ಸಂಜೀವ್ ಭಟ್ 
ಸುದ್ದಿಗಳು

ಸಂಜೀವ್ ಭಟ್‌ಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಗುಜರಾತ್ ನ್ಯಾಯಾಲಯ: ಜೀವಾವಧಿ ಸಜೆ ಅನುಭವಿಸಿದ ಬಳಿಕ ಈ ಶಿಕ್ಷೆ ಜಾರಿ

ಭಟ್ ಈಗಾಗಲೇ 1990ರ ಕಸ್ಟಡಿ ಸಾವು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು ಈ ಶಿಕ್ಷಾವಧಿ ಮುಗಿದ ಬಳಿಕ ಮಾದಕ ವಸ್ತು ಇರಿಸಿದ ಪ್ರಕರಣದಲ್ಲಿ ವಿಧಿಸಲಾಗುತ್ತಿರುವ 20 ವರ್ಷಗಳ ಜೈಲು ಶಿಕ್ಷೆ ಆರಂಭವಾಗಲಿದೆ ಎಂದಿದೆ ನ್ಯಾಯಾಲಯ.

Bar & Bench

ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಉದ್ದೇಶದಿಂದ ಮಾದಕ ವಸ್ತು ಇರಿಸಿದ್ದ 1996ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅವರಿಗೆ ಗುಜರಾತ್‌ನ ಬನಸ್ಕಾಂತ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಗುರುವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ (ಎನ್‌ಡಿಪಿಎಸ್‌)  ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಭಟ್ ಅವರನ್ನು ದೋಷಿ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎನ್ ಠಕ್ಕರ್ ಘೋಷಿಸಿದರು. 20 ವರ್ಷಗಳ ಜೈಲು ಶಿಕ್ಷೆ ಜೊತೆಗೆ ರೂ 4.86 ಲಕ್ಷ ಮೊತ್ತದ ದಂಡವನ್ನು ಭಟ್‌ ಅವರಿಗೆ ವಿಧಿಸಲಾಗಿದೆ.

ಈ ಬೆಳವಣಿಗೆಯನ್ನು ದೃಢಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪಟೇಲ್, ಮಾದಕ ವಸ್ತು ಸಾಗಣೆಗೆ ಹಣ ಒದಗಿಸುವುದು, ಅಹಿತಕರ ಶೋಧ ಕಾರ್ಯಾಚರಣೆ ಮತ್ತು ಮಾದಕ ವಸ್ತು ವಶ, ವಾಣಿಜ್ಯ ಪ್ರಮಾಣದಲ್ಲಿ ಮಾದಕವಸ್ತುಗಳ ತಯಾರಿಕೆ/ ಮಾರಾಟದ ಅಪರಾಧಗಳಿಗೆ ಸಂಬಂಧಿಸಿದಂತೆ ಭಟ್‌ ಅವರಿಗೆ 20 ವರ್ಷಗಳ ಜೈಲು ಶಿಕ್ಷೆ ಜೊತೆಗೆ ರೂ 4.86 ಲಕ್ಷ ದಂಡ ವಿಧಿಸಲಾಗಿದೆ. ಇದಲ್ಲದೆ ಸುಳ್ಳು ದಾಖಲೆ ಸೃಷ್ಟಿ, ಸಾಕ್ಷ್ಯ ನಾಶ ಹಾಗೂ ಸುಳ್ಳೇ ಬಂಧಿಸುವುದು ಮತ್ತು ಫೋರ್ಜರಿ ಅಪರಾಧಗಳಿಗಾಗಿ ಅವರಿಗೆ ಇನ್ನೂ 2 ವರ್ಷ ಸಜೆ ಹಾಗೂ ತಲಾ ರೂ 5,000 ದಂಡ ವಿಧಿಸಲಾಗಿದೆ ಎಂದರು.

ಎನ್‌ಡಿಪಿಎಸ್‌ ಪ್ರಕರಣದಲ್ಲಿ ಈ ಶಿಕ್ಷೆಗಳನ್ನು ಏಕಕಾಲದಲ್ಲಿ ಜಾರಿಗೊಳಿಸಲು ಆದೇಶಿಸಲಾಗಿದೆ ಎಂದು ಅವರು ಹೇಳಿದರು.

ಮಾದಕ ವಸ್ತು ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಬಂಧಿತರಾದ ಭಟ್‌ ಪ್ರಸ್ತುತ ಜೈಲಿನಲ್ಲಿದ್ದು 1990ರಲ್ಲಿ ಪ್ರಭುದಾಸ್ ವೈಷ್ಣಾನಿ ಎಂಬ ವ್ಯಕ್ತಿಯ ಕಸ್ಟಡಿ ಸಾವಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ವಿಶೇಷವೆಂದರೆ ಕಸ್ಟಡಿ ಸಾವಿನ ಪ್ರಕರಣದಲ್ಲಿ ವಿಧಿಸಿದ ಜೀವಾವಧಿ ಶಿಕ್ಷೆ ಪೂರ್ಣಗೊಂಡ ಬಳಿಕ ಮಾದಕ ವಸ್ತು ಇರಿಸಿದ ಪ್ರಕರಣದಲ್ಲಿ ವಿಧಿಸಲಾಗುತ್ತಿರುವ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಭಟ್ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಕಾರಣಕ್ಕೆ ದೇಶದ ಗಮನ ಸೆಳೆದಿದ್ದರು. ಅನಧಿಕೃತ ಗೈರುಹಾಜರಿ ಆಧಾರದ ಮೇಲೆ ಅವರನ್ನು ೨೦೧೫ ರಲ್ಲಿ ಗೃಹ ಸಚಿವಾಲಯ ಸೇವೆಯಿಂದ ವಜಾಗೊಳಿಸಿತ್ತು. ಅದಕ್ಕೂ ಮುನ್ನ 2002ರಲ್ಲಿ ನಡೆದ ಗುಜರಾತ್ ಗಲಭೆಯಲ್ಲಿ ಮೋದಿ ನೇತೃತ್ವದ ಗುಜರಾತ್ ಸರ್ಕಾರ ಭಾಗಿಯಾಗಿತ್ತು ಎಂದು ಆರೋಪಿಸಿ ಅವರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದರು.