Karnataka High Court 
ಸುದ್ದಿಗಳು

ಅತಿಥಿ ಉಪನ್ಯಾಸಕರ ಗೌರವಧನ ಪಾವತಿ ವಿಚಾರ: ಮೈಸೂರು ವಿವಿ ವಿರುದ್ಧ ನ್ಯಾಯಾಂಗ ನಿಂದನೆ ಕೈಬಿಟ್ಟ ಹೈಕೋರ್ಟ್

ಗೌರವಧನ ಪಾವತಿ ವಿಚಾರವನ್ನು ವಿಶ್ವವಿದ್ಯಾಲಯವು ಪರಿಗಣಿಸಿದ್ದು, ಅರ್ಜಿದಾರರು ಯುಜಿಸಿ ಮಾರ್ಗಸೂಚಿಗಳ ಪ್ರಕಾರ ಗೌರವಧನ ಪಡೆಯಲು ಅರ್ಹರಿಲ್ಲ ಎಂದು ತೀರ್ಮಾನಿಸಿದೆ. ಆ ಮೂಲಕ ವಿಶ್ವವಿದ್ಯಾಲಯವು ಏಕ ಸದಸ್ಯ ಪೀಠದ ಆದೇಶ ಪಾಲಿಸಿದೆ ಎಂದ ಪೀಠ.

Bar & Bench

ಮೈಸೂರು ವಿಶ್ವವಿದ್ಯಾಲಯ ಹಾಗೂ ಅದರ ಸಂಯೋಜಿತ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಯುಜಿಸಿ ಮಾರ್ಗಸೂಚಿಗಳನ್ವಯ ಗೌರವಧನ ಪಾವತಿಸುವ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಮೇಲಿನ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈಬಿಟ್ಟು ಹೈಕೋರ್ಟ್ ಬುಧವಾರ ಆದೇಶಿಸಿದೆ.

ಈ ಕುರಿತು ಡಾ ಎಸ್ ಶ್ವೇತಾ ಸೇರಿದಂತೆ ಮೈಸೂರು ವಿಶ್ವವಿದ್ಯಾಲಯ, ಮಹಾರಾಜ ಮತ್ತು ಯುವರಾಜ ಕಾಲೇಜಿನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 10 ಮಂದಿ ಅತಿಥಿ ಉಪನ್ಯಾಸಕರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಯುಜಿಸಿ 2019 ಜನವರಿ 28ರಂದು ಪ್ರಕಟಿಸಿದ ಮಾರ್ಗಸೂಚಿಗಳ ಅನುಸಾರ ಅರ್ಜಿದಾರರಿಗೆ ಗೌರವಧನ ಪಾವತಿಸುವ ವಿಚಾರವನ್ನು ಮೈಸೂರು ವಿಶ್ವವಿದ್ಯಾಲಯವು ಮೂರು ವಾರದಲ್ಲಿ ಪರಿಗಣಿಸಬೇಕು. ಈ ವೇಳೆ ಯುಜಿಸಿ ಮಾರ್ಗಸೂಚಿಗಳ ಬಗ್ಗೆ ಗಮನ ಹರಿಸಬೇಕು. ಒಂದೊಮ್ಮೆ ಗೌರವಧನ ಪಡೆಯಲು ಅರ್ಜಿದಾರರು ಅರ್ಹರಾಗಿದ್ದಾರೆ ಎಂಬ ತೀರ್ಮಾನಕ್ಕೆ ಬಂದಲ್ಲಿ, ಕೂಡಲೇ ಗೌರವಧನ ಪಾವತಿಗೆ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಏಕ ಸದಸ್ಯ ಪೀಠ 2022 ಸೆಪ್ಟೆಂಬರ್ 28ರಂದು ಮಧ್ಯಂತರ ಆದೇಶ ಹೊರಡಿಸಿತ್ತು ಎಂದು ವಿಭಾಗೀಯ ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಅಲ್ಲದೆ, ಗೌರವಧನ ಪಾವತಿ ವಿಚಾರವನ್ನು ವಿಶ್ವವಿದ್ಯಾಲಯವು ಪರಿಗಣಿಸಿದ್ದು, ಅರ್ಜಿದಾರರು ಯುಜಿಸಿ ಮಾರ್ಗಸೂಚಿಗಳ ಪ್ರಕಾರ ಗೌರವಧನ ಪಡೆಯಲು ಅರ್ಹರಿಲ್ಲ ಎಂದು ತೀರ್ಮಾನಿಸಿದೆ. ಆ ಮೂಲಕ ವಿಶ್ವವಿದ್ಯಾಲಯವು ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಪಾಲಿಸಿದೆ. ಇದರಿಂದ ಪ್ರತಿವಾದಿಗಳಾಗಿರುವ ಸರ್ಕಾರ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಮೈಸೂರು ವಿಶ್ವವಿದ್ಯಾಲಯ, ಮಹಾರಾಜ ಮತ್ತು ಯುವರಾಜ ಕಾಲೇಜು ಪ್ರಾಂಶುಪಾಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಮುಂದುವರಿಸಲಾಗದು ಎಂದು ತಿಳಿಸಿದ ವಿಭಾಗೀಯ ಪೀಠ ಅರ್ಜಿ ಇತ್ಯರ್ಥಪಡಿಸಿದೆ.

ಯುಜಿಸಿ ಮಾರ್ಗಸೂಚಿಗಳನ್ವಯ ಗೌರವಧನ ಪಾವತಿಸಲು ತಾವು ಅರ್ಹರಿಲ್ಲ ಎಂದು ವಿಶ್ವವಿದ್ಯಾಲಯ ಹೇಳಿದೆ. ತನ್ಮೂಲಕ ಹೈಕೋರ್ಟ್ ಏಕ ಸದಸ್ಯ ಪೀಠವು 2022 ಸೆಪ್ಟೆಂಬರ್ 28ರಂದು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದೆ. ಹಾಗಾಗಿ, ಪ್ರತಿವಾದಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಅರ್ಜಿದಾರರು ಕೋರಿದ್ದರು.