ಅಲಾಹಾಬಾದ್ ಹೈಕೋರ್ಟ್ ಮತ್ತು ಜ್ಞಾನವಾಪಿ ಮಸೀದಿ / ವಿವಾದ 
ಸುದ್ದಿಗಳು

ಜ್ಞಾನವಾಪಿ ಪ್ರಕರಣ: ಮಾಧ್ಯಮಗಳೊಂದಿಗೆ ಚರ್ಚಿಸುವ ವಕೀಲರು, ದಾವೆದಾರರ ನಡೆಗೆ ಅಲಾಹಾಬಾದ್ ಹೈಕೋರ್ಟ್ ಆಕ್ಷೇಪ

ಒಂದೇ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗುವ ಅನೇಕ ಮೊಕದ್ದಮೆಗಳು ಪ್ರಕರಣವನ್ನು ಜಟಿಲಗೊಳಿಸುತ್ತಿವೆ ಎಂದು ಕೂಡ ಪೀಠ ಮೌಖಿಕವಾಗಿ ತಿಳಿಸಿತು.

Bar & Bench

ಜ್ಞಾನವಾಪಿ ಮಸೀದಿ - ಕಾಶಿ ವಿಶ್ವನಾಥ ದೇವಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಕರಣದ ವಕೀಲರು, ದಾವೆದಾರರು ಮಾಧ್ಯಮಗಳೊಂದಿಗೆ ಚರ್ಚಿಸುವುದಕ್ಕೆ ಅಲಾಹಾಬಾದ್ ಹೈಕೋರ್ಟ್ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇದ್ದು ಹೇಳಿಕೆಗಳನ್ನು ನೀಡದಂತೆ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ವಕೀಲರು ಮತ್ತು ದಾವೆದಾರರನ್ನು ಒತ್ತಾಯಿಸಿದರು.

"ನನ್ನದೊಂದು ವಿನಂತಿ ಇದೆ. ನೀವು ಮಾಧ್ಯಮ ಅಥವಾ ಟಿವಿಗಳಿಗೆ ಹೇಳಿಕೆ ನೀಡಬೇಡಿ. ಪ್ರಕರಣದ ತೀರ್ಪು ಹೊರಬಂದ ಬಳಿಕ ಹೇಳಿಕೆ ನೀಡಬಹುದು. ಪ್ರಕರಣ ನ್ಯಾಯಾಲಯದಲ್ಲಿದ್ದಾಗ ಆ ಕುರಿತು (ಹೊರಗೆ) ಚರ್ಚಿಸಬಾರದು. ನಿಮ್ಮ ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗೆ ಮಾಡದಂತೆ ಅವರಿಗೆ ತಿಳಿಸಿ" ಎಂದು ನ್ಯಾಯಮೂರ್ತಿಗಳು ಹೇಳಿದರು.

ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸಲು ಅನುಮತಿಸಿದ ಜನವರಿ 31ರ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಂಜುಮಾನ್‌ ಇಂತೆಜಾಮೀಯಾ ಮಸೀದಿ ಸಮಿತಿ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಈ ವಿಚಾರ ತಿಳಿಸಿದರು.

ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್‌

ಒಂದೇ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗುವ ಅನೇಕ ಮೊಕದ್ದಮೆಗಳು ಪ್ರಕರಣವನ್ನು ಜಟಿಲಗೊಳಿಸುತ್ತಿವೆ ಎಂದು ಕೂಡ ಪೀಠ ಮೌಖಿಕವಾಗಿ ತಿಳಿಸಿತು.

1993ರಲ್ಲಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸರ್ಕಾರ ತಡೆಯುವುದಕ್ಕೂ ಮುನ್ನ ಮಸೀದಿಯ ನೆಲಮಾಳಿಗೆಯಲ್ಲಿ ಸೋಮನಾಥ್‌ ವ್ಯಾಸ್‌ ಅವರು ಹಿಂದೂ ದೈವಗಳಿಗೆ ಪೂಜೆ ಸಲ್ಲಿಸುತ್ತಿದ್ದರು ಎಂಬ ಹಿಂದೂ ದಾವೆದಾರರ ಹೇಳಿಕೆಯ ಕಾಲಾವಧಿಯನ್ನು ನ್ಯಾಯಾಲಯ ಪ್ರಶ್ನಿಸಿತು.

"1993ರ ಘಟನೆಯ ನಂತರ ಸೋಮನಾಥ್ ವ್ಯಾಸ್ 1991ರ ಮೊಕದ್ದಮೆಯನ್ನು ತಿದ್ದುಪಡಿ ಮಾಡಿದ್ದಾರೆಯೇ? ... ನಿಮ್ಮ ಹಕ್ಕು (ಸೋಮನಾಥ ವ್ಯಾಸ) ಮುಗಿದುಹೋಗಿದೆ, ಹಾಗಾದರೆ ಮೊಕದ್ದಮೆಯ ನಿರ್ವಹಣೆ ಹೇಗೆ ಸಾಧ್ಯವಾಗುತ್ತದೆ? ಆರೋಪಗಳು ರಾಜ್ಯ ಸರ್ಕಾರದ ವಿರುದ್ಧವಾಗಿವೆ, ಆದರೆ ಅದು ದಾವೆಯಲ್ಲಿ ಭಾಗಿಯಾಗಿಲ್ಲ. ನಿಮ್ಮ ಮೊಕದ್ದಮೆಗಳು ವಿಷಯವನ್ನು ಸಂಕೀರ್ಣಗೊಳಿಸುತ್ತಿವೆ. ಮೂಲ ವಿಚಾರದ ಕುರಿತು ನಿರ್ಧರಿಸಲಾಗುತ್ತಿಲ್ಲ. ಇದೆಲ್ಲವೂ (ವಿವಿಧ ಅರ್ಜಿಗಳನ್ನು ಸಲ್ಲಿಸುವುದು) ಪ್ರಚಾರದ ಸ್ಟಂಟ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟು ಮೊಕದ್ದಮೆಗಳು ಬಾಕಿ ಉಳಿದಿವೆ? ಈ ಎಲ್ಲಾ ಸಮಸ್ಯೆಗಳನ್ನು ಒಟ್ಟುಗೂಡಿಸಬೇಕು" ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

"ತಪ್ಪು ನಿರಂತರವಾಗಿ ನಡೆಯುತ್ತಿದೆ. ಅದಕ್ಕಾಗಿಯೇ ಹೊಸ ದಾವೆ ಹೂಡಲಾಗಿದೆ" ಎಂದು ಹಿಂದೂ ಪರವಾಗಿ ಹಾಜರಾದ ವಕೀಲ ವಿಷ್ಣು ಜೈನ್ ಪ್ರತಿಪಾದಿಸಿದರು.

ಈ ಮಧ್ಯೆ, ಮಸೀದಿ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ಎಸ್ಎಫ್ಎ ನಖ್ವಿ, ಮಸೀದಿಯ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಹಿಂದೂಗಳ ವಾದವನ್ನು ವಿರೋಧಿಸಿದರು. ಮುಸ್ಲಿಮರು ಯಾವಾಗಲೂ ಮಸೀದಿಯ ಕಟ್ಟಡದ ಮೇಲೆ ಹಿಡಿತ ಹೊಂದಿದ್ದರು ಎಂದು ಅವರು ಪ್ರತಿಪಾದಿಸಿದರು.

ಪ್ರಕರಣ ನಾಳೆ (ಬುಧವಾರ) ಮತ್ತೆ ವಿಚಾರಣೆಗೆ ಬರಲಿದೆ.