ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆಯ ಸಂದರ್ಭದಲ್ಲಿ ಕಂಡುಬಂದ ಶಿವಲಿಂಗದ ಕಾರ್ಬನ್ ಡೇಟಿಂಗ್ (ವಸ್ತುವೊಂದರ ವಯಸ್ಸನ್ನು ನಿರ್ಧರಿಸಲು ಕೈಗೊಳ್ಳಲಾಗುವ ಇಂಗಾಲಾಂಶದ ಕುರಿತಾದ ಪರೀಕ್ಷೆ) ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ನಿರ್ದೇಶನಗಳನ್ನು ನೀಡಲು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ವಾರಾಣಸಿ ನ್ಯಾಯಾಲಯ ಮುಸ್ಲಿಂ ಪಕ್ಷಕಾರರ ಪ್ರತಿಕ್ರಿಯೆ ಕೇಳಿದೆ [ಶ್ರೀಮತಿ. ರಾಖಿ ಸಿಂಗ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಮುಂದಿನ ವಿಚಾರಣೆಗೆ ಸಿದ್ಧವಾಗಲು ಎಂಟು ವಾರಗಳ ಕಾಲಾವಕಾಶ ಕೋರಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಜಿಲ್ಲಾ ನ್ಯಾಯಾಧೀಶರಾದ ಡಾ. ಎ ಕೆ ವಿಶ್ವೇಶ ಅವರು ಸೆಪ್ಟೆಂಬರ್ 29, 2022 ರಂದು ಅರ್ಜಿಯನ್ನು ನಿರ್ಧರಿಸುವುದಾಗಿ ಹೇಳಿದರು.
ಈ ಸ್ಥಳದಲ್ಲಿ ಪತ್ತೆಯಾದ ಶಿವಲಿಂಗ ಹಿಂದೂಗಳ ಆರಾಧನೆಯ ವಸ್ತುವಾಗಿದ್ದು ಪ್ರಾಚೀನ ಕಾಲದಿಂದಲೂ ವಿವಾದಿತ ಆವರಣದಲ್ಲಿದೆ ಎಂದು ನಂಬಲಾಗಿದೆ. ಸಂಪೂರ್ಣ ನ್ಯಾಯಕ್ಕಾಗಿ ಮತ್ತು ಹೆಚ್ಚಿನ ಸಂಖ್ಯೆಯ ಶಿವನ ಆರಾಧಕರಿಗೆ ಪರಿಹಾರ ಒದಗಿಸಿಕೊಡುವ ಸಲುವಾಗಿ ಶಿವಲಿಂಗದ ಸ್ವರೂಪ ಮತ್ತು ಕಾಲಮಾನವನ್ನು ಪತ್ತೆ ಮಾಡಲು ಎಎಸ್‌ಐಗೆ ನಿರ್ದೇಶನ ನೀಡುವುದು ಸೂಕ್ತ ಎಂದು ಅರ್ಜಿದಾರರು ವಾದಿಸಿದರು.
ಈ ಹಿನ್ನೆಲೆಯಲ್ಲಿ ಸಂಪೂರ್ಣ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಮತ್ತು ಹೆಚ್ಚಿನ ಸಂಖ್ಯೆಯ ಶಿವನ ಆರಾಧಕರಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಶಿವಲಿಂಗದ ಸ್ವರೂಪ ಮತ್ತು ಅದರ ಪುರಾತನತೆಯನ್ನು ಪತ್ತೆ ಮಾಡುವಂತೆ ನ್ಯಾಯಾಲಯವು ಎಎಸ್‌ಐಗೆ ನಿರ್ದೇಶನ ನೀಡುವುದು ಅಗತ್ಯವಾಗಿದೆ ಎಂದು ವಾದಿಸಲಾಯಿತು.
"ಪ್ರಕರಣದಲ್ಲಿ ಸರಿಯಾದ ತೀರ್ಪು ನೀಡುವುದಕ್ಕಾಗಿ ಶಿವಲಿಂಗದ ಉದ್ದ, ಅಗಲ, ಎತ್ತರ, ಪ್ರಾಚೀನತೆ ಹಾಗೂ ಘಟಕಗಳ ಬಗ್ಗೆ ವೈಜ್ಞಾನಿಕ ತನಿಖೆ ನಡೆಸುವುದು ಅವಶ್ಯಕ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.