Cattle 
ಸುದ್ದಿಗಳು

ಬೀಡಾಡಿ ದನಗಳ ಹಾವಳಿ ತಡೆಯಲು ಗುಜರಾತ್ ಸರ್ಕಾರ ವಿಫಲ: ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ ನೀಡಿದ ಹೈಕೋರ್ಟ್

ಜಾನುವಾರುಗಳ ಹಾವಳಿ ತಡೆಯುವುದಕ್ಕಾಗಿ ನ್ಯಾಯಾಲಯ ನೀಡಿದ್ದ ಆದೇಶ ಜಾರಿಗೆ ತರಲು ಮುಂದಾದ ಪೊಲೀಸ್ ಅಧಿಕಾರಿಗಳನ್ನು ಥಳಿಸಿದ ಗೂಂಡಾಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪೀಠ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿತು.

Bar & Bench

ಅಹಮದಾಬಾದ್‌ ನಗರ ಮತ್ತು ಉಳಿದ ಜಿಲ್ಲೆಗಳಲ್ಲಿ ಬೀಡಾಡಿ ದನಗಳ ಹಾವಳಿ ತಡೆಯುವಲ್ಲಿ ಪೊಲೀಸ್‌ ಆಯುಕ್ತರು ಮತ್ತಿತರ ಅಧಿಕಾರಗಳ ವೈಫಲ್ಯದ ಬಗ್ಗೆ ಗುಜರಾತ್ ಹೈಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು [ಮುಸ್ತಾಕ್ ಹುಸೇನ್ ಮೆಹಂದಿ ಹುಸೇನ್ ಕದ್ರಿ ಮತ್ತು ಜಗದೀಪ್ ನಾರಾಯಣ ಸಿಂಗ್, ಐಎಎಸ್ ನಡುವಣ ಪ್ರಕರಣ].

ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಮ್‌ಸಿ) ಆಯುಕ್ತರು ಮತ್ತು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿದ್ದ ರಾಜ್ಯದ ಪ್ರಧಾನ ಕಾರ್ಯದರ್ಶಿಯವರನ್ನೂ ನ್ಯಾಯಮೂರ್ತಿಗಳಾದ ಅಶುತೋಷ್ ಶಾಸ್ತ್ರಿ ಮತ್ತು ಹೇಮಂತ್ ಪ್ರಚ್ಚಕ್ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿತು.

ಜಾನುವಾರುಗಳ ಹಾವಳಿ ತಡೆಯುವುದಕ್ಕಾಗಿ ನ್ಯಾಯಾಲಯ ನೀಡಿದ್ದ ಆದೇಶ ಜಾರಿಗೆ ತರಲು ಮುಂದಾದ ಪೊಲೀಸ್‌ ಅಧಿಕಾರಿಗಳನ್ನು ಥಳಿಸಿದ ಗೂಂಡಾಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪೀಠ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿತು.

"ಪ್ರಭುತ್ವ ನಿಮ್ಮ ಮೇಲೆ ನಂಬಿಕೆ ಇರಿಸಿದೆ. ನಿವಾಸಿಗಳು ಸಹ ನಿಮ್ಮ ಮೇಲೆ ವಿಶ್ವಾಸ ಹೊಂದಿದ್ದಾರೆ. ಅಧಿಕಾರಿಗಳನ್ನು ಗೂಂಡಾಗಳು ಥಳಿಸುತ್ತಿದ್ದಾರೆ. ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಈ ಚಟುವಟಿಕೆ ತಡೆಯಲು ಯಾವುದೇ ಅಧಿಕಾರಿಗೆ ಅವಕಾಶ ನೀಡದಿರುವುದು ಆತಂಕಕಾರಿ ಪರಿಸ್ಥಿತಿ." ಎಂದು ನ್ಯಾಯಾಲಯ ನುಡಿಯಿತು.

ದೇಶದ ಅತ್ಯಂತ ಸುರಕ್ಷಿತ ರಾಜ್ಯಗಳಲ್ಲಿ ಒಂದಾಗಿರುವ ಗುಜರಾತ್ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಕಾನೂನುಬಾಹಿರ ಕೃತ್ಯಗಳು ಜರುಗುತ್ತಿವೆ ಎಂದು ನ್ಯಾಯಾಧೀಶರು ಒತ್ತಿ ಹೇಳಿದರು. ಜಾನುವಾರುಗಳ ಹಾವಳಿ ಮತ್ತು ಟ್ರಾಫಿಕ್ ಸಮಸ್ಯೆಗಳಿಂದ ಉಂಟಾಗುತ್ತಿರುವ ಜನರ ಸಾವು ಕುರಿತ ವರದಿಗಳನ್ನು ನ್ಯಾಯಾಲಯ ಪ್ರಸ್ತಾಪಿಸಿದೆ.

“ನಿಮ್ಮ ಭುಜದ ಮೇಲಿರುವ ನಕ್ಷತ್ರಗಳು ಕಾನೂನು ಮುತ್ತು ಸುವ್ಯವಸ್ಥೆ ಕಾಪಾಡುವ ದೊಡ್ಡ ಜವಾಬ್ದಾರಿಯ ಸಂಕೇತವಾಗಿದೆ. ಗಡಿ ಕಾಯುವ ಯೋಧರಿಗಿಂತ ನೀವು ಕಡಿಮೆಯಲ್ಲ ನೀವು ಜನರನ್ನು ಗಡಿಯೊಳಗೆ ರಕ್ಷಿಸುತ್ತಿದ್ದೀರಿ. ಆದರೆ (ನಿಮ್ಮ ನಡೆಯಿಂದ) ಸಮಾಜಕ್ಕೆ ಯಾವ ಸಂದೇಶ ರವಾನೆಯಾಗುತ್ತಿದೆ? 10 ರಿಂದ 15 ಬೈಕ್ ಸವಾರರು ಲಾಠಿ ಹಿಡಿದು ಪೋಲೀಸ್ ವ್ಯಾನ್ ಸುತ್ತ ತಿರುಗಾಡುವುದನ್ನು ಪೊಲೀಸರು ಓಡಿ ಹೋಗಿದ್ದನ್ನು ನಾವು ಕಂಡಿದ್ದೇವೆ. ರಾಜ್ಯದಲ್ಲಿ ಕಾನೂನು ಆಡಳಿತವೆಂಬುದು ಜಾರಿಯಲ್ಲಿಲ್ಲವೇ?” ಎಂದು ನ್ಯಾಯಾಲಯ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿತು.

ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ ನ್ಯಾಯಾಲಯ ತಪ್ಪಿದಲ್ಲಿ ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ ನೀಡಿತು.