Gruhalakshmi scheme and Karnataka HC 
ಸುದ್ದಿಗಳು

ಗೃಹಲಕ್ಷ್ಮಿ ಯೋಜನೆಯ ₹2,000 ಸಹಾಯಧನವನ್ನು ಹಕ್ಕು ಎಂದು ಫಲಾನುಭವಿಗಳು ಕೇಳುವಂತಿಲ್ಲ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ

₹5,000 ಕೋಟಿ ಬಾಕಿ ಬಿಡುಗಡೆ ಕೋರಿ ಸಲ್ಲಿಸಿರುವ ಪಿಐಎಲ್‌ಗೆ ಆಕ್ಷೇಪ; ಆರ್ಥಿಕ ಸಂಕಷ್ಟ, ಆಡಳಿತಾತ್ಮಕ ಅನಿವಾರ್ಯತೆಗಳ ನೆಪ ನೀಡಿದ ರಾಜ್ಯ ಸರ್ಕಾರ.

Bar & Bench

ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳು ಮಾಸಿಕ ₹2,000 ಆರ್ಥಿಕ ನೆರವನ್ನು ತಮ್ಮ ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಯೋಜನೆಯ ಅನುಷ್ಠಾನವು ಆಡಳಿತಾತ್ಮಕ ಅನಿವಾರ್ಯತೆಗಳು ಹಾಗೂ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಒಳಪಟ್ಟಿರುತ್ತದೆ ಎಂದು ಸರ್ಕಾರ ವಾದಿಸಿದೆ.

ಗೃಹಲಕ್ಷ್ಮಿ ಯೋಜನೆಯಡಿ 1.26 ಕೋಟಿ ಮಹಿಳಾ ಫಲಾನುಭವಿಗಳಿಗೆ 2025ರ ಫೆಬ್ರವರಿ ಮತ್ತು ಮಾರ್ಚ್ ಎರಡು ಕಂತುಗಳ ತಲಾ ₹2,000 ಸಹಾಯಧನದ ಒಟ್ಟು ₹5,000 ಕೋಟಿ ಬಾಕಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ಷೇಪಿಸಿ ಬೆಂಗಳೂರಿನ ಆರ್ ಗಂಗಾ ಮತ್ತು ಜಿ ಡಿ ಪವಿತ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಕೆ ಎಸ್ ಭರತ್ ಕುಮಾರ್ ಅವರ ವಿಭಾಗೀಯ ಪೀಠ ನಡೆಸಿತು.

ಯೋಜನೆಯ ಅನುಷ್ಠಾನವು ಆಡಳಿತಾತ್ಮಕ ಅನಿವಾರ್ಯತೆಗಳು ಮತ್ತು ರಾಜ್ಯದ ಆರ್ಥಿಕ ಸಂಕಷ್ಟಗಳಿಗೆ ಒಳಪಟ್ಟಿರುತ್ತದೆ ಎಂದು ರಾಜ್ಯ ಸರ್ಕಾರ ತನ್ನ ಆಕ್ಷೇಪಣೆಯಲ್ಲಿ ತಿಳಿಸಿದೆ.

ಮಹಿಳೆಯರನ್ನು ಸಬಲಗೊಳಿಸುವ ಉದ್ದೇಶದಿಂದ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಆರ್ಥಿಕ ನೆರವು ನೀಡಲು ಗೃಹಲಕ್ಷ್ಮಿ ಯೋಜನೆಯನ್ನು ಪರಿಚಯಿಸಲಾಗಿದೆಯಾದರೂ, ಅದರ ಅನುಷ್ಠಾನವು ಆಡಳಿತಾತ್ಮಕ ಅಗತ್ಯಗಳನ್ನು ಅವಲಂಬಿಸಿದೆ. ಕಲ್ಯಾಣ ಯೋಜನೆಯ ಅಸ್ತಿತ್ವ ಮಾತ್ರವೇ ಫಲಾನುಭವಿಗಳಿಗೆ ನ್ಯಾಯಾಂಗ ಮಧ್ಯಪ್ರವೇಶದ ಮೂಲಕ ಆರ್ಥಿಕ ನೆರವು ಪಡೆಯುವ ನಿರಾಕರಿಸಲಾಗದ ಹಕ್ಕನ್ನು ನೀಡುವುದಿಲ್ಲ ಎಂದು ಸರ್ಕಾರ ವಾದಿಸಿದೆ.

“ಯೋಜನೆಯ ಅನುಷ್ಠಾನವು ಬಹುಮಟ್ಟಿಗೆ ಆಡಳಿತಾತ್ಮಕ ಅನಿವಾರ್ಯತೆಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಫಲಾನುಭವಿಗಳು ಇದನ್ನು ತಮ್ಮ ಹಕ್ಕು ಎಂದು ಪರಿಗಣಿಸಿ ನ್ಯಾಯಾಂಗ ಮಧ್ಯಪ್ರವೇಶದ ಮೂಲಕ ಯೋಜನೆಯನ್ನು ಜಾರಿಗೊಳಿಸುವಂತೆ ಕೋರುವಂತಿಲ್ಲ,” ಎಂದು ಸರ್ಕಾರ ತನ್ನ ಆಕ್ಷೇಪಣೆಯಲ್ಲಿ ತಿಳಿಸಿದೆ.

ರಾಜ್ಯವು ನೈಜ ಆರ್ಥಿಕ ಸಂಕಷ್ಟದಿಂದಾಗಿ ಸಹಾಯಧನವನ್ನು ಬಿಡುಗಡೆ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ, ಫಲಾನುಭವಿಗಳು 'ನ್ಯಾಯಸಮ್ಮತ ನಿರೀಕ್ಷೆಯ ಸಿದ್ಧಾಂತ' ಆಧರಿಸಿ ಹಣ ಬಿಡುಗಡೆಗೆ ಒತ್ತಾಯಿಸುವಂತಿಲ್ಲ ಎಂದೂ ಸರ್ಕಾರ ವಾದಿಸಿದೆ.

“ಆರ್ಥಿಕ ನೆರವು ನೀಡುವ ಕಲ್ಯಾಣ ಯೋಜನೆಯ ಅಸ್ತಿತ್ವ ಮಾತ್ರವೇ, ರಾಜ್ಯವು ನೈಜ ಆರ್ಥಿಕ ಸಂಕಷ್ಟಗಳಿಂದಾಗಿ ನೆರವು ಬಿಡುಗಡೆ ಮಾಡಲು ಸಾಧ್ಯವಾಗದಿರುವ ಸಂದರ್ಭದಲ್ಲಿ, ನ್ಯಾಯಸಮ್ಮತ ನಿರೀಕ್ಷೆಯ ಆಧಾರದ ಮೇಲೆ ಅರ್ಜಿದಾರರಿಗೆ ಅಂತಹ ಆರ್ಥಿಕ ನೆರವು ಪಡೆಯುವ ನಿರಾಕರಿಸಲಾಗದ ಹಕ್ಕನ್ನು ನೀಡುವುದಿಲ್ಲ,” ಎಂದು ಆಕ್ಷೇಪಣಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಸಮ್ಮತ ನಿರೀಕ್ಷೆಯ ಸಿದ್ಧಾಂತವೊಂದನ್ನೇ ಆಧರಿಸಿ ಕಲ್ಯಾಣ ಯೋಜನೆಯಡಿ ಆರ್ಥಿಕ ನೆರವು ಪಡೆಯುವ ಹಕ್ಕನ್ನು ಪ್ರತಿಪಾದಿಸಲಾಗುವುದಿಲ್ಲ. ಈ ಆಧಾರವೊಂದರಿಂದ ಅಂತಹ ಹಕ್ಕನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಸಹಾಯಧನವನ್ನು ಆರ್ಥಿಕ ಸಂಕಷ್ಟದ ಕಾರಣದಿಂದ ಬಿಡುಗಡೆ ಮಾಡಿಲ್ಲ ಎಂಬ ಸರ್ಕಾರದ ಒಪ್ಪಿಗೆಯ ಹಿನ್ನೆಲೆಯಲ್ಲಿ ಈ ಆಕ್ಷೇಪಣೆ ಸಲ್ಲಿಸಲಾಗಿದೆ.

ಈ ಎರಡು ತಿಂಗಳ ಸಹಾಯಧನ ಬಿಡುಗಡೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿತ್ತು. ಆದರೆ, ಅಗತ್ಯ ಅನುದಾನ ಬಿಡುಗಡೆಯಾಗಿರಲಿಲ್ಲ ಎಂದು ಸರ್ಕಾರ ತನ್ನ ಆಕ್ಷೇಪಣೆಯಲ್ಲಿ ತಿಳಿಸಿದೆ.

ಹೀಗಾಗಿ, ಕಾನೂನಿನ ದೃಷ್ಟಿಯಿಂದ ಅಥವಾ ವಾಸ್ತವಾಂಶಗಳ ಆಧಾರದ ಮೇಲೆ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ವಾದಿಸಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದೆ.

ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ತಾರಾನಾಥ್ ಪೂಜಾರಿ ಆಕ್ಷೇಪಣಾ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಸರ್ಕಾರದ ವಾದ ಆಲಿಸಿದ ವಿಭಾಗೀಯ ಪೀಠವು, ಅರ್ಜಿದಾರರ ಪರ ವಕೀಲರಿಗೆ ಸರ್ಕಾರದ ಆಕ್ಷೇಪಣೆಗೆ ಪ್ರತ್ಯುತ್ತರ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಿದೆ.