Jail  
ಸುದ್ದಿಗಳು

ಗ್ರಹಾಂ ಸ್ಟೇನ್ಸ್ ಹತ್ಯೆ ಪ್ರಕರಣ: ಅವಧಿಪೂರ್ವ ಬಿಡುಗಡೆ ಕೋರಿ ಸುಪ್ರೀಂಗೆ ಬಜರಂಗ ದಳದ ಅಪರಾಧಿ ದಾರಾ ಸಿಂಗ್ ಅರ್ಜಿ

Bar & Bench

ಕ್ರೈಸ್ತ ಧರ್ಮ ಪ್ರಚಾರಕ ಗ್ರಹಾಂ ಸ್ಟೇನ್ಸ್‌ ಹಾಗೂ ಅವರ ಮಕ್ಕಳಿಬ್ಬರನ್ನು ಸಜೀವವಾಗಿ ದಹಿಸಿದ ಅಪರಾಧಿ ಬಜರಂಗ ದಳದ ಸದಸ್ಯ ದಾರಾ ಸಿಂಗ್, ಜೈಲಿನಿಂದ ಅವಧಿಪೂರ್ವ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ [ರವೀಂದ್ರ ಕುಮಾರ್ ಪಾಲ್ @ ದಾರಾ ಸಿಂಗ್ ಮತ್ತು ಒಡಿಶಾ ಸರ್ಕಾರ ನಡುವಣ ಪ್ರಕರಣ].

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ ವಿ ಎನ್‌ ಭಟ್ಟಿ ಅವರಿದ್ದ ಪೀಠ ಮಂಗಳವಾರ ಒಡಿಶಾ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ದಾರಾ ಸಿಂಗ್ ಸ್ಟೇನ್ಸ್ ಮತ್ತು ಅವರ ಇಬ್ಬರು ಅಪ್ರಾಪ್ತ ಪುತ್ರರನ್ನು 1999ರಲ್ಲಿ ಕೊಂದ ಗುಂಪಿನ ಭಾಗವಾಗಿದ್ದ. ಸ್ಟೇನ್ಸ್ ರಾತ್ರಿ ವೇಳೆ ತಂಗಿದ್ದ ವಾಹನವನ್ನು ಗುಂಪು ಸುಟ್ಟು ಹಾಕಿತ್ತು ಗ್ರಹಾಂ ಸ್ಟೇನ್ಸ್‌ ಧಾರ್ಮಿಕ ಚಟುವಟಿಕೆಗಳು ಅದರಲ್ಲಿಯೂ ಬಡ ಬುಡಕಟ್ಟು ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿರುವುದಕ್ಕೆ ತಕ್ಕ ಪಾಠ ಕಲಿಸಬೇಕೆಂಬುದು ಗುಂಪಿನ ಉದ್ದೇಶವಾಗಿತ್ತು ಎಂಬುದಾಗಿ. ಸಿಂಗ್‌ಗೆ ಶಿಕ್ಷೆ ವಿಧಿಸಿದ್ದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿತ್ತು

“ತನಗೆ 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿದ್ದು 24 ವರ್ಷಗಳಿಂದ ಸೆರೆವಾಸ ಅನುಭವಿಸಿದ್ದೇನೆ. ಇದು ಅವಧಿಪೂರ್ವ ಬಿಡುಗಡೆಗೆ ಸೂಕ್ತವಾದ ಪ್ರಕರಣವಾಗಿದೆ. 'ರಾಷ್ಟ್ರವನ್ನು ರಕ್ಷಿಸುವ' ಸಂದರ್ಭದಲ್ಲಿ ನಡೆದ ತನ್ನ ಕಾರ್ಯಗಳಿಗಾಗಿ ವಿಷಾದಿಸುತ್ತೇನೆ” ಎಂದು ಸಿಂಗ್‌ ಹೇಳಿದ್ದಾನೆ.

ಎರಡು ದಶಕಗಳಿಗೂ ಹಿಂದಿನ ಅಪರಾಧವನ್ನು ಅರ್ಜಿದಾರ ಒಪ್ಪಿಕೊಂಡಿದ್ದು ತಾನು ಅಪರಾಧ ಎಸಗಿದ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾರೆ. ಭಾರತಕ್ಕೆ ಎರಗಿದ ಕ್ರೂರ ಇತಿಹಾಸಕ್ಕೆ ಪ್ರತಿಕ್ರಿಯೆ ನೀಡಲು ಹೊರಟಿದ್ದ ಯುವಕರ ರಣೋತ್ಸಾಹದ ನಡುವೆ ಅರ್ಜಿದಾರನ ಮನಸ್ಸು ಕ್ಷಣಮಾತ್ರದಲ್ಲಿ ಸಂಯಮ ಕಳೆದುಕೊಂಡಿತ್ತು. ಮೊಘಲರು ಮತ್ತು ಬ್ರಿಟಿಷರು ಭಾರತಕ್ಕೆ ಎಸಗಿದ ಅನಾಗರಿಕ ಕೃತ್ಯಗಳಿಂದ ಸಂಕಟಪಟ್ಟು  ಪ್ರಕ್ಷುಬ್ಧ ಮನಸ್ಥಿತಿಯಲ್ಲಿ ಹೀಗೆ ಮಾಡಿದ್ದಾಗಿ ಅರ್ಜಿಯಲ್ಲಿ ವಿವರಿಸಲಾಗಿದೆ.

ತನ್ನನ್ನು 2007ರಲ್ಲಿ ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ತಾನು ಎಂದಿಗೂ ಪೆರೋಲ್‌ ಪಡೆದಿಲ್ಲ ಎಂದು ಸಿಂಗ್‌ ಅರ್ಜಿಯಲ್ಲಿ ವಿವರಿಸಿದ್ದಾನೆ. ವಕೀಲ ವಿಷ್ಣು ಶಂಕರ್ ಜೈನ್ ಮೂಲಕ ಅರ್ಜಿ ಸಲ್ಲಿಸಲಾಗಿದೆ.