ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರ ನಕಲಿ ಸಂದರ್ಶನವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕುವಂತೆ ಅದರ ಮಾತೃಸಂಸ್ಥೆ ಮೆಟಾಗೆ ಕೇಂದ್ರ ಸರ್ಕಾರದ ಕುಂದುಕೊರತೆ ಮೇಲ್ಮನವಿ ಸಮಿತಿ (ಜಿಎಸಿ) ಇತ್ತೀಚೆಗೆ ನಿರ್ದೇಶನ ನೀಡಿದ್ದು ಸಾರ್ವಜನಿಕ ಅಹವಾಲುಗಳನ್ನು ಶ್ರದ್ಧೆಯಿಂದ ಆಲಿಸುವಂತೆಯೂ ಕಿವಿಮಾತು ಹೇಳಿದೆ.
ತನ್ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿಲ್ಲ ಎಂದು ತಿಳಿಸಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಮಾಡಲಾಗಿದ್ದ ವಿನಂತಿಯನ್ನು ಫೇಸ್‌ಬುಕ್ ಈ ಹಿಂದೆ ತಿರಸ್ಕರಿಸಿತ್ತು.
ಪೋಸ್ಟ್‌ಗಳನ್ನು ತೆಗೆದುಹಾಕಲು ಫೇಸ್‌ಬುಕ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಕರಣ್ ಥಾಪರ್ ಅವರು ದುವಾ ಅಸೋಸಿಯೇಟ್ಸ್ ಮೂಲಕ ಸಲ್ಲಿಸಿದ್ದ ಮೇಲ್ಮನವಿಯನ್ನು ಜಿಎಸಿ ವಿಚಾರಣೆಗೆ ಪರಿಗಣಿಸಿತ್ತು.
ದಿಢೀರನೆ ಶ್ರೀಮಂತರಾಗಲು ಉತ್ತೇಜಿಸುವುದು ವಂಚನೆಯನ್ನು ಒಳಗೊಂಡಿರುವುದರಿಂದ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಜಿಎಸಿ ಸ್ಪಷ್ಟಪಡಿಸಿದೆ.
ಪೋಸ್ಟ್‌ಗಳು ತನ್ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿಲ್ಲ ಎಂದು ಮೆಟಾ ಈ ಹಿಂದೆ ಹೇಳಿಕೊಂಡಿದ್ದರೂ, ನಂತರ ಅದು ನೀಡಲಾದ ಆಕ್ಷೇಪಿತ ಯುಆರ್‌ಎಲ್‌ನ ಅಸ್ತಿತ್ವದ ಬಗ್ಗೆ ಮತ್ತು ದೂರುದಾರರಾದ ಥಾಪರ್ ಒದಗಿಸಿದ ತೆರೆಚಿತ್ರಗಳ (ಸ್ಕ್ರೀನ್‌ಶಾಟ್) ಗೋಚರಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ ಎಂದು ಜಿಎಸಿ ಗಮನಿಸಿತು.
ಈ ಹಿನ್ನೆಲೆಯಲ್ಲಿ, ಪೋಸ್ಟ್‌ಗಳು ಫೇಸ್‌ಬುಕ್‌ನ ಸಮುದಾಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿಲ್ಲ ಎಂದು ಆರಂಭದಲ್ಲಿ ಹೇಳಿದ್ದ ಮೆಟಾದ ಕುಂದುಕೊರತೆ ಅಧಿಕಾರಿಗೆ ನಿರ್ದಿಷ್ಟ ಯುಆರ್‌ಎಲ್ ಲಿಂಕ್‌ಗಳ ಬಗ್ಗೆ ತಿಳಿದಿತ್ತು ಎಂದು ಅದು ತೀರ್ಮಾನಿಸಿತು.
ತನ್ನ ಹೆಸರಿನಲ್ಲಿ ಪ್ರಸಾರವಾಗುತ್ತಿರುವ ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಷಯದ ಬಗ್ಗೆ ಥಾಪರ್ ಅವರು ಬಿಡುಗಡೆ ಮಾಡಿದ ಹೇಳಿಕೆಯನ್ನು ಜಿಎಸಿ ಗಣನೆಗೆ ತೆಗೆದುಕೊಂಡಿತ್ತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]