ಸುದ್ದಿಗಳು

ಶಿಷ್ಯೆ ಮೇಲೆ ಅತ್ಯಾಚಾರ : ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದ ಗುಜರಾತ್ ನ್ಯಾಯಾಲಯ

Bar & Bench

ಐದು ವರ್ಷಗಳ ಕಾಲ ನಿರಂತರವಾಗಿ ಶಿಷ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದ ದಶಕದಷ್ಟು ಹಿಂದಿನ ಪ್ರಕರಣದಲ್ಲಿ ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಗುಜರಾತ್‌ನ ಗಾಂಧಿನಗರದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಡಿ ಕೆ ಸೋನಿ ಇಂದು ಈ ಆದೇಶ ಹೊರಡಿಸಿದರು. ತೀರ್ಪಿನ ಕುರಿತಂತೆ ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತನಾಡಿದ ವಕೀಲ ಆರ್‌ಸಿ ಕೊಡೇಕರ್ "ನನ್ನ ಕಕ್ಷಿದಾರನಿಗೆ ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕತೆಗಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ತೆಯ ಘನತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ 1 ವರ್ಷ ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ತೆಗೆ ಪರಿಹಾರ ರೂಪದಲ್ಲಿ ರೂ. 50,000 ನೀಡಬೇಕು ಎಂದು ನ್ಯಾಯಾಲಯ ತಿಳಿಸಿದ್ದು ನನ್ನ ಕಕ್ಷಿದಾರನಿಗೆ ರೂ. 10,000 ದಂಡ  ವಿಧಿಸಲಾಗಿದೆ" ಎಂದರು.

ನ್ಯಾಯಾಲಯ ಸೋಮವಾರ, ಅಸಾರಾಂಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 377 (ಅಸ್ವಾಭಾವಿಕ ಲೈಂಗಿಕತೆ), 354 (ಮಹಿಳೆಯರ ಘನತೆಗೆ ಧಕ್ಕೆ ತರುವುದು), 346 (ಅಕ್ರಮ ಬಂಧನ), 120 ಬಿ (ಅಪರಾಧದ ಸಂಚು) ಮತ್ತು 201 (ಸಾಕ್ಷಾಧಾರ ನಾಶ) ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿತ್ತು.

ಅಹಮದಾಬಾದ್‌ನ ಚಂದ್‌ಖೇಡಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಅಸಾರಾಂ ಸಂತ್ರಸ್ತೆಯನ್ನು  ಸೂರತ್ ನಗರದ ಹೊರವಲಯದಲ್ಲಿರುವ ಆಶಾರಾಮ್‌ ಕಟ್ಟಡದಲ್ಲಿ ಬಂಧಿಸಿಟ್ಟು 2001ರಿಂದ 2006ರವರೆಗೆ ನಿರಂತರವಾಗಿ ಅತ್ಯಾಚಾರ ಎಸಗಿದ್ದ.