Kashi Vishwanath Gyan Vapi, Supreme Court
Kashi Vishwanath Gyan Vapi, Supreme Court 
ಸುದ್ದಿಗಳು

ಜ್ಞಾನವಾಪಿ ಶಿವಲಿಂಗ ಆಕೃತಿಯ ವೈಜ್ಞಾನಿಕ ಪರೀಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಮುಸ್ಲಿಂ ಪಕ್ಷಕಾರರು

Bar & Bench

ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆ ವೇಳೆ ಪತ್ತೆಯಾದ ವಸ್ತು ಶಿವಲಿಂಗವೇ ಅಥಾವಾ ಕಾರಂಜಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ಪರೀಕ್ಷೆ ನಡೆಸಲು ಅವಕಾಶ ನೀಡಿದ ಅಲಾಹಾಬಾದ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಮುಸ್ಲಿಂ ಪಕ್ಷಕಾರರನ್ನು ಪ್ರತಿನಿಧಿಸುವ ಹಿರಿಯ ನ್ಯಾಯವಾದಿ ಹುಝೆಫಾ ಅಹ್ಮದಿ ಅವರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠದೆದುರು ಪ್ರಕರಣವನ್ನು ಪ್ರಸ್ತಾಪಿಸಿದರು.

ಅಂಜುಮನ್ ಇಂತೆಝಾಮಿಯಾ ಮಸೀದಿಯ ನಿರ್ವಹಣಾ ಸಮಿತಿಯು ಪ್ರಕರಣದ ವಿಚಾರಣಾರ್ಹತೆಯ ಕುರಿತು ವಾರಾಣಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಇನ್ನೂ ಬಾಕಿ ಉಳಿದಿರುವಂತೆಯೇ, ಕಾರ್ಬನ್ ಡೇಟಿಂಗ್ ಪರೀಕ್ಷೆ  ಆದೇಶಕ್ಕೆ  ನ್ಯಾಯಾಲಯ ಅನುಮತಿ ನೀಡಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣವನ್ನು ನಾಳೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿದೆ.

ಮೇ 12 ರಂದು ನೀಡಿದ ಆದೇಶದಲ್ಲಿ, ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಿಶ್ರಾ-I ಅವರಿದ್ದ ಪೀಠ ಈ ನಿರ್ಧಾರಕ್ಕೆ ಬಂದಿತ್ತು.

“(ಮಸೀದಿಯ) ಸ್ಥಳ/ ಶಿವಲಿಂಗಕ್ಕೆ ಹಾನಿಯಾಗದ ರೀತಿಯಲ್ಲಿ ವೈಜ್ಞಾನಿಕ ಪರೀಕ್ಷೆ ಮಾಡಬಹುದು ಎಂದು ಸಾರನಾಥ ವಾರಣಾಸಿ ವಲಯದ ಪುರಾತತ್ವ ಇಲಾಖೆ ಅಧೀಕ್ಷಕರು ಸಲ್ಲಿಸಿರುವ ವರದಿ ಹೇಳಿರುವುದು ಪರೀಕ್ಷೆಯನ್ನು ಕಾರ್ಯಸಾಧ್ಯವೂ ಮತ್ತು ಅನುಕೂಲಕರವೂ ಆಗಿಸಿದೆ ಎಂದು ತಿಳಿಸಲು ನ್ಯಾಯಾಲಯಕ್ಕೆ ಯಾವುದೇ ಹಿಂಜರಿಕೆ ಇಲ್ಲ. ಆ ಮುಖಾಂತರ ಶಿವಲಿಂಗದ ನೈಜ ಸ್ಥಳ ಸಂರಕ್ಷಿತವಾಗಿರಬೇಕು ಎಂಬ ವಿಚಾರವು ಪಾಲನೆಯಾಗಲಿದೆ” ಎಂದು ಹೈಕೋರ್ಟ್‌ ಹೇಳಿತ್ತು.   

ಹೈಕೋರ್ಟ್ ಹಿಂದೂ ಪಕ್ಷಕಾರರ ಪರವಾಗಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.