Gyanvapi 
ಸುದ್ದಿಗಳು

[ಜ್ಞಾನವಾಪಿ] ಸಮೀಕ್ಷಾ ವರದಿಗೆ ಆಕ್ಷೇಪಣೆ ಆಹ್ವಾನಿಸಿದ ವಾರಾಣಸಿ ನ್ಯಾಯಾಲಯ: ಅರ್ಜಿ ನಿರ್ವಹಣೆಯ ವಿಚಾರಣೆ ಮೇ 26ಕ್ಕೆ

ಹಿಂದೂ ಪಕ್ಷಕಾರರ ಮೊಕದ್ದಮೆಯ ವಿಚಾರಣಾರ್ಹತೆ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಿವಿಲ್ ಪ್ರಕ್ರಿಯಾ ಸಂಹಿತೆಯ ಅಡಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಮೇ 26ರಂದು ಆಲಿಸಲಿದೆ.

Bar & Bench

ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಕಮಿಷನರ್‌ ಸಲ್ಲಿಸಿದ್ದ ಸಮೀಕ್ಷಾ ವರದಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ವಾರಾಣಸಿ ನ್ಯಾಯಾಲಯ ಪ್ರಕರಣದ ಕಕ್ಷೀದಾರರಿಗೆ ಸೂಚಿಸಿದೆ.

ಹಿಂದೂ ಪಕ್ಷಕಾರರ ಮೊಕದ್ದಮೆಯ ವಿಚಾರಣಾರ್ಹತೆ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಿವಿಲ್ ಪ್ರಕ್ರಿಯಾ ಸಂಹಿತೆಯ (ಸಿಪಿಸಿ) ಆದೇಶ VII ನಿಯಮ 11ರ ಅಡಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಮೇ 26ರಂದು ಆಲಿಸಲಿದೆ.

ಪ್ರಕರಣವನ್ನು ಈ ಹಿಂದೆ ಆಲಿಸಿದ್ದ ವಾರಾಣಸಿಯ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರು ಕೋರ್ಟ್‌ ಕಮಿಷನರ್‌ ಸಮೀಕ್ಷಾ ವರದಿಗೆ ಸಂಬಂಧಿಸಿದಂತೆ ಮೇ 19, 2022 ರಂದು ಹೊರಡಿಸಿದ್ದ ಆದೇಶದಲ್ಲಿ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು ಈ ಆದೇಶ ಪ್ರಸ್ತುತ ಜಾರಿಯಲ್ಲಿದೆ. ಹೀಗಾಗಿ ಕಕ್ಷೀದಾರರು ಏಳು ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಾ. ಎ ಕೆ ವಿಶ್ವೇಶ ಅವರು ಈ ಕುರಿತು ಸ್ಪಷ್ಟನೆ ನೀಡಿ ಆದೇಶ ಹೊರಡಿಸಿದ್ದಾರೆ.

ಮಸೀದಿಯ ಕುರಿತಾದ ವ್ಯಾಜ್ಯದ ನಿರ್ವಹಣೆಯನ್ನು ಪ್ರಶ್ನಿಸಿ ಮುಸ್ಲಿಂ ಕಕ್ಷಿದಾರರು ಸಲ್ಲಿಸಿದ ಅರ್ಜಿಯ ವಿಚಾರಣೆ ಆರಂಭಿಸುವುದಕ್ಕೂ ಮುನ್ನ, ಮಸೀದಿಯ ಸಮೀಕ್ಷೆ ನಡೆಸಿರುವ ಕೋರ್ಟ್‌ ಕಮಿಷನರ್‌ ವರದಿಯನ್ನು ಪರಿಗಣಿಸಿ ಅದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು ಎಂದು ಹಿಂದೂ ಪಕ್ಷಕಾರರು ನಿನ್ನೆ ಅರ್ಜಿ ಸಲ್ಲಿಸಿದ್ದರು.

ಜ್ಞಾನವಾಪಿ ಮಸೀದಿ ಹಿಂದೂ ದೇವಾಲಯವಾಗಿದ್ದು ಅಲ್ಲಿ ಹಿಂದೂ ದೈವಗಳ ಮೂರ್ತಿಯ ಕುರುಹುಗಳಿವೆ. ಹೀಗಾಗಿ ಆವರಣದೊಳಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಕೋರಿ ಹಿಂದೂ ಭಕ್ತರು ಕೋರಿದ್ದರು.

ರಾಮ ಜನ್ಮಭೂಮಿ ಆಂದೋಲನ ಉತ್ತುಂಗದಲ್ಲಿದ್ದಾಗ ಜಾರಿಗೆ ಬಂದ ಆರಾಧನಾ ಸ್ಥಳಗಳ ಕಾಯಿದೆಯು ದೇಶದ ಸ್ವಾತಂತ್ರ್ಯ ಬಂದ ದಿನ, ಅಂದರೆ 1947ರ ಆಗಸ್ಟ್‌ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು ಎಂದು ತಿಳಿಸುತ್ತದೆ ಎಂಬ ನೆಲೆಯಲ್ಲಿ ಮುಸ್ಲಿಂ ಪಕ್ಷಕಾರರು ಹಿಂದೂ ಪಕ್ಷಕಾರರ ಅರ್ಜಿಯನ್ನು ಪ್ರಶ್ನಿಸಿದ್ದರು.

ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದ ಎಬ್ಬಿಸುವ ಪ್ರಕರಣಗಳನ್ನು ನ್ಯಾಯಾಲಯಗಳು ಪುರಸ್ಕರಿಸದಂತೆ ಕಾಯಿದೆಯ ಸೆಕ್ಷನ್‌ 4 ನಿರ್ಬಂಧ ವಿಧಿಸುತ್ತದೆ.