ಸುದ್ದಿಗಳು

ರಾಜ್ಯದ ಎಲ್ಲ ರಂಗಗಳಲ್ಲಿ ಕನ್ನಡ ಬಳಕೆಗೆ ಕಾನೂನು ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Bar & Bench

“ರಾಜ್ಯದ ಎಲ್ಲ ರಂಗಗಳಲ್ಲಿಯೂ ಕನ್ನಡದ ಬಳಕೆ ಬಗ್ಗೆ ಕಾನೂನು ರಚನೆ ಮಾಡಲು ವಿಧೇಯಕವನ್ನು ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ಪಡೆಯಲಾಗುವುದು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

“ಭಾರತದ ಪ್ರತಿಯೊಂದು ಭಾಷೆಯೂ ಮಾತೃಭಾಷೆ. ಎಲ್ಲ ಭಾಷೆಗಳೂ ರಾಷ್ಟ್ರಭಾಷೆ. ಕನ್ನಡ ನಮ್ಮ ಮಾತೃಭಾಷೆಯೂ ಹೌದು, ನಮ್ಮ ರಾಷ್ಟ್ರಭಾಷೆಯೂ ಹೌದು. ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಕನ್ನಡದ ಅಭಿವೃದ್ಧಿಗಾಗಿ ರಾಜ್ಯದ ಎಲ್ಲ ರಂಗಗಳಲ್ಲಿಯೂ ಕನ್ನಡದ ಬಳಕೆ ಬಗ್ಗೆ ಕಾನೂನು ರಚನೆ ಮಾಡಲಾಗುವುದು. ಕನ್ನಡಕ್ಕಾಗಿ ಕಾನೂನು ಮಾಡುವುದು ಒಂದು ಹಂತವಾದರೆ, ಕನ್ನಡಕ್ಕಾಗಿ ಬದುಕಬೇಕೆನ್ನುವ ಭಾವ ಹೃದಯಾಂತರಾಳದಿಂದ ಬರಬೇಕು” ಎಂದರು.

ನ್ಯಾಯಾಲಯದ ಕಲಾಪಗಳೂ ಕನ್ನಡದಲ್ಲಿ ನಡೆಯಬೇಕು: ಸಚಿವ

ಕನ್ನಡ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕನ್ನಡ ಸಮಗ್ರ ಮಸೂದೆಯನ್ನು ಡಿಸೆಂಬರ್‌ನಲ್ಲಿ ಅಂಗೀಕರಿಸಿ, ಜಾರಿಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್‌ ಕುಮಾರ್‌ ಅವರು ಮಂಗಳೂರಿನಲ್ಲಿ ತಿಳಿಸಿದ್ದಾರೆ.

“ನ್ಯಾಯಾಲಯದ ಕಲಾಪಗಳು ಕನ್ನಡದಲ್ಲಿ ನಡೆಯಬೇಕಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕಿದೆ. ಸರ್ಕಾರದ ಎಲ್ಲಾ ಸುತ್ತೋಲೆಗಳು ಕನ್ನಡದಲ್ಲಿ ಇರಬೇಕು. ಈ ಉದ್ದೇಶದಿಂದ ಕನ್ನಡ ಸಮಗ್ರ ಮಸೂದೆಯನ್ನು ರೂಪಿಸಿದ್ದೇವೆ. ಈ ಕುರಿತು ಸಾರ್ವಜನಿಕರು ಅಗತ್ಯ ಸಲಹೆಗಳನ್ನು ನೀಡಬೇಕು” ಎಂದರು.