Custodial Violence 
ಸುದ್ದಿಗಳು

ಕಸ್ಟಡಿ ಕಿರುಕುಳ ಪ್ರಕರಣ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಖುಲಾಸೆಗೊಳಿಸಿದ ಗುಜರಾತ್ ನ್ಯಾಯಾಲಯ

ಸಂಜೀವ್ ಭಟ್ ವಿರುದ್ಧದ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದ ಅಡಿಷನಲ್ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಮುಖೇಶ್ ಪಾಂಡ್ಯ ಅವರು ಭಟ್ ಅವರನ್ನು ಖುಲಾಸೆಗೊಳಿಸಿದರು.

Bar & Bench

ದಶಕಗಳ ಹಿಂದಿನ ಅಂದರೆ 1997ರ ಕಸ್ಟಡಿ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಗುಜರಾತ್‌ನ ಪೋರಬಂದರ್‌ ನ್ಯಾಯಾಲಯ ಖುಲಾಸೆಗೊಳಿಸಿದೆ.

ಸಂಜೀವ್‌ ಭಟ್‌ ವಿರುದ್ಧದ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದ ಅಡಿಷನಲ್‌ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ (ಎಸಿಜೆಎಂ) ಮುಖೇಶ್‌ ಪಾಂಡ್ಯ ಅವರು ಭಟ್‌ ಅವರನ್ನು ಖುಲಾಸೆಗೊಳಿಸಿದರು.

ಸಿಆರ್‌ಪಿಸಿ  248 (1)ನೇ ಸೆಕ್ಷನ್‌ ಅಡಿಯಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಐಪಿಸಿ ಸೆಕ್ಷನ್‌ 326, 330, 34ರ ಅಡಿ ಆರೋಪಿತರಾಗಿದ್ದ ವ್ಯಕ್ತಿಯನ್ನು ಖುಲಾಸೆಗೊಳಿಸಲಾಗಿದ.ೆ ಆರೋಪಿ ಜೈಲಿನಲ್ಲಿದ್ದು ಮುಂದಿನ ಮೇಲ್ಮನವಿಯವರೆಗೆ ಜಾಮೀನು ನೀಡುವ ಆದೇಶ ಹೊರಡಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಸಂಜೀವ್‌ ಭಟ್‌ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ವೇಳೆ  ಐಪಿಸಿ ಸೆಕ್ಷನ್‌ 326  (ಅಪಾಯಕಾರಿ ಆಯುಧ ಅಥವಾ ಸಾಧನಗಳಿಂದ ಸ್ವಇಚ್ಛೆಯಿಂದ ತೀವ್ರ ಗಾಯ ಉಂಟು ಮಾಡುವುದು), 330 (ಒತ್ತಾಯದ ಮೂಲಕ ತಪ್ಪೊಪ್ಪಿಗೆ ಹೇಳಿಕೆ ಪಡೆಯುವುದು ಅಥವಾ ಸ್ವತ್ತನ್ನು ಹಿಂಪಡೆಯುವುದಕ್ಕಾಗಿ ಸ್ವಇಚ್ಛೆಯಿಂದ ತೀವ್ರ ಗಾಯ ಉಂಟು ಮಾಡುವುದು) ಮತ್ತು 34 (ಅನೇಕ ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಆದರೆ ಪ್ರಕರಣದ ದೂರುದಾರನನ್ನು ಅಪರಾಧ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಜೊತೆಗೆ ಬೆದರಿಕೆ ಮತ್ತು ಅಪಾಯಕಾರಿ ಶಸ್ತ್ರಾಸ್ತ್ರ ಬಳಸಿ ಆತನನ್ನು ಶರಣಾಗುವಂತೆ ಒತ್ತಾಯಿಸಲಾಗಿತ್ತು ಎಂಬ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಿಆಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

 ಆ ವೇಳೆ (1997) ಸಾರ್ವಜನಿಕ ಅಧಿಕಾರಿಯಾಗಿ ಅಧಿಕೃತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭಟ್‌ ಅವರನ್ನು  ವಿಚಾರಣೆಗೆ ಒಳಪಡಿಸಲು ಅಗತ್ಯವಾದ ಮಂಜೂರಾತಿ ಪಡೆದಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಪ್ರಸ್ತಾಪಿಸಿದೆ.

ಗುಜರಾತ್-ಕೇಡರ್ ಮಾಜಿ ಅಧಿಕಾರಿಯಾಗಿರುವ ಅವರಿಗೆ 1990ರ ಕಸ್ಟಡಿ ಸಾವಿಗೆ ಸಂಬಂಧಿಸಿದ  ಪ್ರತ್ಯೇಕ ಪ್ರಕರಣದಲ್ಲಿ 2019ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 1989ರ ಕೋಮುಗಲಭೆಗೆ ಸಂಬಂಧಿಸಿದಂತೆ ಬಂಧಿತಾಗಿದ್ದವರ ಸಾವಿಗೆ ಕಾರಣರಾದ ಆರೋಪದಲ್ಲಿ ಜಾಮ್ನಗರದ ಸೆಷನ್ಸ್ ನ್ಯಾಯಾಲಯ ಭಟ್ ತಪ್ಪಿತಸ್ಥರೆಂದು ತೀರ್ಪು ನೀಡಿತ್ತು.

ಮತ್ತೊಂದೆಡೆ ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಉದ್ದೇಶದಿಂದ ಮಾದಕ ವಸ್ತು ಇರಿಸಿದ್ದ ಇಪ್ಪತ್ತೇಳು ವರ್ಷ ಹಳೆಯದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತಿನ ಬನಸ್ಕಾಂತ ಜಿಲ್ಲೆಯ ಸೆಷನ್ಸ್ ನ್ಯಾಯಾಲಯ ಎನ್‌ಡಿಪಿಎಸ್‌ ಕಾಯಿದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಭಟ್‌ ಅವರನ್ನು ದೋಷಿ ಎಂದು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಅವರು 20 ವರ್ಷಗಳ ಸೆರೆವಾಸ ಶಿಕ್ಷೆ ಅನುಭವಿಸುತ್ತಿದ್ದಾರೆ.

ಆದರೆ 1997ರ ಕಸ್ಟಡಿ ಕಿರುಕುಳ ಪ್ರಕರಣದಲ್ಲಿ ಅವರನ್ನು ಪೋರ್‌ಬಂದರ್‌ ನ್ಯಾಯಾಲಯ ಇದೀಗ ದೋಷಮುಕ್ತಗೊಳಿಸಿದೆ.