ಬೆಂಗಳೂರಿನ ಗುರು ರಾಘವೇಂದ್ರ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಭದ್ರತೆ ಇಲ್ಲದೆ ₹105 ಕೋಟಿ ಸಾಲ ಪಡೆದ ಆರೋಪ ಎದುರಿಸುತ್ತಿರುವ ಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಜಿ ರಘುನಾಥ್ ಎಂಬುವರಿಗೆ ವೈದ್ಯಕೀಯ ಕಾರಣ ಆಧರಿಸಿ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ಮಂಜೂರು ಮಾಡಿದೆ [ಜಿ ರಘುನಾಥ್ ವರ್ಸಸ್ ಜಾರಿ ನಿರ್ದೇಶನಾಲಯ].
ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ದಾಖಲಿಸಿದ್ದ ಪ್ರಕರಣದಲ್ಲಿ ಜಾಮೀನು ಕೋರಿ ರಘುನಾಥ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕ ಸದಸ್ಯ ಪೀಠವು ಮಾನ್ಯ ಮಾಡಿದೆ.
ಆರೋಪಿ ರಘುನಾಥ್ ಅವರು ತಮ್ಮ ಪಾಸ್‌ಪೋರ್ಟ್ ಪೊಲೀಸರ ವಶಕ್ಕೆ ಒಪ್ಪಿಸುವುದಲ್ಲದೆ, ₹25 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಎರಡು ಭದ್ರತೆ ನೀಡಬೇಕು. ಅನುಮತಿ ಇಲ್ಲದೆ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರಗೆ ಹೋಗಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.
ಆರೋಪಿ 10 ತಿಂಗಳಿಂದ ಕಸ್ಟಡಿಯಲ್ಲಿದ್ದಾರೆ. ಅಲ್ಲದೆ, ಸತ್ರ ನ್ಯಾಯಾಲಯ ಇಂಥದ್ದೇ ಆರೋಪ ಎದುರಿಸುತ್ತಿದ್ದವರಿಗೆ ಜಾಮೀನು ಮಂಜೂರು ಮಾಡಿದೆ. ಅಲ್ಲದೇ, ತನಿಖೆ ಮುಕ್ತಾಯದ ಹಂತದಲ್ಲಿದ್ದು, ವೈದ್ಯಕೀಯ ಕಾರಣ ಪರಿಗಣಿಸಿ ಅರ್ಜಿದಾರರಿಗೆ ಜಾಮೀನು ನೀಡುತ್ತಿರುವುದಾಗಿ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಸ್ ಎಸ್ ಶ್ರೀನಿವಾಸ್ ರಾವ್ ಅವರು, ಆರೋಪಿ ಸರ್ವಿಕಲ್ ಸ್ಪಾಂಡಿಲೈಸಿಸ್, ಇರಿಟಬಲ್ ಬೊವೆಲ್ ಡಿಸಾರ್ಡರ್, ಲಿವರ್ ತೊಂದರೆ, ಅಧಿಕ ರಕ್ತದೊತ್ತಡ, ಮಾನಸಿಕ ಖಿನ್ನತೆ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದು, ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಆಧಾರದಲ್ಲಿ ಜಾಮೀನು ನೀಡಬೇಕೆಂದು ಪೀಠವನ್ನು ಕೋರಿದ್ದರು.
ಜಾರಿ ನಿರ್ದೇಶನಾಲಯದ ಪ್ರತಿನಿಧಿಸಿದ್ದ ವಕೀಲ ಮಧುಕರ್ ದೇಶಪಾಂಡೆ, ಆರ್‌ಬಿಐನ ಸಾಂಸ್ಥಿಕ ವರದಿಯ ಪ್ರಕಾರ ಬ್ಯಾಂಕ್‌ನ 24 ಪ್ರಮುಖ ಫಲಾನುಭವಿಗಳಲ್ಲಿ ರಘುನಾಥ್ ಒಬ್ಬರಾಗಿದ್ದು, ಅವರು ₹105 ಕೋಟಿ ಸಾಲ ಪಡೆದಿದ್ದಾರೆ. ₹45 ಕೋಟಿಯನ್ನು ಸಮೃದ್ಧಿ ಎಂಟರ್‌ಪ್ರೈಸಸ್‌ಗೆ ವರ್ಗಾವಣೆ ಮಾಡಿದ್ದಾರೆ. ಗುರು ರಾಘವೇಂದ್ರ ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮಕೃಷ್ಣ ಅವರ ಹೇಳಿಕೆಯಂತೆ ಜಾರಿ ನಿರ್ದೇಶನಾಲಯವು ಹಲವು ಬಾರಿ ರಘುನಾಥ್‌ಗೆ ಸಮನ್ಸ್ ಜಾರಿಗೊಳಿಸಿದೆ. ಆದರೆ, ನಗದು ಸ್ವೀಕರಿಸಿದ ₹60 ಕೋಟಿಗೆ ಅವರು ಯಾವುದೇ ಲೆಕ್ಕ ನೀಡಿಲ್ಲ. ಅಲ್ಲದೇ, ತಮ್ಮ ಸ್ನೇಹಿತ ರಮೇಶ್‌ಗೆ ಸಮೃದ್ಧಿ ಎಂಟರ್‌ಪ್ರೈಸಸ್ ಹೆಸರಿನಲ್ಲಿ ₹30ರಿಂದ ₹35 ಕೋಟಿ ಸಾಲ ಕೊಡಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಪ್ರಕರಣದ ಹಿನ್ನೆಲೆ: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮತದಲ್ಲಿ ನಕಲಿ ಖಾತೆ ಸೃಷ್ಟಿಸಿ, ಯಾವುದೇ ದಾಖಲೆ ಇಲ್ಲದೇ ಸಾಲ ಮಂಜೂರು ಮಾಡಲಾಗಿದೆ. ಬ್ಯಾಂಕ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ₹1,556 ಕೋಟಿ ನಷ್ಟ ಉಂಟು ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಸುವಂತೆ ಸಹಕಾರ ಸೊಸೈಟಿಗಳ ರಿಜಿಸ್ಟ್ರಾರ್ ಅವರು 2020ರ ಜನವರಿ 23ರಂದು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ 2020ರ ಫೆಬ್ರವರಿ 29ರಂದು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿತ್ತು.
ರಘುನಾಥ್ ಅವರು ₹105 ಕೋಟಿ ಸಾಲ ಪಡೆದಿದ್ದು, ₹139.85 ಕೋಟಿ ಪಾವತಿಸಬೇಕಿದೆ ಎಂದು 2022ರ ಜೂನ್ 28ರಂದು ಅವರನ್ನು ಇ ಡಿ ಬಂಧಿಸಿತ್ತು. ಸಮೃದ್ಧಿ ಎಂಟರ್‌ಪ್ರೈಸಸ್‌ಗೆ ರಘುನಾಥ್ ಅವರು ₹46 ಕೋಟಿ ಪಾವತಿಸಿದ್ದು, ಇದಕ್ಕೆ ಯಾವುದೇ ದಾಖಲೆ ಒದಗಿಸಿಲ್ಲ. 2022ರ ಜುಲೈ 28ರಂದು ವಿಚಾರಣಾ ನ್ಯಾಯಾಲಯವು ರಘುನಾಥ್ ಅವರ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ರಘುನಾಥ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, 2022ರ ಸೆಪ್ಟೆಂಬರ್ 30ರಂದು ಅದು ವಜಾಗೊಂಡಿತ್ತು. ಈ ಬಾರಿ ಹೆಚ್ಚಿನ ಕಾರಣಗಳ ಮೇಲೆ ಮತ್ತೆ ರಘುನಾಥ್ ಜಾಮೀನು ಕೋರಿದ್ದನ್ನು ಹೈಕೋರ್ಟ್ ಮಾನ್ಯ ಮಾಡಿದೆ.