ಸುದ್ದಿಗಳು

ಮಕ್ಕಳ ಕಸ್ಟಡಿ ಕುರಿತಾದ ಮಾರ್ಗಸೂಚಿ ಶೀಘ್ರ ಅಂತಿಮ: ಹೈಕೋರ್ಟ್‌ಗೆ ಕೇಂದ್ರದ ವಿವರಣೆ

ಮಕ್ಕಳ ಕಸ್ಟಡಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಅಂತಿಮಗೊಳಿಸಲು ಅಗತ್ಯವಾದ ಕಾಲಮಿತಿ ಮತ್ತು ಈ ಸಂಬಂಧ ಅನುಸರಿಸಲಾಗುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ ಹೈಕೋರ್ಟ್.‌

Bar & Bench

ಮಕ್ಕಳ ಕಸ್ಟಡಿ ನಿರ್ಧರಿಸುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಎರಡು ಅಥವಾ ಮೂರು ತಿಂಗಳಲ್ಲಿ ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಮಕ್ಕಳ ಕಸ್ಟಡಿಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ ರೂಪಿಸಲು ನಿರ್ದೇಶಿಸುವ ಸಂಬಂಧ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ವಿಭಾಗೀಯ ಪೀಠ ನಡೆಸಿತು.

“ಕೇಂದ್ರ ಸರ್ಕಾರದ ವಕೀಲೆ ಸಾಧನಾ ದೇಸಾಯಿ ಅವರು ಮಕ್ಕಳ ಕಸ್ಟಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ರಚಿಸಲು ಕೆಲಸ ನಡೆಯುತ್ತಿದ್ದು, ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯ ಕೇಳಲಾಗುತ್ತದೆ. 2-3 ತಿಂಗಳಲ್ಲಿ ಮಾರ್ಗಸೂಚಿಯನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ “ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ಅಲ್ಲದೇ, ಮಕ್ಕಳ ಕಸ್ಟಡಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಅಂತಿಮಗೊಳಿಸಲು ಅಗತ್ಯವಾದ ಕಾಲಮಿತಿ ಮತ್ತು ಈ ಸಂಬಂಧ ಅನುಸರಿಸಲಾಗುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿ, ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್‌ 19ಕ್ಕೆ ಮುಂದೂಡಿದೆ.

“ಪೋಷಕರು ಮಕ್ಕಳನ್ನು ತಮ್ಮ ವಶಕ್ಕೆ ಪಡೆಯಲು ನಡೆಸುವ ಕಸ್ಟಡಿ ಕದನಗಳಲ್ಲಿ ಸಿಲುಕಿಕೊಳ್ಳುವ ಮಕ್ಕಳು ಸಂಕೀರ್ಣವಾದ ಕೌಟುಂಬಿಕ ಘರ್ಷಣೆಗಳ ಕೇಂದ್ರಬಿಂದುವಾಗಿದ್ದಾರೆ. ಕಸ್ಟಡಿ ವಿವಾದಗಳು ಉಲ್ಬಣಿಸಿ ಮಗುವಿನ ಯೋಗಕ್ಷೇಮಕ್ಕಿಂತ ಹೆಚ್ಚಾಗಿ ವಯಸ್ಕರ ಅಹಂ ಮುಖ್ಯವಾಗುತ್ತದೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿದ್ದಾರೆ.