ಶೌಚಾಲಯದಲ್ಲೇ ಕುಳಿತು ವರ್ಚುವಲ್ ವಿಚಾರಣೆಗೆ ಹಾಜರಾದ 42 ವರ್ಷದ ವ್ಯಕ್ತಿಯೊಬ್ಬರಿಗೆ ಗುಜರಾತ್ ಹೈಕೋರ್ಟ್ ಇತ್ತೀಚೆಗೆ ₹2 ಲಕ್ಷ ದಂಡ ವಿಧಿಸಿದೆ.
ಈ ಕೃತ್ಯ ಸ್ವೀಕಾರಾರ್ಹವಲ್ಲ ಮತ್ತು ನ್ಯಾಯಾಲಯದ ಘನತೆ ಕುಗ್ಗಿಸುತ್ತದೆ ಎಂದು ನ್ಯಾಯಮೂರ್ತಿ ಎಂ ಕೆ ಠಕ್ಕರ್ ತಿಳಿಸಿದರು.
"ಇಂತಹ ಅಸಭ್ಯ ಕೃತ್ಯವು ಅಸ್ವೀಕಾರಾರ್ಹ ಮಾತ್ರವೇ ಅಲ್ಲದೆ, ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಇದನ್ನು ಕಟ್ಟುನಿಟ್ಟಾಗಿ ಖಂಡಿಸಬೇಕಾಗಿದೆ. ನ್ಯಾಯಾಲಯಗಳು ಇಂತಹ ವ್ಯಕ್ತಿಗಳೊಂದಿಗೆ ಕಠಿಣವಾಗಿ ವರ್ತಿಸದಿದ್ದರೆ ಅದು ಸಾರ್ವಜನಿಕರ ದೃಷ್ಟಿಯಲ್ಲಿ ಸಂಸ್ಥೆಯ ಘನತೆಯನ್ನು ಕುಂದಿಸಬಹುದು” ಎಂದು ನ್ಯಾಯಾಲಯ ಮಾರ್ಚ್ 5ರಂದು ನೀಡಿದ ಆದೇಶದಲ್ಲಿ ತಿಳಿಸಿದೆ.
ಪ್ರಕರಣವೊಂದರಲ್ಲಿ ಪ್ರತಿವಾದಿಯ ಮಗನಾದ ಧವಲ್‌ಭಾಯ್ ಕನುಭಾಯ್ ಅಂಬಾಲಾಲ್ ಪಟೇಲ್ ಎಂಬ ವ್ಯಕ್ತಿಯು ಫೆಬ್ರವರಿ 17 ರಂದು ಶೌಚಾಲಯದಿಂದಲೇ ವರ್ಚುವಲ್ ವಿಚಾರಣೆಗೆ ಹಾಜರಾಗಿದ್ದ.
ಘಟನೆಗೆ ಸಂಬಂಧಿಸಿದಂತೆ ವಿಡಿಯೋ ವೈರಲ್ ಆಗಿ ತನಿಖೆಗೆ ಪ್ರೇರೇಪಿಸಿತು ಮತ್ತು ವಿಡಿಯೋದಲ್ಲಿರುವ ವ್ಯಕ್ತಿಯನ್ನು ಗುರುತಿಸಲು ನ್ಯಾಯಾಲಯವು ಸೋಲಾ ಪೊಲೀಸ್ ಠಾಣೆಗೆ ಸೂಚಿಸಿತ್ತು.
ನಂತರ ಫೆಬ್ರವರಿ 27 ರಂದು ನ್ಯಾಯಾಲಯ (ಪ್ರಕರಣದ ಪ್ರತಿವಾದಿ) ಪಟೇಲ್ ಮತ್ತು ಅವರ ತಂದೆ ಮಾರ್ಚ್ 5 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶ ಹೊರಡಿಸಿತು.
ಘಟನೆ ಆಕಸ್ಮಿಕವಾಗಿ ನಡೆದಿದೆ. ಇದು ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ತಿಳಿಸಿದ ತಂದೆ ಪರ ವಕೀಲರು ಅವರ ಪರವಾಗಿ ಕ್ಷಮೆಯಾಚಿಸಿದರು.
ಆದರೆ ವ್ಯಕ್ತಿ ಪದವೀಧರನಾಗಿದ್ದು ಆತನ ವಯಸ್ಸು 42 ವರ್ಷ. ಜೊತೆಗೆ ರಿಲಯನ್ಸ್ ಸಮೂಹ ಸಂಸ್ಥೆಯಲ್ಲಿ ಉದ್ಯೋಗಿಯಾಗಿರು ಆತನಿಗೆ ಜೂಮ್ ಅಪ್ಲಿಕೇಷನ್ ಬಗ್ಗೆ ಗೊತ್ತಿಲ್ಲ ಎನ್ನುವುದು ಒಪ್ಪಲಾಗದ ಸಂಗತಿ ಎಂದ ನ್ಯಾಯಾಲಯ ವ್ಯಕ್ತಿಗೆ ತಪ್ಪೆಸಗಿದ್ದ ಕನುಭಾಯ್ ಪಟೇಲ್‌ಗೆ ₹2 ಲಕ್ಷ ದಂಡ ವಿಧಿಸಿತು.
ಎರಡು ವಾರಗಳೊಳಗೆ ದಂಡದ ಮೊತ್ತವನ್ನು ಹೈಕೋರ್ಟ್ ರಿಜಿಸ್ಟ್ರಿ ಹೆಸರಿನಲ್ಲಿ ಠೇವಣಿ ಇಡುವಂತೆ ನ್ಯಾಯಾಲಯ ತಾಕೀತು ಮಾಡಿತು. ನಂತರ ರಿಜಿಸ್ಟ್ರಿ ₹50,000 ಮೊತ್ತವನ್ನು ಅಹಮದಾಬಾದ್‌ನ ಶಿಶುಗೃಹ ಖಾತೆಗೂ ಉಳಿದ ಮೊತ್ತವನ್ನು ಗುಜರಾತ್ ಹೈಕೋರ್ಟ್ ಕಾನೂನು ನೆರವು ಸೇವೆಗಳ ಪ್ರಾಧಿಕಾರಗಳ ಖಾತೆಗೆ ಜಮಾ ಮಾಡುವಂತೆ ನಿರ್ದೇಶಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]