Allahabad High Court with Gyanvapi Mosque
Allahabad High Court with Gyanvapi Mosque 
ಸುದ್ದಿಗಳು

ಜ್ಞಾನವಾಪಿ ಪ್ರಕರಣ: ಎಎಸ್ಐ ಸಮೀಕ್ಷೆ ಪ್ರಶ್ನಿಸಿದ್ದ ಮುಸ್ಲಿಂ ಪಕ್ಷಕಾರರ ಮನವಿ ತಿರಸ್ಕರಿಸಿದ ಅಲಾಹಾಬಾದ್ ಹೈಕೋರ್ಟ್

Bar & Bench

ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಅವಕಾಶ ನೀಡಿದ್ದ ವಾರಾಣಸಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಅವರು ಬುಧವಾರ ಆದೇಶ ಹೊರಡಿಸಿದ್ದು, ನ್ಯಾಯದ ಹಿತದೃಷ್ಟಿಯಿಂದ ವೈಜ್ಞಾನಿಕ ಸಮೀಕ್ಷೆ ಮಹತ್ವದ್ದಾಗಿದೆ ಎಂದಿದ್ದಾರೆ.

ವೈಜ್ಞಾನಿಕ ಸಮೀಕ್ಷೆಗೆ ತಾನು ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಆಗಸ್ಟ್ 3ರವರೆಗೆ ಸುಪ್ರೀಂ ಕೋರ್ಟ್ ವಿಸ್ತರಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಜುಲೈ 21ರಂದು ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ ಕೆ ವಿಶ್ವೇಶ ಅವರು ಎಎಸ್‌ಐ ಸಮೀಕ್ಷೆಗೆ ಅನುಮತಿ ನೀಡಿದ್ದರು.

ನಂತರ ಮುಸ್ಲಿಂ ಪಕ್ಷಕಾರರು ಇದರ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಜುಲೈ 26ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು. ಜೊತೆಗೆ ಜಿಲ್ಲಾ ನ್ಯಾಯಾಧೀಶರ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಮುಸ್ಲಿಂ ಪಕ್ಷಕಾರರಿಗೆ ಸೂಚಿಸಿತ್ತು. ಬಳಿಕ ಮುಸ್ಲಿಂ ಪಕ್ಷಕಾರರು ಹೈಕೋರ್ಟ್‌ಗೆ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.

ಜ್ಞಾನವಾಪಿ ಮಸೀದಿಯು ಹಿಂದೂ ದೇವಾಲಯ ಎಂದು ಹಿಂದೂ ಭಕ್ತರು ಪ್ರತಿಪಾದಿಸಿದ್ದರು. ಮಸೀದಿಯೊಳಗೆ ಪೂಜೆ ಮಾಡುವ ಹಕ್ಕು ಕೋರಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.