Kashi Vishwanath Gyan Vapi, Supreme Court
Kashi Vishwanath Gyan Vapi, Supreme Court  
ಸುದ್ದಿಗಳು

ಜ್ಞಾನವಾಪಿ ಪ್ರಕರಣ: ಮುಸ್ಲಿಂ ಪಕ್ಷಕಾರರು ಕೋರಿದ್ದ ಪರಿಹಾರ, ಹಿಂದೂ ಪಕ್ಷಕಾರರ ಮನವಿ ಎರಡನ್ನೂ ನಿರಾಕರಿಸಿದ ಸುಪ್ರೀಂ

Bar & Bench

ವಾರಾಣಸಿ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಲು ಕೋರ್ಟ್‌ ಕಮಿಷನರ್‌ ನೇಮಿಸಿದ್ದನ್ನು ಎತ್ತಿ ಹಿಡಿದಿದ್ದ ಅಲಾಹಾಬಾದ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಲು ಸುಪ್ರೀಂ ಕೋರ್ಟ್‌ ಗುರುವಾರ ನಿರಾಕರಿಸಿದ್ದು ಆದೇಶ 7 ನಿಯಮ 11ರ ಕುರಿತು ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡುವ ಆದೇಶಕ್ಕಾಗಿ ಕಾಯುವುದಾಗಿ ತಿಳಿಸಿದೆ.

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯಕಾಂತ್ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಪೀಠ “ಪ್ರಕರಣವನ್ನು ಜಿಲ್ಲಾ ನ್ಯಾಯಾಧೀಶರಿಗೆ ಈಗಾಗಲೇ ವರ್ಗಾಯಿಸಿದ್ದು ಮನವಿಗೆ ಅವಕಾಶ ನೀಡಿದ್ದೇವೆ. ನ್ಯಾಯಾಧೀಶರು ಆದೇಶ 7 ನಿಯಮ 11 ಅನ್ನು (ಮನವಿಯೊಂದನ್ನು ತಿರಸ್ಕರಿಸಲು ಇರುವ ನಿಯಮ) ಎತ್ತಿ ಹಿಡಿದರೆ, ನಂತರ ಮೊಕದ್ದಮೆ ಇಲ್ಲವಾಗಲಿದೆ ಆದರೆ ಅವರು ಎತ್ತಿ ಹಿಡಿಯದಿದ್ದರೆ ನಂತರ ಕಮಿಷನರ್ ವರದಿಯಂತಹ ಸಾಕ್ಷ್ಯದ ವಿಚಾರ ಬರುತ್ತದೆ. ಅಲ್ಲಿಯವರೆಗೂ ಈ ಪ್ರಕರಣವನ್ನು ಏಕೆ ಜೀವಂತವಾಗಿಡಬೇಕು” ಎಂದು ನ್ಯಾಯಾಲಯ ಪ್ರಶ್ನಿಸಿತು.

ಕೋರ್ಟ್‌ ಕಮಿಷನರ್‌ ನಡೆಸಿದ್ದ ಸಮೀಕ್ಷೆ ವೇಳೆ ಕಂಡು ಬಂದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಕ್ಕು ನೀಡುವಂತೆ ಕೋರಿ ಹಿಂದೂ ಕಕ್ಷಿದಾರರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು.

ಹಿಂದೂ ಪಕ್ಷಕಾರರ ಪರ ವಕೀಲರನ್ನು ಉದ್ದೇಶಿಸಿ ನ್ಯಾ ಚಂದ್ರಚೂಡ್‌ "ಇದು ಅರ್ಜಿದಾರರು ವೈಯಕ್ತಿಕವಾಗಿ ಸಲ್ಲಿಸಿದ ಪಿಐಎಲ್‌. ಅಂತಹ ಮನವಿಯನ್ನು ಹೇಗೆ ಪರಿಗಣಿಸಲು ಸಾಧ್ಯ? ನೀವು 32 ನೇ ವಿಧಿಯ ಅಡಿಯಲ್ಲಿ ಹೇಗೆ ಅರ್ಜಿ ಸಲ್ಲಿಸುತ್ತೀರಿ? ನೀವು ಇಷ್ಟು ಅನುಭವಿ ವಕೀಲರಿದ್ದೀರಿ, ನಿಮ್ಮ ಪರಿಹಾರಗಳನ್ನು ಮೊಕದ್ದಮೆಯ ಮೂಲಕ ಕಂಡುಕೊಳ್ಳಿ ... ನೀವು ಈ ಸಮಸ್ಯೆಗಳನ್ನು ವಿಚಾರಣಾ ನ್ಯಾಯಾಲಯದ ಮುಖೇನ ಪರಿಹರಿಸಿಕೊಳ್ಳಬೇಕೆ ವಿನಾ ಸಂವಿಧಾನದ 32ನೇ ವಿಧಿಯಡಿ ಅಲ್ಲ” ಎಂದರು.

ಹಿನ್ನೋಟ

ಮಸೀದಿಯ ಸ್ಥಳ ಪರಿಶೀಲನೆ, ವೀಡಿಯೊಗ್ರಫಿಗೆ ಅವಕಾಶ ನೀಡುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಕಳೆದ ಏಪ್ರಿಲ್‌ನಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಆದರೆ ಕೋರ್ಟ್‌ ಕಮಿಷನರ್‌ ಪೂರ್ವಾಗ್ರಹಪೀಡಿತರಾಗಿ ಸಮೀಕ್ಷೆ ನಡೆಸಿದ್ದಾರೆ ಅವರನ್ನು ಬದಲಿಸಬೇಕು ಎಂದು ಮಸೀದಿ ಸಮಿತಿ ಕೆಳ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ಇದನ್ನು ನ್ಯಾಯಾಲಯ ಪುರಸ್ಕರಿಸದೆ ಸಮೀಕ್ಷೆಗೆ ದಾರಿ ಮಾಡಿಕೊಟ್ಟಿತ್ತು. ನ್ಯಾಯಾಲಯದ ಆದೇಶ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ವಾರಾಣಸಿಯ ಸಿವಿಲ್‌ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮೇ ತಿಂಗಳಲ್ಲಿ ಉತ್ತರ ಪ್ರದೇಶ ನ್ಯಾಯಾಂಗ ಸೇವೆಗಳ ಹಿರಿಯ ಮತ್ತು ಅನುಭವಿ ನ್ಯಾಯಾಂಗ ಅಧಿಕಾರಿಗೆ ವರ್ಗಾಯಿಸಿತ್ತು. ಹಾಗೆ ಆದೇಶ ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಸಮೀಕ್ಷೆ ವೇಳೆ ದೊರೆತಿದೆ ಎಂದು ಹೇಳಲಾದ ಶಿವಲಿಂಗವನ್ನು ಸಂರಕ್ಷಿಸಬೇಕು ಎಂದಿತು. ಅಷ್ಟೇ ಅಲ್ಲ ಮುಸ್ಲಿಮರು ಮಸೀದಿ ಪ್ರವೇಶಿಸಲು ವಾರಾಣಸಿ ನ್ಯಾಯಾಲಯ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿತು. ಜೊತೆಗೆ ಕಕ್ಷಿದಾರರೊಂದಿಗೆ ಸಮಾಲೋಚಿಸಿ ಮಸೀದಿಯಲ್ಲಿ ವಝುಗೆ (ಪ್ರಾರ್ಥನೆ ಸಲ್ಲಿಸುವ ಮೊದಲು ಕಾಲು ಮತ್ತು ಕೈಗಳನ್ನು ತೊಳೆಯುವುದು) ಸೂಕ್ತ ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.