Dinu Solanki and Gujarat High Court  Image source: FB
ಸುದ್ದಿಗಳು

ಸತ್ಯದ ಶಾಶ್ವತ ಸಮಾಧಿ: ಹೋರಾಟಗಾರನ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದನ ಖುಲಾಸೆ ವೇಳೆ ಗುಜರಾತ್ ಹೈಕೋರ್ಟ್ ಕಿಡಿ

ಗಿರ್ ಅರಣ್ಯದ ಬಳಿ ಅಕ್ರಮ ಗಣಿಗಾರಿಕೆಯಲ್ಲಿ ಸೋಲಂಕಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸುಮಾರು ಒಂದು ತಿಂಗಳ ನಂತರ, ಜೇಥ್ವಾ ಅವರನ್ನು ಗುಜರಾತ್ ಹೈಕೋರ್ಟ್ ಸಮೀಪವೇ 2010ರಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.

Bar & Bench

ಪರಿಸರ ಹೋರಾಟಗಾರ ಅಮಿತ್ ಜೇತ್ವಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಂಸದ ದಿನು ಸೋಲಂಕಿ ಹಾಗೂ ಉಳಿದ ಆರು ಮಂದಿಯನ್ನು ಗುಜರಾತ್‌ ಹೈಕೋರ್ಟ್‌ ಸೋಮವಾರ ಖುಲಾಸೆಗೊಳಿಸಿತು.

ನ್ಯಾಯಮೂರ್ತಿಗಳಾದ ಎ ಎಸ್ ಸುಪೇಹಿಯಾ ಮತ್ತು ವಿಮಲ್ ಕೆ ವ್ಯಾಸ್ ಅವರಿದ್ದ ಪೀಠ "ಸತ್ಯಮೇವ ಜಯತೇ. ಸತ್ಯಕ್ಕೆ ಜಯ ಸಿಗಬೇಕು. ಈ ಪ್ರಕರಣದಲ್ಲಿ ತನಿಖೆ ಮೊದಲಿನಿಂದಲೂ ಸ್ಪಷ್ಟವಾಗಿ ಕಣ್ಣೊರೆಸುವ ತಂತ್ರವಾಗಿತ್ತು" ಎಂದು ನ್ಯಾಯಾಲಯ ಈ ವೇಳೆ ಅಸಮಾಧಾನ ವ್ಯಕ್ತಪಡಿಸಿತು. ಪ್ರಕರಣವನ್ನು ಪೊಲೀಸರು ಮತ್ತು ವಿಚಾರಣಾ ನ್ಯಾಯಾಲಯವು ನಿರ್ವಹಿಸಿದ ರೀತಿಯನ್ನು ಅದು ಟೀಕಿಸಿತು. ಸತ್ಯವನ್ನು ಸಮಾಧಿ ಮಾಡುವ ಎಲ್ಲಾ ಯತ್ನಗಳನ್ನು ಮಾಡಲಾಗಿದೆ ಎಂದು ಗುಡುಗಿತು.

"ಘಟನೆಯ ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳು ಆಗಮಿಸಿದ ಸಮಯವನ್ನು ಪರಿಗಣಿಸಿದರೆ, ದಾಳಿಕೋರರನ್ನು ಬಂಧಿಸದೆ ಅವರು ತಪ್ಪಿಸಿಕೊಂಡರು ಎಂಬುದು ಸಖೇದಾಶ್ಚರ್ಯಕರ ಸಂಗತಿಯಾಗಿದೆ. ಇದು ದಾಳಿಕೋರರನ್ನು ಹಿಡಿಯಲು ಹೊರಟವರ ಕ್ಷಿಪ್ರಗತಿಯನ್ನು ತಿಳಿಸುತ್ತದೆ. ಸತ್ಯವನ್ನು ಶಾಶ್ವತವಾಗಿ ಹೂತು ಹಾಕಲು ಯತ್ನಿಸಲಾಗಿದೆ. ಸಂಪೂರ್ಣ ತನಿಖೆ ಮೊದಲಿನಿಂದಲೂ ವಿಚಾರಣಾ ನ್ಯಾಯಾಲಯದ ವಿಶ್ವಾಸ ಗಟ್ಟಿಗೊಳಿಸುವಲ್ಲಿ ವಿಫಲವಾಗಿದೆ. ಪೂರ್ವಭಾವಿ ಕಲ್ಪನೆಯ ಮೇಲೆ ವಿಚಾರಣಾ ನ್ಯಾಯಾಲಯ ಸಾಕ್ಷ್ಯವನ್ನು ಸರಿಯಾಗಿ ವಿಶ್ಲೇಷಿಸಿಲ್ಲ. ಕಾನೂನನ್ನು ಅದು ಉಲ್ಲೇಖಿಸಿರುವಂತೆಯೇ ಅನ್ವಯಿಸಲು ಬದ್ಧವಾಗಿರಬೇಕು ಆದರೆ ಅದು ಹಾಗೆ ಮಾಡಲು ವಿಫಲವಾಗಿದ್ದು ತನಗೆ ತೋಚಿದಂತೆ ಅನ್ವಯಿಸಿದೆ. ಅದರಂತೆ, ಪ್ರಸ್ತುತ ಮೇಲ್ಮನವಿದಾರರನ್ನು ದೋಷಿಗಳೆಂದು ಪರಿಗಣಿಸುವ ಜುಲೈ 11, 2019 ರ ವಿಚಾರಣಾ ನ್ಯಾಯಾಲಯದ ತೀರ್ಪನ್ನು  ರದ್ದುಗೊಳಿಸಿದ್ದೇವೆ. ಪ್ರಸ್ತುತ ಮೇಲ್ಮನವಿದಾರರನ್ನು ಖುಲಾಸೆಗೊಳಿಸುತ್ತಿದ್ದೇವೆ” ಎಂದು ನ್ಯಾಯಾಲಯ ನುಡಿಯಿತು.

ಅಮಿತ್‌ ಜೇಥ್ನಾ ಆರ್‌ಟಿಐ ಕಾಯಿದೆಯಡಿ ಪ್ರಶ್ನಿಸುತ್ತಿದ್ದುದಕ್ಕೆ ಮತ್ತು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವಿಚಾರಗಳ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಪ್ರಸಿದ್ಧರಾಗಿದ್ದರು. ಗಿರ್ ಅರಣ್ಯದ ಬಳಿ ಅಕ್ರಮ ಗಣಿಗಾರಿಕೆಯಲ್ಲಿ ಸೋಲಂಕಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ಸುಮಾರು ಒಂದು ತಿಂಗಳ ನಂತರ, ಅವರನ್ನು ಗುಜರಾತ್ ಹೈಕೋರ್ಟ್‌ ಸಮೀಪವೇ 2010ರಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.

ಹೈಕೋರ್ಟ್‌ ಅಂತಿಮವಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ವಿಶೇಷ ನ್ಯಾಯಾಲಯ ಕೊಲೆ ಪ್ರಕರಣದಲ್ಲಿ ಜೀವಾವಧಿ ವಿಧಿಸಿತು. ಶಿಕ್ಷೆಗೆ ಗುರಿಯಾದವರಲ್ಲಿ ಸೋಲಂಕಿ ಮತ್ತು ಅವರ ಸೋದರಳಿಯ ಕೂಡ ಸೇರಿದ್ದರು.

ಈ ತೀರ್ಪನ್ನು ಈಗ ಹೈಕೋರ್ಟ್ ರದ್ದುಗೊಳಿಸಿದ್ದು, ವಿಚಾರಣಾ ನ್ಯಾಯಾಲಯವು ಶಿಕ್ಷೆಯ ಪೂರ್ವ ನಿರ್ಧರಿತ ಕಲ್ಪನೆಯಿಂದ ವಿಚಾರಣಾ ಪ್ರಕ್ರಿಯೆಯಗಳನ್ನು ಕೈಗೊಂಡಿದೆ ಎಂದು ಅಭಿಪ್ರಾಯಪಟ್ಟಿದೆ.