ಅಬ್ಬರದ ಸಂಗೀತಕ್ಕೆ ತಲೆಕುಣಿಸುವ ಕ್ರಿಯೆಯು ಮಹಿಳೆಯನ್ನು ಚುಡಾಯಿಸುವ ಕಾನೂನಿನ ಅರ್ಥವ್ಯಾಪ್ತಿಗೆ ಬಾರದು ಎಂದಿರುವ ಬಾಂಬೆ ಹೈಕೋರ್ಟ್ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ಮಹಿಳೆಯನ್ನು ಹಿಂಬಾಲಿಸಿ, ಚುಡಾಯಿಸಿದ್ದ (ಸ್ಟಾಕಿಂಗ್) ಪ್ರಕರಣದಿಂದ ಮುಕ್ತಗೊಳಿಸಿದೆ [ರಾಕೇಶ್ ಮಾತಾಶರಣ್ ಶುಕ್ಲಾ ವರ್ಸಸ್ ಮಹಾರಾಷ್ಟ್ರ ಸರ್ಕಾರ].
ಮಹಿಳೆಯೊಬ್ಬರು ಆರೋಪಿ ರಾಕೇಶ್ ಮಾತಾಶರಣ್ ಶುಕ್ಲಾ ಎಂಬಾತ ತನ್ನನ್ನು ಚುಡಾಯಿಸಿದ್ದಾಗಿ ದೂರನ್ನು ದಾಖಲಿಸಿದ್ದರು. ತಾನು ವಾಹನ ಚಲಾಯಿಸುತ್ತಿದ್ದ ವೇಳೆ ಆರೋಪಿಯು ತನ್ನನ್ನು ಹಿಂಬಾಲಿಸುತ್ತಾ, ತಲೆಯನ್ನು ಕುಣಿಸುತ್ತಿದ್ದ. ಅವನ ಈ ವರ್ತನೆಯಿಂದ ತಾನು ಸ್ಕೂಟರ್ ನಿಯಂತ್ರಣವನ್ನು ಕಳೆದುಕೊಂಡು ಬಿದ್ದು, ಗಾಯೊಳ್ಳುವಂತಾಯಿತು ಎನ್ನುವುದು ದೂರುದಾರೆಯ ಆರೋಪವಾಗಿತ್ತು.
ಆರೋಪಿಯನ್ನು ನ್ಯಾ. ಮಿಲಿಂದ್ ಜಾಧವ್ ಅವರು ಚುಡಾಯಿಸುವಿಕೆಯ ಆರೋಪದಿಂದ ದೋಷಮುಕ್ತಗೊಳಿಸಿದರಾದರೂ ದ್ವಿಚಕ್ರ ಚಾಲನೆ ವೇಳೆ ಆರೋಪಿಯು ತೋರಿರುವ ವರ್ತನೆಯು ಅಜಾಗರೂಕತೆಯಿಂದ ಕೂಡಿದ ವರ್ತನೆಯಾಗಿದೆ ಎಂದು ಹೇಳಿ ಅದಕ್ಕೆ ನೀಡಲಾಗಿದ್ದ ಶಿಕ್ಷೆಯನ್ನು ಎತ್ತಿ ಹಿಡಿದರು.
"ಆರೋಪಿಯ ವಿರುದ್ಧ ಪ್ರಾಸಿಕ್ಯೂಷನ್ ಹೊರಿಸಿರುವ ಏಕೈಕ ಆರೋಪವೆಂದರೆ ಅದು ಆತ ವಾಹನ ಚಲಾವಣೆ ವೇಳೆ ತಲೆ ಕುಣಿಸುತ್ತಿದ್ದ ಎನ್ನುವುದಾಗಿದೆ. ವಾಹನ ಚಲಾಯಿಸುವ ವೇಳೆ ಸಂಗೀತಕ್ಕೆ, ಅಬ್ಬರದ ಸಂಗೀತಕ್ಕೆ ಆರೋಪಿ ತಲೆ ಕುಣಿಸಿರಬಹುದಾದ ಸಾಧ್ಯತೆ ಇದೆ. ಇಂತಹ ವರ್ತನಾ ಸಂಜ್ಞೆಯನ್ನು ದೂರುದಾರೆಯ ಗಮನ ಸೆಳೆಯಲು, ಆಕೆಯೊಂದಿಗೆ ಸಂವಾದಿಸಲು ನಡೆಸಿದ ವರ್ತನೆ ಎನ್ನಬಹುದೇ ಎನ್ನುವುದನ್ನು ನಿರೂಪಿಸಲು ಪ್ರಾಸಿಕ್ಯೂಷನ್‌ಗೆ ಆಗಿಲ್ಲ. ಹಾಗಾಗಿ ಇಂತಹ ಕೃತ್ಯವು ಚುಡಾಯಿಸುವುದನ್ನು ಅಪರಾಧಗೊಳಿಸುವ ಐಪಿಸಿ ಸೆಕ್ಷನ್ 354 ಡಿ ವ್ಯಾಪ್ತಿಗೆ ಬರುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯವಾಗಿದೆ," ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದರು.
ಘಟನೆ ಹಿನ್ನೆಲೆ: ಆರೋಪಿ ಶುಕ್ಲಾ ಹೆಡ್‌ಫೋನ್ ಧರಿಸಿ, ಮೋಟಾರ್ ಸೈಕಲ್ ಚಲಾಯಿಸುತ್ತಾ, ತಲೆ ಕುಣಿಸುತ್ತಿದ್ದ. ಈ ವೇಳೆ ಸ್ಕೂಟರ್ ಚಲಾಯಿಸುತ್ತಿದ್ದ ಸಂತ್ರಸ್ತೆಯನ್ನು ಹಿಂದಿಕ್ಕುವ ಪ್ರಯತ್ನವನ್ನು ಪದೇ ಪದೇ ಮಾಡಿದ್ದ, ಇದಕ್ಕಾಗಿ ಮತ್ತೆ ಮತ್ತೆ ಹಾರ್ನ್ ಮಾಡುತ್ತಿದ್ದ. ಇದರಿಂದಾಗಿ ಸಂತ್ರಸ್ತೆಯು ನಿಯಂತ್ರಣ ಕಳೆದುಕೊಂಡ ವಾಹನದಿಂದ ಬಿದ್ದು ಗಾಯಗೊಂಡಿದ್ದರು. ಸಂತ್ರಸ್ತೆಯ ದೂರಿನ ಆಧಾರದಲ್ಲಿ ಶುಕ್ಲಾ ವಿರುದ್ಧ ಸೆಕ್ಷನ್ 279 (ಅಜಾಗರೂಕ ಹಾಗೂ ನಿರ್ಲಕ್ಷ್ಯದ ವಾಹನ ಚಾಲನೆ), 354(D) (ಚುಡಾಯಿಸುವಿಕೆ), 337ರ (ಜೀವಕ್ಕೆಎರವಾಗುವ ಕೃತ್ಯದ ಮೂಲಕ ಗಾಯಗೊಳಿಸುವುದು) ಅಡಿ ಪ್ರಕರಣ ದಾಖಲಾಗಿ ವಿಚಾರಣಾ ನ್ಯಾಯಾಲಯವು ಶಿಕ್ಷೆಯನ್ನೂ ವಿಧಿಸಿತ್ತು.
ಚುಡಾಯಿಸಿದ್ದಕ್ಕಾಗಿ ಮೂರು ತಿಂಗಳು, ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಕ್ಕಾಗಿ ಮೂರು ತಿಂಗಳು ಹಾಗೂ ಜೀವಕ್ಕೆ ಎರವಾಗುವಂತಹ ತನ್ನ ಕೃತ್ಯದಿಂದ ಸಂತ್ರಸ್ತೆಯನ್ನು ಗಾಯಗೊಳಿಸಿದ್ದಕ್ಕಾಗಿ ಮೂರು ವರ್ಷ ಶಿಕ್ಷೆಯನ್ನು ವಿಚಾರಣಾ ನ್ಯಾಯಾಲಯ ವಿಧಿಸಿತ್ತು. ಜಿಲ್ಲಾ ನ್ಯಾಯಾಲಯವು ಈ ಶಿಕ್ಷೆಯನ್ನು ಎತ್ತಿ ಹಿಡಿಯಿತಾದರೂ, ಗಾಯಗೊಳಿಸಿದ್ದಕ್ಕಾಗಿ ವಿಧಿಸಲಾಗಿದ್ದ ಮೂರು ವರ್ಷದ ಶಿಕ್ಷೆಯನ್ನು ಮೂರು ತಿಂಗಳಿಗೆ ಇಳಿಸಿತ್ತು.
ಆರೋಪಿಯು ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾ. ಮಿಲಿಂದ್ ಜಾಧವ್ ಅವರ ಏಕಸದಸ್ಯ ಪೀಠವು, ಆರೋಪಿಯು ಚುಡಾಯಿಸಿದ್ದಾನೆ ಎನ್ನುವುದನ್ನು ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದಿತು. ಈ ವೇಳೆ ಅದು ಆರೋಪಿಯು ಅಬ್ಬರದ ಸಂಗೀತ ಕೇಳುತ್ತಾ, ತಲೆ ಕುಣಿಸಿರುವುದು ಚುಡಾಯಿಸುವಿಕೆಗೆ ಅನ್ವಯಿಸುವ ಕಾನೂನಿನ ಅರ್ಥವ್ಯಾಪ್ತಿಯಡಿ ತರಲಾಗದು ಎಂದು ಅಭಿಪ್ರಾಯಪಟ್ಟಿತು.
ಆರೋಪಿಯು ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿರುವುದನ್ನು ಪ್ರಾಸಿಕ್ಯೂಷನ್ ನಿರೂಪಿಸಿದೆ ಎಂದು ಕೆಳ ನ್ಯಾಯಾಲಯಗಳು ಶಿಕ್ಷೆ ವಿಧಿಸಿರುವುದನ್ನು ಪೀಠವು ಎತ್ತಿ ಹಿಡಿಯಿತು; ಆದರೆ, ಶಿಕ್ಷೆಯ ಪ್ರಮಾಣನ್ನು ತಗ್ಗಿಸಿತು. ಆರೋಪಿಯು ಇದಾಗಲೇ 36 ದಿನ ಜೈಲುವಾಸ ಅನುಭವಿಸಿರುವುದರಿಂದ ಆತನನ್ನು ಬಿಡುಗಡೆಗೊಳಿಸಲು ಸೂಚಿಸಿತು.
ವಿಚಾರಣೆ ವೇಳೆ ಆರೋಪಿಯು ವಿವಾಹಿತನಾಗಿದ್ದು, ಮೂರು ಮಕ್ಕಳ ತಂದೆ ಎನ್ನುವ ಅಂಶವನ್ನು ನ್ಯಾಯಾಲಯವು ಪರಿಗಣಿಸಿತು.