ಬೆಂಗಳೂರು ವಕೀಲರ ಸಂಘದ (ಎಎಬಿ) ಉಪಯೋಗಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ (ಜಿಬಿಎ) ₹5 ಕೋಟಿ ಅನುದಾನ ನೀಡಲಾಗುವುದು. ಕೆಂಪೇಗೌಡ ಜಯಂತಿ ಆಚರಣೆಗಾಗಿ ಪ್ರತಿ ವರ್ಷ 5 ಲಕ್ಷ ರೂಪಾಯಿ ಬಿಡುಗಡೆ ಮಾಡುವ ಜೊತೆಗೆ ಪ್ರತಿ ವರ್ಷ ಕೆಂಪೇಗೌಡ ಪ್ರಶಸ್ತಿಯನ್ನು ಕಡ್ಡಾಯವಾಗಿ ಇಬ್ಬರು ವಕೀಲರಿಗೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಘೋಷಿಸಿದರು.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ವಕೀಲರ ಭವನದಲ್ಲಿ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
“ವಕೀಲರ ಸಂಘದ ಕಟ್ಟಡಕ್ಕೆ ಒಂದು ವಾರದೊಳಗೆ ಸೋಲಾರ್ ಗ್ರಿಡ್ ವ್ಯವಸ್ಥೆಗೆ ಪರಿಶೀಲನೆ ನಡೆಸಲಾಗುವುದು. ಇದರ ಬಗ್ಗೆ ಹಿಂದೆಯೇ ಮಾತುಕತೆಯಾಗಿತ್ತು. ಅಧಿಕಾರಿಗಳ ಹಿಂದೆ ಬಿದ್ದು ನೀವು ಕೆಲಸ ಮಾಡಿಸಿಕೊಳ್ಳಬೇಕು. ಜೊತೆಗೆ, ಈ ಅಡ್ವೊಕೇಟ್ಸ್ ಅಕಾಡೆಮಿಗೆ ಭೂಮಿ ಬೇಕು ಎಂಬ ಬೇಡಿಕೆ ಇಡಲಾಗಿದೆ. ಅದಕ್ಕಾಗಿ 10 ಎಕರೆ ಕಂದಾಯ ಭೂಮಿಯ ಲಭ್ಯತೆ ನೋಡಿಕೊಂಡು ನೀಡಲಾಗುವುದು. ನಗರದ 20 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಇದ್ದರೆ ನೀವೇ ಹುಡುಕಿ, ನಾವು ನೀಡುವ ಹಣವನ್ನು ನಿಮಗೆ ಉಪಯೋಗವಾಗುವ ಉತ್ತಮ ಕೆಲಸಗಳಿಗೆ ವಿನಿಯೋಗಿಸಿ” ಎಂದರು.
“ಬೆಂಗಳೂರು ವಕೀಲರ ಸಂಘ 25 ಸಾವಿರ ಸದಸ್ಯತ್ವ ಹೊಂದಿದೆ ಎಂದು ತಿಳಿದಿದ್ದೇನೆ. ನೀವು ಮನಸ್ಸು ಮಾಡಿದರೆ ಬೆಂಗಳೂರಿನಲ್ಲಿ ಯಾವ ಪಕ್ಷವನ್ನು ಕೂಡ ಅಧಿಕಾರಕ್ಕೆ ತರಬಹುದು ಅಥವಾ ಬೀಳಿಸಬಹುದು” ಎಂದರು.
“ನನ್ನ ತಂದೆಗೆ ನನ್ನನ್ನು ಎಂಜಿನಿಯರ್ ಮಾಡಬೇಕು ಎನ್ನುವ ಆಸೆ. ಆದರೆ, ನನಗೆ ವಕೀಲನಾಗುವ ಆಸೆ. ಚಿನ್ನ, ಬೆಳ್ಳಿ ಮನೆಯಲ್ಲಿಯೇ ಇರುವುದು ಸಾಮಾನ್ಯ. ತುರ್ತು ಪರಿಸ್ಥಿತಿ ಸಮಯದಲ್ಲಿ ನಮ್ಮ ಮನೆ ಮೇಲೆ ಅಧಿಕಾರಿಗಳು ರೈಡ್ ಮಾಡಿದ್ದರು. ರೈಡ್ ಮಾಡಿದ ಅಧಿಕಾರಿ ಎಂಜಿನಿಯರ್. ಅದಕ್ಕೆ ನಮ್ಮ ತಂದೆಗೆ ಓದಿಸಬೇಕು ಎನ್ನುವ ಛಲ. ಆದರೆ, ಅವರ ಆಸೆ ಕೈಗೂಡಲಿಲ್ಲ. ಹೀಗಾಗಿ, ಮಗನನ್ನು ವಕೀಲನ್ನಾಗಿಸಿದ್ದೇನೆ” ಎಂದರು.
ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಚಿತ್ರನಟಿ ಪ್ರೇಮಾ, ಪ್ರೊ. ಎಂ ಕೃಷ್ಣೇಗೌಡ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್ ವಿ ಪ್ರವೀಣ್ ಗೌಡ, ಉಪಾಧ್ಯಕ್ಷ ಸಿ ಎಸ್ ಗಿರೀಶ್ ಕುಮಾರ್, ಖಜಾಂಚಿ ಶ್ವೇತಾ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.