Justice BR Gavai and Justice PS Narasimha
Justice BR Gavai and Justice PS Narasimha 
ಸುದ್ದಿಗಳು

ತನ್ನ ತೀರ್ಪುಗಳನ್ನು ಪರೋಕ್ಷವಾಗಿ ಪರಿಶೀಲನೆಗೆ ಒಡ್ಡುವ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೆಂಡಾಮಂಡಲ; ₹20 ಲಕ್ಷ ದಂಡ

Bar & Bench

ತಾನು ನೀಡಿರುವ ತೀರ್ಪುಗಳ ಮಾರ್ಪಾಟಿಗೆ ಅಥವಾ ಸ್ಪಷ್ಟನೆಗಾಗಿ ಮಿಸಲೇನಿಯಸ್‌ ಅರ್ಜಿಗಳನ್ನು (ಎಂಎ) ಸಲ್ಲಿಸುವ ಮುಖೇನ ಪರೋಕ್ಷವಾಗಿ ತನ್ನ ತೀರ್ಪುಗಳ ಮರುಪರಿಶೀಲನೆಗೆ ಯತ್ನಿಸುವ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಕೆಂಡಾಮಂಡಲವಾಗಿದ್ದು, ದುಬಾರಿ ದಂಡ ವಿಧಿಸಿದೆ [ಘನಶ್ಯಾಮ್‌ ಮಿಶ್ರಾ ಅಂಡ್‌ ಸನ್ಸ್ ಪ್ರೈ ಲಿ. ವರ್ಸಸ್‌ ಇಡೆಲ್‌ವೈಸ್‌ ಅಸೆಟ್‌ ರಿಕನ್ಸ್‌ಟ್ರಕ್ಷನ್‌ ಕಂಪೆನಿ ಲಿ. ಅಂಡ್ ಅದರ್ಸ್].

ಮಿಸಲೇನಿಯಸ್‌ ಅರ್ಜಿಗಳನ್ನು ಸಲ್ಲಿಸುವ ಮುಖೇನ ತಾನು ಈ ಹಿಂದೆ ಏಪ್ರಿಲ್‌ 2021ರಲ್ಲಿ ನೀಡಿದ್ದ ತೀರ್ಪಿನ ಮರುಪರಿಶೀಲನೆಯನ್ನು ಕೋರಿದ್ದ ಎರಡು ಸಂಸ್ಥೆಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಬಿ ಆರ್‌ ಗವಾಯಿ ಮತ್ತು ನ್ಯಾ. ಪಿ ಎಸ್‌ ನರಸಿಂಹ ಅವರ ನೇತೃತ್ವದ ಪೀಠವು ಎರಡು ಸಂಸ್ಥೆಗಳಿಗೆ ತಲಾ ರೂ. 10 ಲಕ್ಷ ದಂಡವನ್ನು ವಿಧಿಸಿ ಇತ್ತೀಚೆಗೆ ಆದೇಶಿಸಿದೆ. ಘನಶ್ಯಾಮ್‌ ಮಿಶ್ರಾ ಅಂಡ್‌ ಸನ್ಸ್ ಪ್ರೈ ಲಿ. ಮತ್ತು ಇಡೆಲ್‌ವೈಸ್‌ ಅಸೆಟ್‌ ರಿಕನ್ಸ್‌ಟ್ರಕ್ಷನ್‌ ಕಂಪೆನಿ ಲಿ. ಅಂಡ್ ಅದರ್ಸ್ ದಂಡ ಪಾವತಿಸಬೇಕಿರುವ ಎರಡು ಸಂಸ್ಥೆಗಳು.

"ಈ ನ್ಯಾಯಾಲಯವು ನೀಡಿರುವ ಆದೇಶಗಳನ್ನು ಮಾರ್ಪಡಿಸಲು ಕೋರಿ ಅಥವಾ ಸ್ಪಷ್ಟನೆಗೆ ಕೋರಿ ಅರ್ಜಿಗಳನ್ನು ಸಲ್ಲಿಸುವ ಮುಖೇನ ಪರೋಕ್ಷವಾಗಿ ಈ ಹಿಂದೆ ನೀಡಿರುವ ಆದೇಶಗಳನ್ನು ಮರುಪರಿಶೀಲಿಸಲು ಕೋರುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚು ಕಂಡುಬರುತ್ತಿದೆ. ನಮ್ಮ ದೃಷ್ಟಿಯಲ್ಲಿ ಇದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ. ಇಂತಹ ಅರ್ಜಿಗಳನ್ನು ಇತ್ಯರ್ಥಪಡಿಸಲು ಮುಂದಾಗುವುದರಿಂದ ನ್ಯಾಯಾಲಯದ ಅತ್ಯಮೂಲ್ಯ ಸಮಯವು ಹಾಳಾಗಲಿದ್ದು ದಶಕಗಳಿಂದ ನ್ಯಾಯದಾನಕ್ಕಾಗಿ ಕಾದಿರುವ ವಿವಿಧ ವ್ಯಾಜ್ಯಗಳ ವ್ಯಾಜ್ಯಕಾರರಿಗೆ ದೊರೆಯಬೇಕಾದ ಸಮಯ ಇದರಿಂದಾಗಿ ದೊರಕದೆ ಹೋಗಲಿದೆ," ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ಹೀಗೆ ಹೇಳಿರುವ ನ್ಯಾಯಾಲಯವು, ಕಾನೂನು ಪ್ರಕ್ರಿಯೆ ದುರುಪಯೋಗ ಪಡಿಸಿಕೊಳ್ಳಲು ಮುಂದಾಗಿದ್ದ ಎರಡು ಸಂಸ್ಥೆಗಳಿಗೆ ತಲಾ ರೂ. 10 ಲಕ್ಷ ದಂಡ ವಿಧಿಸಿ, ದಂಡದ ಮೊತ್ತವನ್ನು ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ಗಳ ಕ್ಷೇಮಾಭಿವೃದ್ಧಿ ನಿಧಿಗೆ ಸಲ್ಲಿಸುವಂತೆ ಸೂಚಿಸಿತು.