“ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಲಾದ ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ವೈಯಕ್ತಿಕವಾಗಿ ಘೋಷಿಸಿ ಚುನಾವಣೆಯಲ್ಲಿ ಅಕ್ರಮ ಎಸಗಿ ಜಯಗಳಿಸಿದ್ದಾರೆ ಎಂಬ ಆರೋಪ ಸಮರ್ಥನೀಯವಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಪ್ರೊ. ಕೆ ರವಿವರ್ಮ ಕುಮಾರ್ ಸೋಮವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದರು.
ಸಿದ್ದರಾಮಯ್ಯ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಮೈಸೂರಿನ ವರುಣಾ ಹೋಬಳಿಯ ಕೂಡನಹಳ್ಳಿ ನಿವಾಸಿ ಕೆ ಎಂ ಶಂಕರ್ ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರವಿವರ್ಮ ಕುಮಾರ್ ವಾದ ಮುಂದುವರಿಸಿ, “ಅರ್ಜಿದಾರರ ಆರೋಪವನ್ನು ಗಮನಿಸಿದರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ರೀತಿಯಂತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಮಾಡಲಾಗಿದೆ. ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಹಣವನ್ನು ಬಳಸಲಾಗುತ್ತಿದೆಯೇ ಹೊರತು ಸಿದ್ದರಾಮಯ್ಯವರ ವೈಯಕ್ತಿಕ ಆದಾಯವನ್ನಲ್ಲ” ಎಂದು ಪೀಠಕ್ಕೆ ಸ್ಪಷ್ಟಪಡಿಸಿದರು.
“ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಪರ ವಕೀಲರು ಕೆಲವು ದಾಖಲೆಗಳನ್ನು ಸಲ್ಲಿಸಿದ್ದು, ಇದಕ್ಕೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಲ್ಲಿಸಿ” ಎಂದು ಪ್ರತಿವಾದಿಗಳ ಪರ ವಕೀಲರಿಗೆ 15 ದಿನಗಳ ಕಾಲಾವಕಾಶ ನೀಡಿದ ಪೀಠ ವಿಚಾರಣೆ ಮುಂದೂಡಿದೆ.