Kiran Patel
Kiran Patel 
ಸುದ್ದಿಗಳು

ಕಾಶ್ಮೀರದಲ್ಲಿ ಪಿಎಂಒ ಅಧಿಕಾರಿಯಂತೆ ಸೋಗು: ಗುಜರಾತ್‌ ಮೂಲದ ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ

Bar & Bench

ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಅಧಿಕಾರಿಯಂತೆ ಸೋಗು ಹಾಕಿದ್ದ ಗುಜರಾತ್ ಮೂಲದ ವ್ಯಕ್ತಿಯನ್ನು ಶ್ರೀನಗರ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಶ್ರೀನಗರದ 1ನೇ ಹೆಚ್ಚುವರಿ ಮುನ್ಸಿಫ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ಆದೇಶ ಹೊರಡಿಸಿದ್ದಾರೆ. ಭಾರತ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಎಂದು ಬಿಂಬಿಸಿಕೊಂಡಿದ್ದ ಆರೋಪಿ ಕಿರಣ್ ಪಟೇಲ್‌ನನ್ನು ಪಂಚತಾರಾ ಹೋಟೆಲ್‌ನಲ್ಲಿ ಬಂಧಿಸಲಾಗಿತ್ತು.

ಆರೋಪಿಯಿಂದ ನಕಲಿ ವಿಸಿಟಿಂಗ್ ಕಾರ್ಡ್‌ಗಳು ಹಾಗೂ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಾರ್ & ಬೆಂಚ್‌ಗೆ ತಿಳಿಸಿದ್ದಾರೆ.

ಆತ 'ಝಡ್ ಪ್ಲಸ್' ಭದ್ರತೆಯೊಂದಿಗೆ ಅನೇಕ ಪ್ರವಾಸಿ ತಾಣಗಳಿಗೆ ಹಾಗೂ ಉರಿ ಬಳಿಯ ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಹತ್ತಿರ ಇರುವ ಸ್ಥಳಕ್ಕೆ ಭೇಟಿ ನೀಡಿದ್ದ ಎಂದು ತಿಳಿದು ಬಂದಿದೆ. ಐಪಿಸಿ ಸೆಕ್ಷನ್ 419 (ಮತ್ತೊಬ್ಬನಂತೆ ವರ್ತಿಸಿ ವಂಚಿಸಿದ್ದಕ್ಕೆ ದಂಡನೆ), 420 (ವಂಚನೆ ಮತ್ತು ಸ್ವತ್ತನ್ನು ಅಪ್ರಾಮಾಣಿಕವಾಗಿ ತಲುಪಿಸುವಂತೆ ಪ್ರೇರೇಪಿಸುವುದು), 467 (ಭದ್ರತಾ ಪತ್ರ, ಉಯಿಲು ಇತ್ಯಾದಿಗಳ ಸುಳ್ಳು ಸೃಷ್ಟಿ), 468 (ವಂಚನೆಯ ಉದ್ದೇಶಕ್ಕಾಗಿ ನಕಲು) ಹಾಗೂ  471 (ನಕಲನ್ನು ನೈಜವೆಂಬಂತೆ  ಬಳಸುವುದು) ಅಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  

ಪಟೇಲ್‌ ಸಲ್ಲಿಸಿರುವ ಜಾಮೀನು ಅರ್ಜಿಯು ಶ್ರೀನಗರದ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.