸಮ’ ಎಂಬ ಮಾತಿನಂತೆ ಕಾಮಗಾರಿ ಹೇಗೆ ನಡೆದಿದೆ ಎಂಬುದನ್ನು ಈ ಫೋಟೊಗಳೇ ಹೇಳುತ್ತಿವೆ. ಇಡೀ ಕಟ್ಟದಲ್ಲಿ ನೀರು ನಿಂತಿರುವುದು, ಗೋಡೆಗಳು ಬಿರುಕು ಬಿಟ್ಟಿರುವುದು, ಸೋಲಾರ್ ಪ್ಯಾನಲ್‌ಗಳಲ್ಲಿ ನೀರು ಸೋರಿಕೆ, ಬಾಗಿಲುಗಳಿಗೆ ಕಳಪೆ ಮರ ಬಳಕೆ ಮಾಡಿದ್ದು, ಈಗಾಗಲೇ ಗೆದ್ದಲು ತಿಂದಿರುವುದು ಕಾಣುತ್ತಿದೆ. ಅರ್ಜಿದಾರರ ಸಂಸ್ಥೆ ನಿಗಮದೊಂದಿಗಿನ ಒಪ್ಪಂದವನ್ನು ಲಘುವಾಗಿ ಪರಿಗಣಿಸಿದೆ. ಕಳಪೆ ಕಟ್ಟಡ ನಿರ್ಮಾಣ ಮಾಡಿರುವುದಕ್ಕೆ ದಂಡ ವಿಧಿಸಬಹುದಾಗಿದೆ. ಇದೇ ಕಾರಣದಿಂದ ಮುಂಗಡ ಠೇವಣಿಯನ್ನು ತಡೆ ಹಿಡಿದಿದೆ. ಇದರಲ್ಲಿ ಯಾವುದೇ ಕಾನೂನು ದೋಷ ಕಂಡು ಬರುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಕಂಪೆನಿಯು ಮಂಡ್ಯ ಹಾಗೂ ಚಾಮರಾಜನಗರದಲ್ಲಿ 144 ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದಂತೆ ಕಾಮಗಾರಿ ಆರಂಭಕ್ಕೂ ಮುನ್ನ ನಿಗಮದಲ್ಲಿ ಬ್ಯಾಂಕ್ ಭದ್ರತೆಯಾಗಿ 1,15,13,500 ರೂಪಾಯಿಗಳನ್ನು ಠೇವಣಿ ಇರಿಸಿತ್ತು. ಈ ನಡುವೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಬಿಲ್‌ಗಳನ್ನು ನಿಗಮ ಪಾವತಿ ಮಾಡಿತ್ತು. ಆದರೆ, ಕಾಮಗಾರಿ ಕಳಪೆಯಿದೆ ಎಂಬ ದೂರು ಬಂದ ತಕ್ಷಣ ಕಂಪೆನಿ ಭದ್ರತಾ ಠೇವಣಿ ಹಿಂಪಡೆಯುವುದನ್ನು ಸರ್ಕಾರ ತಡೆ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರ ಕಂಪೆನಿಯು ಸಂಪೂರ್ಣ ಮೊತ್ತವನ್ನು ವಾರ್ಷಿಕ ಶೇ.18 ಬಡ್ಡಿಯೊಂದಿಗೆ ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.