Gujarat High Court, Hardik Patel
Gujarat High Court, Hardik Patel 
ಸುದ್ದಿಗಳು

ದೇಶದ್ರೋಹ ಪ್ರಕರಣ: ಬಿಜೆಪಿ ಶಾಸಕ ಹಾರ್ದಿಕ್ ವಿರುದ್ಧದ ಜಾಮೀನು ರಹಿತ ವಾರಂಟ್ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

Bar & Bench

ದೇಶದ್ರೋಹ ಪ್ರಕರಣದ ವಿಚಾರಣೆಗೆ ಹಾಜರಾಗದಿದ್ದಕ್ಕಾಗಿ ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯವು ಹೊರಡಿಸಿದ ಜಾಮೀನು ರಹಿತ ವಾರಂಟನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ [ಹಾರ್ದಿಕ್ ಭಾರತಭಾಯ್ ಪಟೇಲ್ ವಿರುದ್ಧ ಗುಜರಾತ್ ಸರ್ಕಾರನಡುವಣ ಪ್ರಕರಣ].

ವಾರಂಟ್‌ ರದ್ದುಗೊಳಿಸಲು ಪ್ರಾಸಿಕ್ಯೂಷನ್‌ಗೆ ಯಾವುದೇ ಅಭ್ಯಂತರ ಇಲ್ಲ ಎಂದು ನ್ಯಾ. ಸಂದೀಪ್‌ ಭಟ್‌ ಅವರಿದ್ದ ಏಕಸದಸ್ಯ ಪೀಠಕ್ಕೆ ತಿಳಿಸಲಾಯಿತು. ದೇಶದ್ರೋಹವನ್ನು ಅಪರಾಧೀಕರಿಸುವ ಐಪಿಸಿ 124 ಎ ಸೆಕ್ಷನ್‌ನ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ ಎಂಬ ಅಂಶವನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಂಡಿತು.

"ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾದ ವಾದಗಳ ಹಿನ್ನೆಲೆಯಲ್ಲಿ, ಪ್ರಕರಣದ ಇತರ ಅರ್ಹತೆಗಳನ್ನು ಪರಿಶೀಲಿಸದೆ, ಎರಡೂ ಪಕ್ಷಕಾರರು ದೋಷಾರೋಪಣೆ ಮಾಡಲಾದ ಆದೇಶವನ್ನು ರದ್ದುಗೊಳಿಸಬಹುದು ಎಂದು ಒಪ್ಪಿಕೊಂಡಿರುವುದು ಗಮನಾರ್ಹವಾಗಿದೆ. ಅಲ್ಲದೆ ಈ ಸೆಕ್ಷನ್‌ಗಳ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳು ಪ್ರಸ್ತುತ ಸುಪ್ರೀಂ ಕೋರ್ಟ್‌ನ ಪರಿಶೀಲನೆಯಲ್ಲಿದ್ದು ಪ್ರಸ್ತುತ ಅರ್ಜಿಯಲ್ಲಿ ಸಲ್ಲಿಸಲಾದ ಪ್ರಾರ್ಥನೆಗಳ ಸ್ವರೂಪವನ್ನು ಗಣನೆಗೆ ತೆಗೆದುಕೊಂಡು ಪ್ರಸ್ತುತ ಅರ್ಜಿಯನ್ನು ಪುರಸ್ಕರಿಸುವುದು ಸೂಕ್ತವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಪಟೇಲ್ ಅವರು 2014-2015ರಲ್ಲಿ ಪಾಟಿದಾರ್ ಆಂದೋಲನ ಕೈಗೊಂಡಿದ್ದ ಹಿನ್ನೆಲೆಯಲ್ಲಿ ದೇಶದ್ರೋಹ, ದೇಶದ ವಿರುದ್ಧ ಸಮರ ಮತ್ತು ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಎದುರಿಸುತ್ತಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಲು ವಿಫಲರಾದ ಪಟೇಲ್ ವಿರುದ್ಧ 2020 ರಲ್ಲಿ ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯವು ಜಾಮೀನು ರಹಿತ ವಾರಂಟ್‌ ಹೊರಡಿಸಿತ್ತು.

ತನ್ನ ಪ್ರತಿವಾದದಲ್ಲಿ, ಪಟೇಲ್ ಅವರು ನ್ಯಾಯಾಲಯದ ಮುಂದೆ ಹಾಜರಾಗುವುದರಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅದರೆ ಅದನ್ನು ಪರಿಗಣಿಸದೆ ತಿರಸ್ಕರಿಸಲಾಗಿತ್ತು ಎಂದು ಹಾರ್ದಿಕ್‌ ಪಟೇಲ್‌ ಪರ ವಕೀಲ ರಫೀಕ್ ಲೋಖಂಡವಾಲಾ ವಾದ ಮಂಡಿಸಿದ್ದರು.ಪಬ್ಲಿಕ್ ಪ್ರಾಸಿಕ್ಯೂಟರ್ ಮಿತೇಶ್ ಅಮೀನ್ ಸರ್ಕಾರವನ್ನು ಪ್ರತಿನಿಧಿಸಿದ್ದರು.