Gujarat High Court 
ಸುದ್ದಿಗಳು

ನ್ಯಾಯಾಂಗದ 'ಕೊಳೆ' ತೊಳೆವವರೆಗೆ ಕೆಲಸಕ್ಕೆ ಮರಳಲು ನಿರಾಕರಣೆ: ನ್ಯಾಯಾಧೀಶರ ವಜಾ ಎತ್ತಿಹಿಡಿದ ಗುಜರಾತ್ ಹೈಕೋರ್ಟ್

ನ್ಯಾಯಾಂಗ ಅಧಿಕಾರಿಯು ವ್ಯವಸ್ಥೆಯ ವಿರುದ್ಧ ತನ್ನ ನೋವನ್ನು ಹೊರಹಾಕುವುದು ಸಮರ್ಥನೀಯವಾಗಿರಬಹುದು ಎಂದು ಹೇಳಿದ ನ್ಯಾಯಾಲಯವು ಈ ಪ್ರಕರಣದಲ್ಲಿ ನ್ಯಾ. ಚೌಹಾಣ್ ವರ್ತಿಸಿದ ರೀತಿಯನ್ನು ಟೀಕಿಸಿದೆ.

Bar & Bench

ಗುಜರಾತ್‌ ಹೈಕೋರ್ಟ್‌ನ ಆಡಳಿತಾತ್ಮಕ ನ್ಯಾಯಾಧೀಶರು ಮತ್ತು ವಡೋದರಾದ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ 2013ರಲ್ಲಿ "ಅಸಂಬದ್ಧ" ಪತ್ರ ರವಾನಿಸಿ, ನಂತರ ಅನಧಿಕೃತ ರಜೆಯ ಮೇಲೆ ತೆರಳಿದ್ದ ಮ್ಯಾಜಿಸ್ಟ್ರೇಟ್ ಅವರನ್ನು ವಜಾಗೊಳಿಸಿದ್ದನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ (ನಿಲೇಶ್ ಭಾಯ್ ಚೌಹಾಣ್ ವಿರುದ್ಧ ರಿಜಿಸ್ಟ್ರಾರ್ ಜನರಲ್)

ನ್ಯಾಯಮೂರ್ತಿಗಳಾದ ಬಿರೇನ್ ವೈಷ್ಣವ್ ಮತ್ತು ನಿಶಾ ಠಾಕೂರ್‌ ಅವರ ನೇತೃತ್ವದ ವಿಭಾಗೀಯ ಪೀಠವು "ಸಾಮಾನ್ಯ ಉದ್ಯೋಗಿಗಳ ಅನಧಿಕೃತ ಅನುಪಸ್ಥಿತಿಯನ್ನು ವಿಭಿನ್ನವಾಗಿ ಗ್ರಹಿಸಬಹುದು. ಆದರೆ ಇದೇ ಮಾನದಂಡವನ್ನು ನಿರ್ದಿಷ್ಟ ಸಮಸ್ಯೆಯನ್ನು ಬಗೆಹರಿಸದ ಹೊರತು ಅನಿರ್ದಿಷ್ಟಾವಧಿಗೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದಿರುವ ನ್ಯಾಯಾಂಗ ಅಧಿಕಾರಿಗೆ ಅನ್ವಯಿಸಲಾಗದು" ಎಂದು ಪೀಠ ಒತ್ತಿಹೇಳಿದೆ.  

ಮಾಜಿ ನ್ಯಾಯಾಧೀಶರ ವಜಾವನ್ನು ಎತ್ತಿಹಿಡಿದಿರುವ ಪೀಠವು ಅವರ ನಡವಳಿಕೆ ನ್ಯಾಯಾಂಗ ಅಧಿಕಾರಿಗೆ ಸೂಕ್ತವಲ್ಲ ಎಂದು ಹೈಕೋರ್ಟ್‌ ಸರಿಯಾಗಿ ದಾಖಲಿಸಿದೆ ಎಂದು ಅಭಿಪ್ರಾಯಪಟ್ಟಿದೆ.

ಮೇ 13, 2013ರಿಂದ ಜುಲೈ 11, 2013ರವರೆಗೆ ಅನಧಿಕೃತ ರಜೆ ತೆಗೆದುಕೊಂಡ ಮ್ಯಾಜಿಸ್ಟ್ರೇಟ್ ನಿಲೇಶ್ ಭಾಯ್ ಚೌಹಾಣ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಚೌಹಾಣ್‌ ಅವರು ಏಪ್ರಿಲ್ 24, 2013 ರಿಂದ ಮೇ 10, 2013 ರವರೆಗೆ ವೇತನ ಸಹಿತ ರಜೆಯಲ್ಲಿದ್ದರು. ಈ ಸಂದರ್ಭದಲ್ಲಿ ಅವರು ವಡೋದರಾದ ವಕೀಲರು ಹಠಾತ್ ಮುಷ್ಕರಕ್ಕೆ ಕರೆ ನೀಡಿದ ಸುದ್ದಿ ಓದಿದ್ದರು. ಈ ವಿಚಾರವನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಮಾಹಿತಿ ನೀಡಿದ್ದ ಅವರು ಈ ನಿಟ್ಟಿನಲ್ಲಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದರು.

ತದನಂತರ, ಪ್ರಧಾನ ಜಿಲ್ಲಾ ನ್ಯಾಯಾಧೀಶರು ಮತ್ತು ಹೈಕೋರ್ಟ್‌ನ ಆಡಳಿತಾತ್ಮಕ ನ್ಯಾಯಾಧೀಶರ ವಿರುದ್ಧ "ಅಸಂಬದ್ಧ" ಭಾಷೆಯನ್ನು ಬಳಸಿ ಚೌಹಾಣ್‌ ಅವರು ಪತ್ರ ಬರೆದಿದ್ದರು. ವಕೀಲರ ಪ್ರತಿಭಟನೆಯಂತಹ ಸಂಗತಿಗಳಿಂದಾಗಿ ಇಡೀ ನ್ಯಾಯಾಂಗ ವ್ಯವಸ್ಥೆಯು "ಕೊಳೆತ" ಸ್ಥಿತಿ ಎದುರಿಸುತ್ತಿದೆ. ಈ ವ್ಯವಸ್ಥೆಯನ್ನು ಸರಿಪಡಿಸದ ಹೊರತು ತಾವು ನ್ಯಾಯಾಂಗ ಸೇವೆಗೆ ಮರಳುವುದಿಲ್ಲ ಎಂದು ಚೌಹಾಣ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ.

ಪ್ರಧಾನ ಜಿಲ್ಲಾ ನ್ಯಾಯಾಧೀಶರು ಮತ್ತು ಹೈಕೋರ್ಟ್‌ನ ಆಡಳಿತಾತ್ಮಕ ನ್ಯಾಯಾಧೀಶರು ನೇರವಾಗಿ ಅಥವಾ ಪರೋಕ್ಷವಾಗಿ ಇಂತಹ ಅಂಶಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿದ್ದಾರೆ ಎಂದು ಪತ್ರದಲ್ಲಿ ಅವರು ಆಪಾದಿಸಿದ್ದರು.

ಹೈಕೋರ್ಟ್‌ನ ಆಡಳಿತಾತ್ಮಕ ನ್ಯಾಯಾಧೀಶರು ಮತ್ತು ವಡೋದರಾದ ಪ್ರಧಾನ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಕ್ಕಾಗಿ ಮತ್ತು ಕರ್ತವ್ಯಕ್ಕೆ ಅನಧಿಕೃತ ಗೈರುಹಾಜರಾಗಿದ್ದಕ್ಕಾಗಿ ಚೌಹಾಣ್‌ ಅವರನ್ನು 2015ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು.

ಈ ನಿರ್ಧಾರವನ್ನು ಮಾಜಿ ಮ್ಯಾಜಿಸ್ಟ್ರೇಟ್ 2016ರಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅವರ ಮನವಿಯನ್ನು ವಜಾಗೊಳಿಸಿದ ನ್ಯಾಯಾಲಯವು ನ್ಯಾಯಾಂಗ ಅಧಿಕಾರಿಯು ವ್ಯವಸ್ಥೆಯ ವಿರುದ್ಧ ತನ್ನ ನೋವನ್ನು ಹೊರಹಾಕುವುದು ಸಮರ್ಥನೀಯವಾಗಬಹುದು. ಆದಾಗ್ಯೂ, ಪ್ರಸ್ತುತ ಪ್ರಕರಣದಲ್ಲಿ ಚೌಹಾಣ್ ತಮ್ಮ ನೋವು ವ್ಯಕ್ತಪಡಿಸಲು ಆಯ್ಕೆ ಮಾಡಿದ ವಿಧಾನವನ್ನು ನ್ಯಾಯಾಲಯ ಟೀಕಿಸಿದೆ.

[ತೀರ್ಪು ಓದಿ]

Nileshbhai Chauhan vs Registrar General.pdf
Preview