Mahesh Langa 
ಸುದ್ದಿಗಳು

ಜಿಎಸ್‌ಟಿ ವಂಚನೆ ಪ್ರಕರಣ: ಪತ್ರಕರ್ತ ಮಹೇಶ್ ಲಾಂಗಾಗೆ ಜಾಮೀನು ನಿರಾಕರಿಸಿದ ಗುಜರಾತ್ ನ್ಯಾಯಾಲಯ

ಲಾಂಗಾ ಅವರು ಅಪರಾಧದಲ್ಲಿ ಸಕ್ರಿಯ ಪಾತ್ರ ವಹಿಸಿದ್ದು ಆದಾಯ ತೆರಿಗೆ ಮತ್ತು ಜಿಎಸ್‌ಟಿಯಿಂದ ತಪ್ಪಿಸಿಕೊಳ್ಳಲು ಉಳಿದ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ್ದರು ಎಂದು ನ್ಯಾಯಾಲಯ ತಿಳಿಸಿದೆ.

Bar & Bench

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಆರೋಪ ಒಳಗೊಂಡ ಪ್ರಕರಣದಲ್ಲಿ ಬಂಧಿತರಾಗಿರುವ 'ದ ಹಿಂದೂʼ ಪತ್ರಿಕೆಯ ಪತ್ರಕರ್ತ ಮಹೇಶ್ ಲಾಂಗಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಗುಜರಾತ್ ನ್ಯಾಯಾಲಯ ತಿರಸ್ಕರಿಸಿದೆ [ಮಹೇಶ್ದನ್ ಪ್ರಭುದನ್ ಲಾಂಗಾ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ].

ಲಾಂಗಾ ಅವರು ಅಪರಾಧದಲ್ಲಿ ಸಕ್ರಿಯ ಪಾತ್ರ ವಹಿಸಿದ್ದು ಆದಾಯ ತೆರಿಗೆ ಮತ್ತು ಜಿಎಸ್‌ಟಿ ತಪ್ಪಿಸಿಕೊಳ್ಳಲು ಉಳಿದ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಹೆಚ್ಚುವರಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಮನೀಶ್ ವಿ ಚೌಹಾಣ್ ತಿಳಿಸಿದ್ದಾರೆ.

ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ಗಳನ್ನು (ಐಟಿಸಿ) ಪಡೆಯಲು ಧ್ರುವಿ ಎಂಟರ್‌ಪ್ರೈಸಸ್‌ನೊಂದಿಗೆ ಲಾಂಗಾ ಸುಮಾರು ₹ 44 ಕೋಟಿ ವಹಿವಾಟಿನ ತೋರಿಕೆ ಮಾಡಿದ್ದಾರೆ. ಆ ಮೂಲಕ ರಾಷ್ಟ್ರಕ್ಕೆ ಕೋಟ್ಯಂತರ ರೂಪಾಯಿ ನಷ್ಟವನ್ನು ಉಂಟುಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಲಾಂಗಾ ಅವರು ತಮ್ಮ ಸ್ವಂತ ಆರ್ಥಿಕ ಲಾಭಕ್ಕಾಗಿ ಮತ್ತು ತೆರಿಗೆ ವಂಚನೆ ಮತ್ತು ಸರ್ಕಾರಕ್ಕೆ ಹಾನಿ ಮಾಡುವ ಉದ್ದೇಶದಿಂದ 'ಡಿಎ ಎಂಟರ್‌ಪ್ರೈಸ್' ಹೆಸರಿನ ಸಂಸ್ಥೆಯಲ್ಲಿ ತಮ್ಮ ಪತ್ನಿ ಕವಿತಾಬೆನ್ ಲಾಂಗಾ ಅವರನ್ನು ಪಾಲುದಾರರನ್ನಾಗಿ ಮಾಡಿದ್ದಾರೆ ಎನ್ನುವುದನ್ನು ನ್ಯಾಯಾಲಯ ಗಮನಿಸಿತು.

ಅಕ್ಟೋಬರ್ 8 ರಂದು ಬಂಧಿತರಾಗಿದ್ದ ಲಾಂಗಾ ಅವರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹತ್ತು ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಮನವಿಯನ್ನು ಅಕ್ಟೋಬರ್ 14ರಂದು ಹಿಂಪಡೆಯಲಾಗಿತ್ತು .

ಜಿಎಸ್‌ಟಿ ವಂಚನೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದ್ದು, ಆರೋಪಿಗಳು ನಕಲಿ ಬಿಲ್‌ ಮೂಲಕ ಐಟಿಸಿ ಪಡೆದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.

ಯೋಜನೆಯ ಭಾಗವಾಗಿ ನಕಲಿ ದಾಖಲೆಗಳನ್ನು ಬಳಸಿ 220ಕ್ಕೂ ಹೆಚ್ಚು ಬೇನಾಮಿ ಸಂಸ್ಥೆಗಳನ್ನು ಸ್ಥಾಪಿಸಲಾಗಿತ್ತು ಎಂದು ಎಫ್‌ಐಆರ್‌‌ ವಿವರಿಸಿತ್ತು. ಅವುಗಳಲ್ಲಿ ಒಂದು ಸಂಸ್ಥೆಗೂ ಪತ್ರಕರ್ತ ಲಾಂಗಾ ಅವರಿಗೂ ನಂಟಿದೆ ಎಂದು ಪೊಲೀಸರು ಆರೋಪಿಸಿದ್ದರು. ಇದು ಆಧಾರರಹಿತ. ಎಫ್ಐಆರ್‌ನಲ್ಲಿ ಲಾಂಗಾ ಅವರ ಹೆಸರಿಲ್ಲ. ಬದಲಿಗೆ, ಅವರ ಸೋದರ ಸಂಬಂಧಿಯ ಹೆಸರನ್ನು ಸಾಕ್ಷಿಯಾಗಿ ಉಲ್ಲೇಖಿಸಲಾಗಿದೆ ಎಂದು ವಾದಿಸಲಾಗಿತ್ತು.

ತಮ್ಮ ಜಾಮೀನು ಅರ್ಜಿಯಲ್ಲಿ ಲಾಂಗಾ, ʼಕಂಪನಿಯ ಕೆಲಸ ಅಥವಾ ವ್ಯವಹಾರಗಳಿಗೆ ಸಂಬಂಧಿಸಿದಂತೆ ತನಗೆ ಕೊಂಚವೂ ನಂಟಿದೆ ಎಂಬುದನ್ನು ವಿವರಿಸಲು ಯಾವುದೇ ಸಾಕ್ಷ್ಯ ಇಲ್ಲʼ ಎಂದು ಸಮರ್ಥಿಸಿಕೊಂಡಿದ್ದರು.