ಸುದ್ದಿಗಳು

[ಗೌರಿ ಹತ್ಯೆ] ನವೀನ್‌ರನ್ನು ಸಿಲುಕಿಸಲು ಪೊಲೀಸರ ಜೊತೆ ಸೇರಿ ಸುಳ್ಳು ಕತೆ ಹೆಣೆದ ಆರೋಪ ನಿರಾಕರಿಸಿದ ಶಬ್ಬೀರ್‌

ಅಂಗಡಿ ಮಾಲೀಕರು ಇಲ್ಲದಿದ್ದಾಗ ಏರ್‌ಗನ್‌ ಮಾರಾಟ ಮಾಡಿದ ವಿವರವನ್ನು ನೀಡುವ ಅಭ್ಯಾಸ ಉಂಟು. ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳನ್ನು ಗುರುತಿಸಲು ಪೊಲೀಸರು ನೋಟಿಸ್‌ ನೀಡಿದ್ದರು. ಅದರಂತೆ ಆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೆ ಎಂದ ಶಬ್ಬೀರ್‌.

Bar & Bench

ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ 17ನೇ ಆರೋಪಿಯಾಗಿರುವ ಕೆ ಟಿ ನವೀನ್‌ ಕುಮಾರ್‌ ಅವರನ್ನು ಸಿಲುಕಿಸಲು ಏರ್‌ಗನ್‌ ಮಾರಾಟ ಮಾಡಿದ್ದಾಗಿ ಪೊಲೀಸರ ಜೊತೆ ಸೇರಿ ಸುಳ್ಳು ಕತೆ ಕಟ್ಟುತ್ತಿದ್ದೀರಿ ಎಂಬ ಆರೋಪಿಗಳ ಪರ ವಕೀಲರ ವಾದವನ್ನು ಪ್ರಾಸಿಕ್ಯೂಷನ್‌ನ ಏಳನೇ ಸಾಕ್ಷಿಯಾಗಿರುವ ಸಯ್ಯದ್‌ ಶಬ್ಬೀರ್‌ ಅವರು ಮಂಗಳವಾರ ತಳ್ಳಿಹಾಕಿದರು.

ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ ಮೃತ್ಯುಂಜಯ ಜೋಷಿ ಅವರ ಮುಂದೆ ವಿಚಾರಣೆಯ ಎರಡನೇ ದಿನ ಹಾಜರಾದ ಶಬ್ಬೀರ್‌ ಅವರು ಆರೋಪಿಗಳ ಪರ ವಕೀಲರಾದ ಮಧುಕರ್‌ ದೇಶಪಾಂಡೆ, ಕೃಷ್ಣಮೂರ್ತಿ, ಗಂಗಾಧರ ಶೆಟ್ಟಿ ಅವರ ಪಾಟೀ ಸವಾಲಿನ ಸಂದರ್ಭದಲ್ಲಿ ಎದುರಾದ ಪ್ರಶ್ನೆಗಳಿಗೆ ಉತ್ತರಿಸಿದರು.

ಬೆಂಗಳೂರಿನ ಕಲಾಸಿ ಪಾಳ್ಯದ ಸಿಟಿ ಗನ್‌ ಗೌಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಬಳಿ ನವೀನ್‌ ಕುಮಾರ್‌ ಅವರು ಎಂಟು ವರ್ಷಗಳ ಹಿಂದೆ 3,500 ರೂಪಾಯಿ ಪಾವತಿಸಿ ಏರ್‌ ಗನ್‌ ಖರೀದಿಸಿದ್ದರು. ಆನಂತರ ಮತ್ತೊಂದು ವಾರದ ಬಳಿಕ ಇನ್ನೊಂದು ಏರ್‌ ಗನ್‌ ಖರೀದಿಸಿದ್ದರು. ಸ್ವಲ್ಪ ದಿನದ ಬಳಿಕ ಪಿಸ್ತೂಲ್‌ ಕೇಳಿದ್ದರು. ಪರವಾನಗಿ ಇಲ್ಲದೇ ಪಿಸ್ತೂಲ್‌ ಕೊಡುವುದಿಲ್ಲ ಎಂದು ಹೇಳಿದ್ದೆ ಎಂದು ಸಯ್ಯದ್‌ ಶಬ್ಬೀರ್‌ ಹೇಳಿದರು.

ಏರ್‌ಗನ್‌ಗೆ ನೈಜ ಗುಂಡುಗಳನ್ನು (ಲೈವ್‌ ಬುಲೆಟ್‌) ಹಾಕಿ ಹಾರಿಸಲಾಗದು ಎಂದು ಪಾಟೀ ಸವಾಲಿನಲ್ಲಿ ಹೇಳಿಕೆ ನೀಡಿದ ಶಬ್ಬೀರ್‌, 2018ರ ಮಾರ್ಚ್‌ 1ರಿಂದ 9ನೇ ತಾರೀಕಿನ ಅಂತರದಲ್ಲಿ ನವೀನ್‌ ಅವರು ನಮ್ಮ ಅಂಗಡಿಗೆ ಬಂದಿರಲಿಲ್ಲ. ಅಂಗಡಿ ಮಾಲೀಕರ ಅನುಪಸ್ಥಿತಿಯಲ್ಲಿ ಏರ್‌ಗನ್‌ ಮಾರಾಟ ಮಾಡಿದ ವಿವರವನ್ನು ಮಾಲೀಕರಿಗೆ ನೀಡುವ ಅಭ್ಯಾಸ ಉಂಟು ಎಂದು ವಿವರಿಸಿದರು. ಅಲ್ಲದೇ, ಪರಪ್ಪನ ಅಗ್ರಹಾರದಲ್ಲಿ ಗೌರಿ ಹತ್ಯೆಯ ಆರೋಪಿಗಳನ್ನು ಗುರುತಿಸಲು ಪೊಲೀಸರು ನೋಟಿಸ್‌ ನೀಡಿದ್ದರು. ಅದರಂತೆ ಆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ನವೀನ್‌ ಕುಮಾರ್‌ ಅವರನ್ನು ಗುರುತಿಸಿದ್ದೆ ಎಂದು ವಿವರಿಸಿದರು.

ಇದಕ್ಕೂ ಮುನ್ನ, ಗೌರಿ ಲಂಕೇಶ್‌ ಕುಟುಂಬದ ಸ್ನೇಹಿತರಾದ ಹಾಗೂ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ನ 10ನೇ ಸಾಕ್ಷಿಯಾಗಿರುವ ಕೃಷ್ಣ ಕುಮಾರ್‌ ಅವರು ಗೌರಿ ಕೊಲೆಯಾದ ದಿನದಂದು ಮೃತದೇಹ ಕೊಂಡೊಯ್ದ ನಂತರದ ಮಾಹಿತಿಯನ್ನು ನೀಡಿದರು. ಸೆಪ್ಟಂಬರ್‌ 6ರ ಬೆಳಿಗಿನ ಜಾವ ಮೂರು ಗಂಟೆಯವರೆಗೂ ಮಹಜರ್‌ ನಡೆಸುವ ಪ್ರಕ್ರಿಯೆಯಲ್ಲಿ ಖುದ್ದು ಇದ್ದುದ್ದಾಗಿ ತಿಳಿಸಿದರು.

ಗೌರಿ ಕೊಲೆಯಾದ ಜಾಗದಲ್ಲಿ 7.65 ಎಂ ಎಂನ ನಾಲ್ಕು ಕಾಟ್ರಿಡ್ಜ್‌ ಇತ್ತು. ಗೌರಿ ಅವರ ಕಾರಿನಲ್ಲಿ ಹವ್ಯಕ ಒಕ್ಕೂಟಕ್ಕೆ ಬರೆದ ಪತ್ರವೂ ಇತ್ತು ಎಂದು ವಿವರಿಸಿದರು. ಇದೇ ವೇಳೆ ಮಹಜರ್‌ ಸಂದರ್ಭದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಕಾಟ್ರಿಡ್ಜ್‌, ಡಿವಿಆರ್‌, ಲ್ಯಾಪ್‌ಟಾಪ್‌ ಮತ್ತಿತರ ವಸ್ತುಗಳನ್ನು ಕೃಷ್ಣ ಕುಮಾರ್‌ ಅವರು ಗುರುತಿಸಿದರು. ಇದನ್ನು ನ್ಯಾಯಾಲಯವು ದಾಖಲಿಸಿಕೊಂಡಿತು.

ತನಿಖಾಧಿಕಾರಿಗಳು ಸಲ್ಲಿಸಿರುವ ದಾಖಲೆ ಪತ್ರಗಳು ಸಿಗದಿದ್ದಾಗ ನ್ಯಾಯಮೂರ್ತಿಗಳು ಪ್ರಾಸಿಕ್ಯೂಷನ್‌ ಮತ್ತು ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. “ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ ಬಳಿಕ ನಮ್ಮ ಕೆಲಸ ಮುಗಿಯಿತು ಎಂದು ಭಾವಿಸುತ್ತಾರೆ. ಆನಂತರ ಅವರು ನ್ಯಾಯಾಲಯಕ್ಕೆ ಬರುವುದೇ ಇಲ್ಲ. ಈ ಸಂಬಂಧ ನೀವು (ವಿಶೇಷ ಸರ್ಕಾರಿ ಅಭಿಯೋಜಕ) ಮನವಿ ಸಲ್ಲಿಸಿ. ವಿಚಾರಣೆ ಇರುವ ಪ್ರತಿದಿನ ತನಿಖಾಧಿಕಾರಿ ಭಾಗಿಯಾಗಬೇಕು” ಎಂದು ಆದೇಶ ಮಾಡುತ್ತೇನೆ ಎಂದು ಹೇಳಿದರು. “ವಿಚಾರಣೆ ಆರಂಭವಾದಾಗ ಅಧಿಕಾರಿಗಳು ಖುದ್ದು ಹಾಜರಾಗಿ ದಾಖಲೆಗಳನ್ನು ಒದಗಿಸಬೇಕು” ಎಂದು ಪೀಠವು ಮೌಖಿಕವಾಗಿ ಹೇಳಿತು.

“ಚಿಂತಕ ಕೆ ಎಸ್‌ ಭಗವಾನ್‌ ಅವರ ಕೊಲೆಯ ಸಂಚಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣವು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿದ್ದು, ಕೆಲವು ಮೂಲ ದಾಖಲೆಗಳನ್ನು ಅಲ್ಲಿಗೆ ಸಲ್ಲಿಸಲಾಗಿದೆ. ಹೀಗಾಗಿ, ಅವುಗಳನ್ನು ಇಲ್ಲಿ ನೀಡಲಾಗಿಲ್ಲ. ಈ ಸಂಬಂಧ ಆದೇಶ ಮಾಡಿದರೆ ಅವುಗಳನ್ನು ಇಲ್ಲಿಗೆ ಹಾಜರುಪಡಿಸಲಾಗುವುದು” ಎಂದು ವಿಶೇಷ ಸರ್ಕಾರಿ ಅಭಿಯೋಜಕ ಬಾಲಕೃಷ್ಣನ್‌ ಅವರು ನ್ಯಾಯಮೂರ್ತಿಗಳಿಗೆ ಮನವಿ ಮಾಡಿದರು. ಇದೆಲ್ಲವನ್ನೂ ನೀವು ಮೊದಲೇ ಸಿದ್ಧಪಡಿಸಿಕೊಳ್ಳಬೇಕು. ಸಾಕಷ್ಟು ಸಮಯ ನೀಡಿದರೂ ಸರಿಯಾದ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಪೀಠವು ಪ್ರಾಸಿಕ್ಯೂಷನ್‌ ಬಗ್ಗೆ ಬೇಸರ ವ್ಯಕ್ತಪಡಿಸಿತು.

ಪರಪ್ಪನ ಅಗ್ರಹಾರ ಮತ್ತು ಮುಂಬೈನ ಆರ್ಥರ್‌ ಜೈಲಿನಲ್ಲಿರುವ ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು.